ಹೆಚ್ಚಿಗೆ ಪ್ರಚಾರ ನೀಡದೆ ಇತ್ತೀಚೆಗೆ ಹಸೆಮಣೆ ಏರಿದ್ದ ಮಾದಕ ನಟಿ ಡೈಸಿ ಬೋಪಣ್ಣ, ಬಣ್ಣದ ತೋಕಕ್ಕೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ನಟ ಆದಿತ್ಯ ನಾಯಕನಾಗಿ ನಟಿಸುತ್ತಿರುವ 'ಮಾಸ್' ಚಿತ್ರೀಕರಣ ಈಗಾಗಲೇ ಸಾಕಷ್ಟು ಕೊನೆಯ ಹಂತಕ್ಕೆ ಬಂದಿದ್ದು, ಚಿತ್ರದ ಎರಡು ಹಾಡು ಮಾತ್ರ ಬಾಕಿ ಉಳಿದಿದೆ.
ಜೂನ್ ತಿಂಗಳ ಕೊನೆಯ ವೇಳೆಗೆ ಬ್ಯಾಂಕಾಕ್ನಲ್ಲಿ ಎರಡು ಹಾಡುಗಳ ಚಿತ್ರೀಕರಣ ನಡೆಯಲಿದ್ದು, ಆದಿತ್ಯ ಜತೆ ಡೈಸಿ ಸ್ಪೈಸಿಯಾಗಿ ಹೆಜ್ಜೆ ಹಾಕಲಿದ್ದಾರೆ. ಇವರ ನೃತ್ಯ ನಿರೂಪಣೆಗೆ ಎಲ್ಲಾ ಸಿದ್ಧತೆಗಳನ್ನು ಚಿತ್ರತಂಡ ನಡೆಸುತ್ತಿದೆ.
2010ರ ಡಿಸೆಂಬರ್ನಲ್ಲೇ ಮುಹೂರ್ತ ಕಂಡ 'ಮಾಸ್' ಚಿತ್ರೀಕರಣದ ಎರಡು ಹಾಡು ಮತ್ತು ಕ್ಲೈಮಾಕ್ಸ್ ಸೀನ್ ಹೊರತು ಪಡಿಸಿ ಉಳಿದೆಲ್ಲ ಚಿತ್ರೀಕರಣ ಮುಗಿದಿತ್ತು. ಉಳಿದ ಭಾಗವನ್ನು ಫೆಬ್ರವರಿಯಲ್ಲಿ ಪೂರ್ಣಗೊಳಿಸುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿತ್ತು.
ಆದರೆ ಚಿತ್ರದ ನಿರ್ಮಾಪಕ ಎ. ಗಣೇಶ್ 'ದಂಡಂ ದಶಗುಣಂ' ಚಿತ್ರದ ವಿವಾದದಲ್ಲಿ ಸಿಲುಕಿದ್ದರಿಂದ ತಡವಾಯಿತು. ಅಲ್ಲದೆ, ಸಾಕಷ್ಟು ಹಣಕಾಸಿನ ತೊಡಕು ಕಂಡುಬಂದಿದ್ದು ಕೂಡ ಚಿತ್ರೀಕರಣಕ್ಕೆ ವಿಳಂಬವಾಗಲು ಮತ್ತೊಂದು ಕಾರಣ ಎಂದು ಸಿನಿಮಾ ಆಪ್ತವಲಯ ಹೇಳುತ್ತಿದೆ.
ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಹಿರಿಯ ನಿರ್ಮಾಪಕ ಎ. ಗಣೇಶ್ ಅವರಿಗೆ ಈ ಚಿತ್ರವಾದರೂ ಕೈಹಿಡಿಯಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಡೈಸಿ ಡ್ಯಾನ್ಸು, ಆದಿತ್ಯನ ಖದರು, ಜೆ.ಜಿ. ಕೃಷ್ಣ ಅವರ ನಿರ್ದೇಶನ ಮತ್ತು ಕೆಮರಾ ಕೈಚಲಕ, ಥ್ರಿಲ್ಲರ್ ಮಂಜು ಅವರ ಸಾಹಸ, ರವಿ ಶ್ರೀವತ್ಸ ಅವರ ಡೈಲಾಗ್ ಎಲ್ಲವೂ ಚಿತ್ರವನ್ನು ಯಶಸ್ಸಿನ ಹಾದಿಯಲ್ಲಿ ಸಾಗಿಸುವ ಲಕ್ಷಣ ಹೊಂದಿದೆ.
ಶ್ರೀ ಚಾಮುಂಡೇಶ್ವರಿ ಫಿಲಂಸ್ ಬ್ಯಾನರಿನಡಿಯಲ್ಲಿ 'ಮಾಸ್' ನಿರ್ಮಿಸುತ್ತಿರುವ ನಿರ್ಮಾಪಕ ಗಣೇಶ್ಗೆ ಆ ದೇವರ ಕೃಪೆಯಿರಲೆಂದು ನೀವೂ ಹರಸಿ.