ಈ ಬಣ್ಣದ ಪ್ರಪಂಚದ ಸೆಳೆತವೇ ಅಂಥಾದ್ದು. 'ಬಿಟ್ಟಿರ್ದೆನೆಂದೊಡಂ ಬಿಡದು ನಿನ್ನನು ಮಾಯೆ' ಎಂದು ಬಲ್ಲವರು ಹೇಳಿಲ್ಲವೇ? ಆ ರೀತಿಯಲ್ಲಿ ನಾವು ಬಿಟ್ಟರೂ ಮೇಕಪ್ ನಮ್ಮನ್ನು ಬಿಡದು ಎಂದು ಬಣ್ಣದ ಲೋಕದ ಕೆಲವು ಮಂದಿ ಆಗಾಗ ಹೇಳುತ್ತಿರುತ್ತಾರೆ. ವೈಯಕ್ತಿಕ ಕಷ್ಟ-ನೋವುಗಳೇನೇ ಇರಲಿ, ಮುಖಕ್ಕೆ ಒಮ್ಮೆ ಮೇಕಪ್ ಬಿದ್ದಿತೆಂದರೆ ಅದೊಂಥರಾ ಪರಕಾಯ ಪ್ರವೇಶ ಎನ್ನುತ್ತಾರೆ ಕೆಲ 'ಭಾವುಕ-ಕಲಾವಿದರು'.
ಇಷ್ಟೆಲ್ಲಾ ಹೇಳಿದ್ದು ಏತಕ್ಕೆ ಗೊತ್ತೇ? 'ಮಣಿ', 'ಅಣ್ಣ ತಂಗಿ', 'ಹಟವಾದಿ', 'ಮಸಾಲಾ', 'ಜನಪದ' ಇವೇ ಮೊದಲಾದ ಚಿತ್ರಗಳಲ್ಲಿ ಮಿಂಚಿದ್ದ ರಾಧಿಕಾ ನಿಮಗೆ ಗೊತ್ತಲ್ಲಾ, ಆಕೆ ಮತ್ತೊಮ್ಮೆ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈ ಬಾರಿ ಅವರದು ತೆರೆಯ ಮೇಲಿನ ಪಾತ್ರವಲ್ಲ, ತೆರೆಯ ಹಿಂದಿನ ಪಾತ್ರ; ಅರ್ಥಾತ್ ಆಕೆಯೀಗ ನಿರ್ಮಾಪಕಿ. 'ಲಕ್ಕಿ' ಎಂಬ ಚಿತ್ರವನ್ನು ನಿರ್ಮಿಸಲು ಮುಂದಾಗಿರುವ ರಾಧಿಕಾ, ತಮ್ಮ ಚಿತ್ರದ ನಾಯಕಿ ಪಾತ್ರಕ್ಕಾಗಿ ರಮ್ಯಾಗೆ ಅವಕಾಶ ನೀಡಿದ್ದಾರೆ ಎಂಬುದು ಸದ್ಯದ ವಿಶೇಷ ಸಂಗತಿ.
'ದಂಡಂ ದಶಗುಣಂ' ಚಿತ್ರದ ಹಣಕಾಸಿನ ವಿಷಯವು ವಿವಾದಕ್ಕೆ ಈಡಾದಾಗ ಚಿತ್ರರಂಗಕ್ಕೆ ವಿದಾಯ ಹೇಳಲು ಬಯಸಿದ್ದ ರಮ್ಯಾಗೆ ತಮ್ಮನ್ನು ಚಿತ್ರರಂಗವು ಎಷ್ಟೊಂದು ಬಯಸಿದೆ ಎಂಬುದು ಈಗ ಅನುಭವಕ್ಕೆ ಬಂದಿರಲಿಕ್ಕೂ ಸಾಕು. 'ಸಂಜು ವೆಡ್ಸ್ ಗೀತಾ' ಮತ್ತು 'ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್' ಚಿತ್ರಗಳ ಯಶಸ್ಸು ಅವರನ್ನು ಅಕ್ಷರಶಃ ಹಿಗ್ಗಿನ-ಬುಗ್ಗೆಯಾಗಿಸಿದೆ ಎನ್ನಬಹುದು.
ಈ ಚಿತ್ರವು ಮುಂಬರುವ ಆಗಸ್ಟ್‌ನಲ್ಲಿ ಸೆಟ್ಟೇರಲಿದ್ದು, ಈಗಷ್ಟೇ ಯಶಸ್ಸಿನ ರುಚಿಯನ್ನು ಕಾಣುತ್ತಿರುವ ಯಶ್ ರಮ್ಯಾಗೆ ನಾಯಕನಾಗಿ ನಟಿಸಲಿದ್ದಾರಂತೆ. ಚಿತ್ರದ ಕುರಿತಾದ ಹೆಚ್ಚಿನ ವಿವರಗಳು ಇನ್ನೂ ಹೊರಬೀಳಬೇಕಿದ್ದು, ಸದ್ಯಕ್ಕೆ ಲಭ್ಯವಿರುವ ಮಾಹಿತಿಗಳ ಪ್ರಕಾರ ಇದು ಲಕ್ಕಿ ಎಂಬ ಹುಡುಗ ಹಾಗೂ ಅವನ ಒಂದು ನಾಯಿಯ ಸುತ್ತ ಹೆಣೆಯಲಾಗಿರುವ ಕಾಲ್ಪನಿಕ ಕಥೆಯನ್ನು ಒಳಗೊಂಡಿದೆ ಎಂದು ತಿಳಿದುಬಂದಿದೆ.