ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರೇಮಕ್ಕೆ ಕುರುಡಾದ ರಘು ಮದ್ವೆಯಾಗ್ತೀನಿ ಎಂದಳೀಕೆ! (Raghu | Anushka | S. Narayan | Nenapideya O Gelathi)
PR
PR
ಪ್ರೀತಿಸಿದ ಹುಡುಗಿ ಮೋಸಮಾಡಿದ್ದೂ ಅಲ್ಲದೆ, ತನ್ನ ಅಪ್ಪ ಮತ್ತು ಅಣ್ಣನಿಂದ ಪ್ರಿಯಕರನ ಕಣ್ಣನ್ನೂ ಕೀಳಿಸಿ ಅಮಾನವೀಯವಾಗಿ ನಡೆದುಕೊಂಡ 'ರಘು ಕಣ್ಣುಕಿತ್ತ ಪ್ರಕರಣ'ದ ಕುರಿತು ಚಿತ್ರ ತೆಗೆಯಲು ಹೊರಟಿದ್ದ ನಿರ್ದೇಶಕ ಎಸ್. ನಾರಾಯಣ್ ಎಲ್ಲ ಸಿದ್ಧತೆಗಳು ನಡೆಸುತ್ತಿದ್ದಂತೆಯೇ ಇತ್ತ ಕಥೆ ಮತ್ತೊಂದು ತಿರುವು ಪಡೆದುಕೊಂಡಿದೆ.

ಕುರುಡು ಪ್ರೀತಿಯ ಬಲೆಯಲ್ಲಿ ಬಿದ್ದು ತನ್ನ ಬಾಳನ್ನೇ ಕತ್ತಲಾಗಿಸಿಕೊಂಡಿದ್ದ ಜಿಮ್ ಮಾಸ್ಟರ್ ರಘು ಜೀವನದಲ್ಲಿ ಬೆಳಕು ಮೂಡಿಸಲು ಯಾದಗಿರಿಯ ರೇಣುಕಾ ಎಂಬ ಸುಶಿಕ್ಷಿತ ಹೆಣ್ಣೊಬ್ಬಳು ಮುಂದೆ ಬಂದಿದ್ದಾರೆ. ರಘು ಯಾವತ್ತು ಮದುವೆಯಾಗಲು ಬಯಸುತ್ತಾರೋ ಅಲ್ಲಿವರೆಗೂ ನಾನೂ ಮದುವೆಯಾಗದೆ ಕಾಯುತ್ತೇನೆ ಎಂದೂ ಹೇಳುತ್ತಿದ್ದಾರೆ.

ಇತ್ತ ಕಣ್ಣು ಕಳೆದುಕೊಂಡರೂ ಜೀವನದಲ್ಲಿ ಏನಾದರೂ ಸಾಧನೆ ಮಾಡಿ ತೋರಿಸುತ್ತೇನೆ ಎಂದು ಹೊರಟು ಪ್ರೀತಿ, ಪ್ರೇಮ ಸಹವಾಸವೇ ಬೇಡ, ಅವೆಲ್ಲಾ ನಂಬಿಕೆ ದ್ರೋಹ ಮಾಡುವ ನಾಟಕ ಎಂದು ಮನದಲ್ಲೇ ರೋಧಿಸುತ್ತಿರುವ ಯುವಕ ರಘು, ನಿರ್ಧಾರ ತೆಗೆದುಕೊಳ್ಳಲಾಗದೆ ಚಡಪಡಿಸುವ ಸ್ಥಿತಿಯಲ್ಲಿದ್ದಾರೆ.

ಒಂದೆಡೆ ಕಣ್ಣು ಕಳೆದುಕೊಂಡ ರಘುಗೆ ಮಾನವೀಯತೆ ಮೆರೆದ ಅಪಾರ ಜನರು, ಅವರ ನೋವಿನೊಂದಿಗೆ ದನಿಗೂಡಿಸಿದ ಮಾಧ್ಯಮಗಳು, ನೋವಿನಲ್ಲೂ ಬೆನ್ನೆಲುಬಾಗಿ ಜೊತೆಯಲ್ಲೇ ನಿಂತು ಸಲಹುತ್ತಿರುವ ಆತ್ಮೀಯ ಗೆಳೆಯರು. ಮತ್ತೊಂದೆಡೆ ಅಸಹಾಯಕ ತಾಯಿ. ಇವರೆಲ್ಲರೂ ತಾನು ಕಣ್ಣು ಕಳೆದುಕೊಂಡಿದ್ದಾಗ ಒಂದಲ್ಲಾ ಒಂದು ರೀತಿಯಲ್ಲಿ ಸ್ಪಂದಿಸಿದ್ದಾರೆ. ಇವರನ್ನೂ ಕೇಳದೆ ನಿರ್ಧಾರ ತೆಗೆದುಕೊಂಡರೆ ತಪ್ಪಾಗಬಹುದಾ... ಎಂಬ ಗೊಂದಲದಲ್ಲಿರುವ ರಘು, ತುಂಬಾ ಯೋಚಿಸಬೇಕು, ಅದಕ್ಕೆ ತುಂಬಾ ಸಮಯ ಬೇಕಾಗುತ್ತದೆ ಎಂದೆಲ್ಲಾ ಉತ್ತರಿಸುತ್ತಿರುವಂತಿದೆ.

ಇನ್ನೇನು ಜೀವನವೇ ಮುಗಿಯಿತು, ಕಣ್ಣುಕಿತ್ತವರು ಜೀವವನ್ನಾದರೂ ತೆಗೆಯಬಾರದಿತ್ತಾ ಎನ್ನುವಷ್ಟರಲ್ಲೇ ರಘುವಿನ ಬೆಂಬಲಕ್ಕೆ ನಿಂತು ಬದುಕಿಗೆ ಬೆಳಕಾದ ಅಪಾರ ಸಹೃದಯಿಗಳು ಒಂದೆಡೆಯಾದರೆ, ವಂಚಕ ಪ್ರಿಯತಮೆ ಅನುಷ್ಕಾ ಅವರ ನೆನಪನ್ನು ಮರೆಯುವಂತೆ ಮಾಡಿ ಅವರಿಗೆ ಸುಂದರ ಜೀವನ ರೂಪಿಸಲು ಜೀವನ ಸಂಗಾತಿಯಾಗುತ್ತೇನೆ ಎಂದು ಮುಂದೆ ಬಂದಿರುವ ಯುವತಿ ರೇಣುಕಾ ಅವರ ವಿಶಾಲ ಹೃದಯ.

ಇದರ ನಡುವೆ ರಘುವಿನ ಬಗ್ಗೆ 'ನೆನಪಿದೆಯಾ ಓ ಗೆಳತಿ' ಎಂಬ ಚಿತ್ರ ತೆಗೆದು ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಹೊರಟಿರುವ ಎಸ್. ನಾರಾಯಣ್.

ಏನೇನೋ ಗೊಂದಲಗಳ ನಡುವೆ ಸೂಕ್ತ ನಿರ್ಧಾರ ತೆಗೆದು ಕೊಳ್ಳಲಾಗದೆ ಮೌನವಾಗಿರುವ ರಘು ಮತ್ತು ರೇಣುಕಾ ಅವರಿಗೆ ನಿಮ್ಮದೊಂದು ಸಲಹೆ, ಅಭಿಪ್ರಾಯಗಳನ್ನೂ ಸೂಚಿಸಿ. ಬಹುಶಃ, ನಿಮ್ಮ ಸಲಹೆಗಳು ಅವರಂತೆ ಗೊಂದಲ ಅನುಭವಿಸುತ್ತಿರುವ ಇನ್ನೆಷ್ಟೋ ಪ್ರೇಮಿಗಳ ಪ್ರಶ್ನೆಗಳಿಗೆ ಉತ್ತರವಾದೀತು...
ಇವನ್ನೂ ಓದಿ