ಎಸ್.ನಾರಾಯಣ್ ಮತ್ತೊಮ್ಮೆ ರೀಮೇಕ್ ಚಿತ್ರಗಳ ಕಡೆಗೆ ವಾಲುತ್ತಾರೆಯೇ? ಹೀಗೊಂದು ಪ್ರಶ್ನೆ ಚಿತ್ರೋದ್ಯಮಿಗಳನ್ನೂ ಒಳಗೊಂಡಂತೆ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ಕಾರಣ ಅವರು ತಮ್ಮ ಮಗನನ್ನು ನಾಯಕನನ್ನಾಗಿಸಿ ನಿರೂಪಿಸಿದ 'ದುಷ್ಟ' ಎಂಬ ಚಿತ್ರವು ಸೋಲುಂಡಿರುವುದು. ಚಿತ್ರಕಥೆಯ ರಚನೆಗೆಂದೇ ಹಲವು ತಿಂಗಳು ವಿನಿಯೋಗಿಸಿ ಕಷ್ಟಪಟ್ಟು 'ಸ್ವಮೇಕ್' ಚಿತ್ರವನ್ನು ರೂಪಿಸಿದ್ದರೂ ಅದಕ್ಕೆ ಜನರಿಂದ ನೀರೀಕ್ಷಿತ ಪ್ರೋತ್ಸಾಹ ಸಿಗದಿರುವುದು ಎಸ್.ನಾರಾಯಣ್ ಅವರ ನಿರಾಶೆಗೆ ಕಾರಣವಾಗಿದೆ ಎಂಬ ಅಂಶವೇ ಈ ಪ್ರಶ್ನೆಗೆ ಕಾರಣ.
'ಚೈತ್ರದ ಪ್ರೇಮಾಂಜಲಿ' ಚಿತ್ರದಂಥ ಸ್ವಮೇಕ್ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದವರು ನಾರಾಯಣ್. ಕನ್ನಡ ಚಲನಚಿತ್ರಗಳು ಹೆಚ್ಚಿಗೆ ಓಡದಿದ್ದ ಬೆಳಗಾವಿಯಂಥ ವಲಯದಲ್ಲಿ ಅವರ ನಿರ್ದೇಶನದ 'ಚಂದ್ರಚಕೋರಿ' ಚಿತ್ರ ಒಂದು ವರ್ಷದವರೆಗೆ ಓಡಿತ್ತು ಹಾಗೂ ಇದರಲ್ಲಿ ಹೊಸ ನಾಯಕ-ನಾಯಕಿ ಇದ್ದರು ಎಂಬ ಅಂಶವನ್ನಿಲ್ಲಿ ನಾವು ಗಮನಿಸಬೇಕು.
ಹಾಗಂತ ಸ್ವತಂತ್ರ ಕಥೆಯ ಚಿತ್ರಕ್ಕೆ ಸಂಬಂಧಿಸಿದಂತೆ ಈ ನಿರಾಶೆ ಅವರಿಗೆ ಆಗುತ್ತಿರುವುದು ಇದೇ ಮೊದಲಬಾರಿಗೆ ಅಲ್ಲ. ಅವರ ಪ್ರತಿಭೆಯನ್ನು ಗಮನಿಸಿದ್ದ ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್ ಅವರು ತಮ್ಮ ನಿರ್ಮಾಣದ 'ಅನುರಾಗದ ಅಲೆಗಳು' ಚಿತ್ರದ ನಿರ್ದೇಶನದ ಸಾರಥ್ಯವನ್ನು ಅವರಿಗೆ ವಹಿಸಿದ್ದರು. ರಾಘವೇಂದ್ರ ರಾಜ್‌ಕುಮಾರ್ ನಾಯಕತ್ವದ ಈ ಚಿತ್ರದಲ್ಲಿ ಎಲ್ಲ ಹಾಡುಗಳು ಸೂಪರ್‌ಹಿಟ್ ಆಗಿದ್ದರೂ ಸಹ ಚಿತ್ರ ಸೋತಿತ್ತು. ಸ್ವತಂತ್ರ ಕಥೆಯ ತಮ್ಮ ಚಿತ್ರವು ಸೋತಾಗ ಬೇಸರಗೊಂಡ ನಾರಾಯಣ್ ಅವರನ್ನು ಸ್ವತಃ ಪಾರ್ವತಮ್ಮನವರೇ ಸಮಾಧಾನ ಮಾಡಿದ್ದರಂತೆ. ಡಾ.ರಾಜ್‌ಕುಮಾರ್ ಅಭಿನಯದ 'ಶಬ್ದವೇಧಿ' ಚಿತ್ರವೂ ನೀರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ ಹಾಗೂ ಅದೂ ಸಹ ವಿಜಯ ಸಾಸನೂರ್ ಬರೆದಿದ್ದ 'ಶಬ್ದವೇಧಿ' ಕಾದಂಬರಿಯನ್ನು ಆಧರಿಸಿತ್ತು ಎಂಬುದಿಲ್ಲಿ ಗಮನಾರ್ಹ ಸಂಗತಿ.
ಎಸ್.ನಾರಾಯಣ್ ಪ್ರತಿಭಾವಂತರೆಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರು ದಾಖಲಿಸಿರುವ ಯಶಸ್ವೀ ಚಿತ್ರಗಳ ಪಟ್ಟಿಯನ್ನು ಗಮನಿಸಿದರೆ ಅದರಲ್ಲಿ ರೀಮೇಕ್ ಚಿತ್ರಗಳೇ ಢಾಳಾಗಿ ಗೋಚರಿಸುತ್ತವೆ ಎಂಬ ಮಾತನ್ನೂ ನಾವು ಮರೆಯುವಂತಿಲ್ಲ. 'ಸೂರ್ಯವಂಶ', 'ಗಲಾಟೆ ಅಳಿಯಂದ್ರು', 'ಚೆಲುವಿನ ಚಿತ್ತಾರ' ಹೀಗೆ ಅವರ ನಿರ್ದೇಶನದ ಸೂಪರ್ ಹಿಟ್ ಚಿತ್ರಗಳೆಲ್ಲಾ ಎರವಲು ಸರಕುಗಳೇ. ಹಾಗಾದರೆ ಅವರು ಎಡವುತ್ತಿರುವುದೆಲ್ಲಿ? ಇದಕ್ಕೆ ಸ್ವತಃ ನಾರಾಯಣ್ ಆತ್ಮಾವಲೋಕನ ಮಾಡಿಕೊಳ್ಳಬೇಕು.
ಅವರು ಮತ್ತೊಮ್ಮೆ ರೀಮೇಕ್ ಚಿತ್ರಗಳ ಕಡೆಗೆ ವಾಲುತ್ತಿರುವುದಕ್ಕೆ ಪುಷ್ಟಿ ನೀಡುವ ಸುದ್ದಿಯೊಂದು ಹೊರಬಿದ್ದಿದೆ. 'ಮೈನಾ' ಎಂಬ ತಮಿಳಿನ ಸೂಪರ್ ಹಿಟ್ ಚಿತ್ರವನ್ನು ಕೆ.ಮಂಜು ನಿರ್ಮಿಸಲು ಮುಂದಾಗಿದ್ದು, ಅವರ ನಿರ್ದೇಶನದ ಸಾರಥ್ಯವನ್ನು ನಾರಾಯಣ್ ಹೊರಲಿದ್ದಾರಂತೆ. 'ಚೆಲುವಿನ ಚಿತ್ತಾರ' (ಮೂಲ ತಮಿಳು ಚಿತ್ರ: 'ಕಾದಲ್') ಚಿತ್ರದ ರೀತಿಯಲ್ಲಿಯೇ ಇದೂ ಸಹ ಹಸಿ ಹಸಿ ಪ್ರೇಮಕಥೆಯನ್ನು ಒಳಗೊಂಡಿರುವುದರಿಂದ ಹಾಗೂ ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್-ಎಸ್.ನಾರಾಯಣ್‌ರ ಸಮಾಗಮ ಮತ್ತೊಮ್ಮೆ ಆಗಲಿರುವುದರಿಂದ ಈ ಚಿತ್ರವೂ ಹಿಟ್ ಆಗಲಿದೆ ಎಂಬುದು ಮಂಜು ನಿರೀಕ್ಷೆ. ನಿರೀಕ್ಷೆ ನಿಜವಾಗಲಿ.