ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಆಗಸ್ಟ್‌ನಲ್ಲಿ ಚುನಾವಣೆ; ಜಗ್ಗೇಶ್‌ಗೆ ದುರಾದೃಷ್ಟ (Jaggesh | K.C.N. Chandru | Munirathna | Kannada Movies)
PR
ಒಂದಲ್ಲಾ ಒಂದು ಕಾರಣಕ್ಕೆ ಮುಂದಕ್ಕೆ ಹೋಗುತ್ತಲೇ ಇದ್ದ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆಯನ್ನು ಬರುವ ಆಗಸ್ಟ್ 7 ರಂದು ನಡೆಸುವುದೆಂದು ಕೊನೆಗೂ ನಿರ್ಧರಿಸಲಾಗಿದೆ. ಇದಕ್ಕೂ ಮುಂಚೆ ಮೇ ತಿಂಗಳಿನಲ್ಲಿ ಸದರಿ ಚುನಾವಣೆಯು ನಡೆಯಬೇಕಿತ್ತಾದರೂ ಕಾರಣಾಂತರಗಳಿಂದ ಅದು ಮುಂದಕ್ಕೆ ಹೋಗುತ್ತಲೇ ಇತ್ತು ಹಾಗೂ ಇದಕ್ಕೆ ಸಂಬಂಧಿಸಿದಂತೆ ವಿವಾದಗಳೂ ಹೊರಹೊಮ್ಮುತ್ತಿದ್ದವು.

ಇದಕ್ಕೆ ಪೂರ್ವಭಾವಿಯಾಗಿ ಸಂಘದ ಸದಸ್ಯರು ಜುಲೈ 15 ರೊಳಗಾಗಿ ತಮ್ಮೆಲ್ಲಾ ಬಾಕಿಗಳನ್ನು ಚುಕ್ತಾ ಮಾಡಿಕೊಳ್ಳುವಂತೆ ಈಗಾಗಲೇ ಸೂಚನೆಯನ್ನು ನೀಡಲಾಗಿದೆಯಂತೆ. ಅಷ್ಟೇ ಅಲ್ಲ, ಪ್ರಸಕ್ತ ವರ್ಷದ ಮಾರ್ಚ್ ನಂತರದಲ್ಲಿ ಸದಸ್ಯತ್ವಕ್ಕೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರುವ ನಿರ್ಮಾಪಕರು ಈ ಚುನಾವಣೆಯಲ್ಲಿ ಸ್ಪರ್ಧಿಸುವ ಮತ್ತು ಮತ ಚಲಾಯಿಸುವ ಹಕ್ಕನ್ನು ಹೊಂದಿರುವುದಿಲ್ಲ ಎಂದು ತಿಳಿದುಬಂದಿದೆ.

ಈ ಹಿಂದೆ ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಂಭವ ಇದ್ದಾಗ, ನಿರ್ಮಾಪಕರೂ ಆಗಿರುವ ಚಿತ್ರನಟ ಜಗ್ಗೇಶ್ ಅಧ್ಯಕ್ಷ ಪದವಿಗೆ ಸ್ಪರ್ಧಿಸುತ್ತಾರೆ ಎಂದು ಕೆಲವೊಂದು ಮೂಲಗಳು ತಿಳಿಸಿದ್ದವು. ಆದರೆ ಅಲ್ಲೊಂದು ತಾಂತ್ರಿಕ ತೊಂದರೆ ಹೊರಹೊಮ್ಮಿದ್ದರಿಂದ ಇದು ಕೈಗೂಡಲಿಲ್ಲ. ಜಗ್ಗೇಶ್ ಅವರು ಸಂಘದ ಸದಸ್ಯರಾಗದೇ ಇದ್ದುದು ಮತ್ತು ಅವರ ಪತ್ನಿ ಪರಿಮಳಾ ಜಗ್ಗೇಶ್ ಅವರ ಹೆಸರಿನಲ್ಲಿ ಎಲ್ಲಾ ವ್ಯವಹಾರ ನಿರ್ವಹಣೆಗಳು ನಡೆಯುತ್ತಿದ್ದುದರಿಂದ ಜಗ್ಗೇಶ್ ತಾಂತ್ರಿಕವಾಗಿ 'ನಿರ್ಮಾಪಕ' ಎಂಬ ಹಣೆಪಟ್ಟಿಯಲ್ಲಿ ಬರುವವರಾಗಿರಲಿಲ್ಲ. ಹೀಗಾಗಿ ಈ ಪ್ರಯತ್ನ ಅಲ್ಲೇ ಕೊನೆಗೊಂಡಿತು.

ಈಗಾಗಲೇ ತಮ್ಮ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿರುವ ಕೆ.ಸಿ.ಎನ್. ಚಂದ್ರುರವರು ಚುನಾವಣೆ ನಡೆಯುವವರೆಗೂ ಮುಂದುವರೆಯಲಿದ್ದಾರೆ. 'ರಕ್ತಕಣ್ಣೀರು' ಚಿತ್ರವನ್ನು ನಿರ್ಮಿಸಿದ ಮುನಿರತ್ನ ಅಧ್ಯಕ್ಷ ಪದವಿಯ ಆಕಾಂಕ್ಷಿ ಎಂದು ಹೇಳಲಾಗುತ್ತಿದೆಯಾದರೂ, ಇತರ ವಲಯಗಳಿಂದ ಇನ್ಯಾರಾದರೂ ಸ್ಪರ್ಧಿಸಲು ಆಸಕ್ತರಾಗಿದ್ದಾರೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.

ಗಾಂಧಿನಗರದ ಹಿರಿಯ ವ್ಯವಹಾರಸ್ಥರೊಬ್ಬರು ಹೇಳುವ ಪ್ರಕಾರ, ನಟ-ನಟಿಯರ ಕಾಲ್‌ಶೀಟ್ ಸಮಸ್ಯೆ, ಮಿತಿಮೀರಿದ ಸಂಭಾವನೆ, ಚಿತ್ರದ ಬಿಡುಗಡೆಗೆ ಚಿತ್ರಮಂದಿರಗಳು ಸೂಕ್ತ ಸಮಯದಲ್ಲಿ ಲಭ್ಯವಾಗದಿರುವುದು, ಚಿತ್ರವು ಯಶಸ್ವಿಯಾಗಿ ಓಡುತ್ತಿದ್ದರೂ ಕೆಲವೊಮ್ಮೆ ಚಿತ್ರವನ್ನು ಅನಾಮತ್ತಾಗಿ ತೆಗೆದುಹಾಕುವುದು ಇವೇ ಮೊದಲಾದ ನಿರ್ಮಾಪಕರ ಸಮಸ್ಯೆಗಳಿಗೆ ಒಂದು ಸೂಕ್ತ ಪರಿಹಾರವನ್ನು ಕಂಡುಹಿಡಿಯುವ ಸಾಮರ್ಥ್ಯವಿರುವ ವ್ಯಕ್ತಿಗೆ ಈ ಬಾರಿ ಬೆಂಬಲ ಸಿಗಲಿದೆ ಎಂದು ತಿಳಿದುಬಂದಿದೆ.
ಇವನ್ನೂ ಓದಿ