ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿವಾದದ ಸುಳಿಯಲ್ಲಿ ಇತಿಹಾಸ ಪ್ರಸಿದ್ಧ ಹಕ್ಕ-ಬುಕ್ಕ, ಒನಕೆ ಓಬವ್ವ! (Hakka Bukka | Onake Obavva | Veera madakari | Anand P. Raju)
PR
PR
ಕನ್ನಡ ಚಿತ್ರಗಳ ಶೀರ್ಷಿಕೆಗಳ ಕುರಿತಾದ ವಿವಾದವೇಕೋ ತಣ್ಣಗಾಗುವಂತೆ ಕಾಣುತ್ತಿಲ್ಲ. ಸುದೀಪ್ ಅಭಿನಯದ ಚಿತ್ರಕ್ಕೆ 'ವೀರ ಮದಕರಿ' ಎಂದು ಹೆಸರಿಡಲು ಹೊರಟಾಗ ಅದು ವಿವಾದಕ್ಕೆ ಕಾರಣವಾಗಿತ್ತು. ನಂತರ ಅವರದೇ ಅಭಿನಯದ ಮತ್ತು ದ್ವಾರಕೀಶ್ ನಿರ್ಮಾಣದ ಚಿತ್ರಕ್ಕೆ 'ವಿಷ್ಣುವರ್ಧನ' ಎಂಬ ಹೆಸರಿಡಲು ಹೊರಟಾಗ ಎದ್ದ ವಿವಾದಗಳು ನಿಮಗೆ ಗೊತ್ತೇ ಇದೆ.

ತಬಲಾ ನಾಣಿ ಮತ್ತು ರವಿಶಂಕರ್ ಅಭಿನಯದ ಹಾಸ್ಯಚಿತ್ರವೊಂದಕ್ಕೆ 'ಹಕ್ಕ-ಬುಕ್ಕ' ಎಂಬ ಶೀರ್ಷಿಕೆಯನ್ನು ಇಟ್ಟಿರುವುದರ ಕುರಿತು ಖ್ಯಾತ ಸಾಹಿತಿ ಮತ್ತು ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿಯವರು ಆಕ್ಷೇಪ ವ್ಯಕ್ತಪಡಿಸಿರುವುದನ್ನು ನೀವಾಗಲೇ ಇಲ್ಲಿ ಓದಿದ್ದೀರಿ. ತಗೊಳ್ಳಿ ಈಗ 'ಒನಕೆ ಓಬವ್ವ' ಚಿತ್ರದ ಸರದಿ.

ನಿರ್ದೇಶಕ ಆನಂದ್ ಪಿ. ರಾಜು ತಮ್ಮ ಚಿತ್ರಕ್ಕೆ ಈ ಹೆಸರಿಟ್ಟಿರುವುದು ಕೆಲವರ ಕಣ್ಣು ಕೆಂಪಾಗಿಸಿದೆ. ಬರಹಗಾರ ಮೊಹಿದ್ದೀನ್ ಖಾನ್ ಈ ಕುರಿತು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ದುಡ್ಡು ಮಾಡುವ ಉಮೇದನ್ನು ಹೊಂದಿರುವ ಕೆಲವರು ಕಥೆಗೆ ಹೊಂದಿಕೊಳ್ಳದಿದ್ದರೂ ಇತಿಹಾಸ ಪ್ರಸಿದ್ಧ ಸ್ಥಳಗಳ ಅಥವಾ ರಾಜಮಹಾರಾಜರ ಹೆಸರುಗಳನ್ನು ತಮ್ಮ ಚಿತ್ರಕ್ಕೆ ಇರಿಸಿ ಜನರನ್ನು ಸೆಳೆಯುವ ತಂತ್ರ ಹೂಡುತ್ತಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿವರ್ಗದವರು ಈ ಶೀರ್ಷಿಕೆಯನ್ನು ರದ್ದುಗೊಳಿಸಿ ಪರ್ಯಾಯ ಹೆಸರಿಡುವಂತೆ ಸೂಚಿಸಬೇಕು. ಇಲ್ಲವಾದರೆ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಖಾನ್ ಎಚ್ಚರಿಸಿದ್ದಾರೆ.

ಈ ಕುರಿತು ತಮ್ಮ ಪ್ರತಿಕ್ರಿಯೆ ಸೂಚಿಸಿರುವ ನಿರ್ದೇಶಕ ಆನಂದ್ ಪಿ. ರಾಜು, ಈ ಹಿಂದೆ ನನ್ನದೇ ಚಿತ್ರವೊಂದಕ್ಕೆ 'ಚೆನ್ನಮ್ಮ ಐಪಿಎಸ್' ಎಂದು ಹೆಸರಿಟ್ಟಿರುವೆ. ಕಿತ್ತೂರು ರಾಣಿ ಚೆನ್ನಮ್ಮನ ವೀರತ್ವವನ್ನು ಕಥಾನಾಯಕಿಯು ಹೊರಹೊಮ್ಮಿಸುವುದರಿಂದ ಆ ರೀತಿ ಇಡಲಾಗಿದೆ. ಮೇಲಾಗಿ ನನ್ನ ಚಿತ್ರದ ಶೀರ್ಷಿಕೆಯಲ್ಲಿ 'ಚೆನ್ನಮ್ಮ' ಎಂಬ ಪದವಿತ್ತೇ ಹೊರತು ಕಿತ್ತೂರು ರಾಣಿ ಚೆನ್ನಮ್ಮ ಎಂದಿರಲಿಲ್ಲ. ಸದ್ಯದ ಚಿತ್ರದ ಕಥಾನಾಯಕಿ ಒನಕೆ ಓಬವ್ವನ ರೀತಿಯಲ್ಲಿ ಹೋರಾಡುವುದರಿಂದ ಆ ಹೆಸರನ್ನು ಇಡಲಾಗಿದ್ದು, ಒಂದು ವೇಳೆ ವಿರೋಧಗಳು ವ್ಯಕ್ತವಾದಲ್ಲಿ ಶೀರ್ಷಿಕೆಯಲ್ಲಿನ 'ಓಬವ್ವ' ಎಂಬ ಹೆಸರನ್ನು ಕಿತ್ತುಹಾಕಲು ನಾನು ಸಿದ್ಧನಿರುವೆ; ಯಾವುದೇ ಕಾರಣಕ್ಕೆ ಸಂಘ-ಸಂಸ್ಥೆಗಳ ವಿರೋಧವನ್ನು ಕಟ್ಟಿಕೊಳ್ಳಲು ನಾನು ಸಿದ್ಧನಿಲ್ಲ ಎಂದು ತಿಳಿಸಿದ್ದಾರೆ.
ಇವನ್ನೂ ಓದಿ