ವಿಜಯ್ ಅವರು ಹುಟ್ಟಿದ್ದು ಜನವರಿ 20 ರಂದು. ಈ ವರ್ಷ ಹುಟ್ಟುಹಬ್ಬವನ್ನು ಅವರು ರುದ್ರಭೂಮಿಯಲ್ಲಿ ಆಚರಿಸಿಕೊಂಡರು. ಮುಂದಿನ ವರ್ಷ ಹುಟ್ಟುಹಬ್ಬದ ದಿನ ವಿಜಯ್ ಸ್ವತಃ ನಿರ್ಮಾಪಕರಾಗಲಿದ್ದಾರೆ.
ದರ್ಶನ್, ಸುದೀಪ್, ಗಣೇಶ್ ಮುಂತಾದ ಹೀರೋಗಳ ಹಾಗೆ ವಿಜಯ್ ಅವರೂ ತಾವೇ ಒಂದು ಚಿತ್ರ ನಿರ್ಮಿಸಿ ಅದರಲ್ಲಿ ನಾಯಕನಾಗಿ ನಟಿಸುತ್ತಾರೆ.
'ನಾನೇ ನಿರ್ಮಿಸುವ ಚಿತ್ರದಲ್ಲಿ ಯಾವುದೇ ನಿರ್ಬಂಧಗಳಿಲ್ಲದೆ ನನಗೆ ಒಪ್ಪುವ ಹಾಗೆ ಸಿನಿಮಾ ಮಾಡಬಹುದು. ಬೇರೆ ನಿರ್ಮಾಪಕರು ಅನೇಕ ಕಟ್ಟುಪಾಡುಗಳನ್ನು ಹಾಕಿಕೊಂಡಿರುತ್ತಾರೆ. ಇದು ಒಟ್ಟಾರೆಯಾಗಿ ಚಿತ್ರದ ಮೇಲೆ ಪರಿಣಾಮ ಬೀರುತ್ತದೆ. ದೃಶ್ಯವೊಂದಕ್ಕೆ ನೂರು ಸಹ ಕಲಾವಿದರು ಬೇಕಾಗಿದ್ದಾರೆ ಅನ್ನಿ. ನೂರು ಜನ ಯಾಕೆ? ಐವತ್ತು ಜನಾನ ಕರೆಸಿ ಸಾಕು ಎಂದು ನಿರ್ಮಾಪಕರು ಮಾತನಾಡಿಕೊಳ್ಳುವುದನ್ನು ಕೇಳಿದ್ದೇನೆ. ಒಂದು ಒಳ್ಳೇ ಸಿನಿಮಾಕ್ಕೆ ಇವೆಲ್ಲ ಸಹಕಾರಿ ಆಗುವುದಿಲ್ಲ' ಎಂದು ವಿಜಯ್ ಹೇಳುತ್ತಾರೆ.
'ನನ್ನ ಸ್ವಂತ ಸಿನಿಮಾ ಪ್ರಾರಂಭಿಸುವ ಮುನ್ನ ಭರ್ಜರಿ ಕಥೆ ಸೆಲೆಕ್ಟ್ ಮಾಡಬೇಕು. ಒಂದೇ ರೀತಿಯ ಪಾತ್ರವಿರುವ ಕಥೆ ಬೇಡ. ನನಗೆ ಎಂಥ ಕಥೆ ಸೂಕ್ತ ಎಂಬ ಬಗ್ಗೆ ಗೆಳೆಯರೊಂದಿಗೆ ಚರ್ಚೆ ಮಾಡುತ್ತೇನೆ. ರವಿಚಂದ್ರನ್ ಸರ್, ಜಗ್ಗೇಶ್ ಸರ್ ಮುಂತಾದವರ ಹಾಗೆ ವಿಭಿನ್ನ ಪಾತ್ರಗಳಲ್ಲಿ ನಟಿಸಬೇಕು. ಇದು ನನ್ನ ಆಸೆ' ಎಂದರು ವಿಜಯ್.
'ನಾನು ಸ್ವತಃ ನಿರ್ಮಾಪಕನಾದೆ ಅಂದಾಕ್ಷಣ ಬೇರೆ ನಿರ್ಮಾಪಕರನ್ನು ಮರೆಯುವುದಿಲ್ಲ. ಎಂದೆಂದಿಗೂ ಅವರು ನನ್ನ ಅನ್ನದಾತರೇ. ನನಗೆ ಅತಿ ಆಸೆ ಏನಿಲ್ಲ. ನನ್ನ ಮನದಾಳದ ಆಸೆ ತಣಿಸುವಂಥ ಒಂದೇ ಒಂದು ಚಿತ್ರವನ್ನು ತಯಾರಿಸುತ್ತೇನೆ. ಅದನ್ನು ಜನ ಹೇಗೆ ಸ್ವೀಕರಿಸುತ್ತಾರೋ ನೋಡೋಣ. ನಾನು ಚಿತ್ರ ನಿರ್ಮಾಪಕ ಆಗುವೆನೇ ವಿನಾ ನಿರ್ದೇಶಕನಾಗುವ ಸಾಹಸ ಮಾಡುತ್ತಿಲ್ಲ' ಎಂದು ವಿಜಯ್ ಹೇಳಿದರು.