ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸ್ವಂತಿಕೆಯಿಲ್ಲದ ಕನ್ನಡ ಚಿತ್ರರಂಗದಲ್ಲಿ ನಶಿಸುತ್ತಿದೆಯೇ ಸೃಜನಶೀಲ ಪ್ರತಿಭೆ? (Hunasooru krishna murthy | Puttanna kanagal | Chi. Udayashankar | Kannada Cinema)
PR


ವಿಶೇಷ ವರದಿ: ಯಗಟಿ ರಘು ನಾಡಿಗ್

ಹಾಗೊಂದು ಸಂದೇಹ ಅಥವಾ ಆತಂಕ ಕನ್ನಡದ ಸೃಜನಶೀಲ ಚಿತ್ರರಸಿಕರನ್ನು ಕಾಡುತ್ತಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳನ್ನು ಒಮ್ಮೆ ಅವಲೋಕಿಸಿದರೆ ಒಂದಷ್ಟು ಚಿತ್ರಗಳನ್ನು ಹೊರತುಪಡಿಸಿ ಬಹುತೇಕ ಚಿತ್ರಗಳು ಎರವಲು ಸರಕುಗಳೋ ಅಥವಾ ಐದಾರು ಚಿತ್ರದ ಸನ್ನಿವೇಶಗಳನ್ನು ಕದ್ದು ತೇಪೆ ಹಚ್ಚಿ ಹೊಸತೆಂಬಂತೆ ಸಿದ್ಧಪಡಿಸಿ ಉಣಬಡಿಸಿದ ಎಂಜಲು ಚಿತ್ರಗಳೋ ಆಗಿರುವುದು ನಿಮ್ಮ ಗಮನಕ್ಕೆ ಬರುತ್ತದೆ.

ಹುಣಸೂರು ಕೃಷ್ಣಮೂರ್ತಿ, ಪುಟ್ಟಣ್ಣ ಕಣಗಾಲ್, ಚಿ.ಉದಯಶಂಕರ್, ಆರ್.ಎನ್. ಜಯಗೋಪಾಲ್, ಆರ್.ನಾಗೇಂದ್ರರಾವ್, ಕಣಗಾಲ್ ಪ್ರಭಾಕರ ಶಾಸ್ತ್ರಿ, ಪಿ.ಲಂಕೇಶ್, ಬಿ.ಆರ್. ಪಂತುಲು, ಚಿ. ಸದಾಶಿವಯ್ಯ, ಸಿದ್ದಲಿಂಗಯ್ಯ, ಕು.ರಾ.ಸೀತಾರಾಮ ಶಾಸ್ತ್ರಿ, ಪಟ್ಟಾಭಿರಾಮರೆಡ್ಡಿ, ಗೀರೀಶ್ ಕಾರ್ನಾಡ್, ಗೀರೀಶ್ ಕಾಸರವಳ್ಳಿ ಹೀಗೆ ಹೇಳುತ್ತಾ ಹೋದರೆ ಕನ್ನಡ ಚಿತ್ರಗಳನ್ನು ತಮ್ಮ ಕೃತಿಗಳಿಂದ ಅಥವಾ ಕಥೆ-ಸಾಹಿತ್ಯ-ಸಂಭಾಷಣೆಗಳಿಂದ ಸಮೃದ್ಧಗೊಳಿಸಿದ ಅತಿರಥ-ಮಹಾರಥರ ಪಟ್ಟಿಯೇ ದೊರಕುತ್ತದೆ.

70ರ ದಶಕದಲ್ಲಂತೂ ಕನ್ನಡ ಚಿತ್ರರಂಗದಲ್ಲಿ ಸೃಜನಶೀಲತೆಯ ಕ್ರಾಂತಿಯೇ ಆಯಿತು ಎಂದು ಹೇಳಬಹುದು. ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಲನಚಿತ್ರರಂಗದೆಡೆಗೆ ನೋಡುವಂಥ ಒಂದು ಟ್ರೆಂಡ್ ಆಗ ಸೃಷ್ಟಿಯಾಗಿತ್ತು. ಓರ್ವ ಖ್ಯಾತ ನಿರ್ದೇಶಕ ಮಾತ್ರವೇ ಆಗಿರದೆ ಓರ್ವ ಪರಿಣತ ಸಂಕಲನಕಾರರೂ ಆಗಿದ್ದ ಹೃಷಿಕೇಶ್ ಮುಖರ್ಜಿಯಂಥ ಮಹಾರಥರು ಕನ್ನಡ ಚಿತ್ರಗಳ ಹಿರಿಮೆಯನ್ನು ಮನಗಂಡು ಪಿ.ಲಂಕೇಶರ ಚಿತ್ರದ ಸಂಕಲನ ಕಾರ್ಯವನ್ನು ಮಾಡಿಕೊಟ್ಟಿದ್ದರು.

ಪೃಥ್ವಿರಾಜ್ ಕಪೂರ್ ಸಾಕ್ಷಾತ್ಕಾರ ಚಿತ್ರದಲ್ಲಿ ಒಂದು ಪೂರ್ಣಪ್ರಮಾಣದ ಪಾತ್ರವನ್ನು ನಿರ್ವಹಿಸಿ ಹೋಗಿದ್ದರು. ತಬ್ಬಲಿಯು ನೀನಾದೆ ಮಗನೆ ಚಿತ್ರದಲ್ಲಿ ನಾಸಿರುದ್ದೀನ್ ಷಾ ಅಭಿನಯಿಸಿದ್ದರೆ, ಕಾಡು ಚಿತ್ರದಲ್ಲಿ ಅಮರೀಷ್ಪುರಿ ತಮ್ಮ ಪ್ರತಿಭೆಯನ್ನು ಮೆರೆದಿದ್ದರು. ಅಷ್ಟೇ ಏಕೆ ಸುಮಾರು 20 ವರ್ಷಗಳ ಹಿಂದೆ ಬಂದ ಗಿರೀಶ್ ಕಾಸರವಳ್ಳಿಯವರ ತಬರನ ಕಥೆ ಚಿತ್ರದಲ್ಲಿ, ನಂತರದ ಕುಬಿ ಮತ್ತು ಇಯಾಲ ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಚಾರುಹಾಸನ್ ಕಾಣಿಸಿಕೊಂಡಿದ್ದರು.

ಒಂದು ಭಾಷೆಯ ನಟರು ತಮ್ಮದಲ್ಲದ ಭಾಷೆಗೆ ಸೇರಿದ ಚಿತ್ರಗಳಲ್ಲಿ ಅಭಿನಯಿಸುವುದರಲ್ಲಿ ಅಂಥಾ ವಿಶೇಷವೇನಿದೆ ಎಂದು ನೀವು ಕೇಳಬಹುದು. ಆದರೆ ಇವೆಲ್ಲದರ ಹಿಂದೆ ಇಂದಿನ ನಟ-ನಟಿಯರಲ್ಲಿ ಕಂಡುಬರುವ ಕಮರ್ಷಿಯಲ್ ಉದ್ದೇಶಗಳಿರಲಿಲ್ಲ ಎಂಬುದನ್ನು ಗಮನಿಸಬೇಕು. ಈ ಎಲ್ಲಾ ವಿದ್ಯಮಾನಗಳು ಜರುಗಿದ್ದೂ ಕನ್ನಡ ಚಲನಚಿತ್ರಗಳಲ್ಲಿನ ಸ್ವಂತಿಕೆ, ಸಾಹಿತ್ಯದ ಗಟ್ಟಿತನ, ಚಿತ್ರಕಥಾ ರಚನೆಯಲ್ಲಿ ಕಂಡುಬರುತ್ತಿದ್ದ ನಿಷ್ಠೆ ಇವುಗಳ ಕಾರಣದಿಂದಲೇ ಎಂಬುದನ್ನು ನಾವು ಮರೆಯುವಂತಿಲ್ಲ.

ಇಂದು ಕನ್ನಡ ಚಿತ್ರರಂಗದಲ್ಲಿಯೂ ತಂತ್ರಜ್ಞಾನದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಕಪ್ಪು-ಬಿಳುಪು ಚಿತ್ರಗಳ ಸ್ಥಾನವನ್ನು ಬಣ್ಣದ ಚಿತ್ರಗಳು ಆಕ್ರಮಿಸಿಕೊಂಡು ದಶಕಗಳೇ ಆಗಿಹೋಯಿತು. 35 ಎಂ.ಎಂ. ಚಿತ್ರಗಳ ಸ್ಥಾನವನ್ನು ಸಿನಿಮಾ ಸ್ಕೋಪ್ / 70 ಎಂ.ಎಂ. ಚಿತ್ರಗಳು ಆವರಿಸಿಕೊಂಡಿವೆ. ಇನ್ನು ಶಬ್ದಗ್ರಹಣ / ಸಂಗೀತದ ವಿಷಯಕ್ಕೆ ಬಂದರೆ ಡಾಲ್ಬಿ, ಡಿಟಿಎಸ್, ಸ್ಟಿರಿಯೋಫೋನಿಕ್ ಪರಿಣಾಮಗಳನ್ನು ಚಿತ್ರಕ್ಕೆ ಅಗತ್ಯವಿರಲಿ ಬಿಡಲಿ ನೀಡದೇ ಹೋದವನು 'ಗಮಾರ' ಎನಿಸಿಕೊಳ್ಳುತ್ತಾನೆ.

ಚಿತ್ರೀಕರಣದ ಸಮಯದಲ್ಲಿ ಒಂದು ಕ್ಯಾಮರಾವನ್ನು ಹೊಂಚಿದರೆ ಸಾಕು ಎಂದುಕೊಳ್ಳುತ್ತಿದ್ದವರು ಈಗ ಜಿಮ್ಮಿಜಿಪ್ ಕ್ಯಾಮರಾ, ಸ್ಟೆಡಿ ಕ್ಯಾಮರಾ, ಹೈಡೆಫನಿಷನ್ ಕ್ಯಾಮರಾಗಳನ್ನು ಹೊಂದಿಸುವಷ್ಟು ಸಮರ್ಥರಾಗಿದ್ದಾರೆ. ಇಡೀ ಚಿತ್ರಕ್ಕೆ ಒಂದು ಕೋಟಿ ಹಣ ಸುರಿಯಲು ಹಿಂದುಮುಂದು ನೋಡುತ್ತಿದ್ದವರು ಇಂದು ಒಂದೇ ಹಾಡಿನ ಚಿತ್ರೀಕರಣಕ್ಕೆ 50 ಲಕ್ಷ ಹಣವನ್ನು ಸುರಿಯಲು ತಯಾರಾಗಿದ್ದಾರೆ. ಎಲ್ಲವೂ ಸರಿ, ಆದರೆ ಇಲ್ಲಿ ಸಿದ್ಧವಾಗುತ್ತಿರುವ ಊಟ ಇಲ್ಲಿಯದೇನಾ? ಈ ಚಿತ್ರಗಳಲ್ಲಿ ಹೊರಹೊಮ್ಮುವ ಸಾಹಿತ್ಯ-ಸಂಭಾಷಣೆಗಳಲ್ಲಿ ಈ ಮಣ್ಣಿನ ವಾಸನೆಯಿದೆಯಾ? ನಟರು ತೊಡುವ ಉಡುಗೆ-ತೊಡುಗೆಗಳನ್ನು ನೋಡಿ ಇವರು ಕನ್ನಡದವರು ಎಂದು ಹೇಳಬಹುದಾ? ಇದು ಆಲೋಚಿಸಬೇಕಾದ ವಿಷಯ.

ಕನ್ನಡದಲ್ಲಿ ಸೃಜನಶೀಲತೆ ಎಷ್ಟರಮಟ್ಟಿಗೆ ಸತ್ತುಹೋಗಿದೆಯೆಂದರೆ ತಮಿಳಿನಿಂದ ಆಮದುಮಾಡಿಕೊಂಡ ಸರಕನ್ನು ಕನ್ನಡದಲ್ಲಿ 'ರಿಮೇಕಿಸುವಾಗ' ಮೂಲ ತಮಿಳು ಚಿತ್ರದಲ್ಲಿನ ಪಾತ್ರವೊಂದು ಗಿರಿಜಾ ಮೀಸೆಯನ್ನು ಬಿಟ್ಟುಕೊಂಡು ಕಚ್ಚೆಪಂಚೆ ಧರಿಸಿ, ಪಂಚೆಯ ಮೇಲೊಂದು ಬೆಲ್ಟ್ ಬಿಗಿದುಕೊಂಡು, ಕೈಗೆ-ಕಾಲಿಗೆ ಕಡಗವನ್ನು ಧರಿಸಿ, ಕಿವಿಗೆ ಬೆಂಡೋಲೆಯನ್ನು ಧರಿಸಿದ್ದರೆ ಕನ್ನಡದ ಪಾತ್ರಗಳಿಗೂ ಹಾಗೇ ಅಲಂಕರಿಸಲಾಗುತ್ತದೆ. ಮೂಲ ಚಿತ್ರದಲ್ಲಿ ನಾಯಕಿಗೆ ಮತ್ತವಳ ಸಹನರ್ತಕಿಯರಿಗೆ ಕೆಂಪು ಸೀರೆ ಉಡಿಸಿ ಎರಡೂ ಕೈಗಳಲ್ಲಿ ಬೇವಿನ ಸೊಪ್ಪು ಹಿಡಿಸಿ 'ಓಂ ಶಕ್ತಿ ಓಂ ಶಕ್ತಿ' ಎಂಬ ಹಾಡು ಹಾಡಿಸಿದ್ದರೆ ಕನ್ನಡದಲ್ಲಿಯೂ (ಕನ್ನಡ ಸಂಸ್ಕೃತಿಯಲ್ಲಿ ದೇವಿಯ ಸಂಕೀರ್ತನೆ/ಆರಾಧನೆಯನ್ನು ಈ ವಿಧಾನದಲ್ಲಿ ಮಾಡದಿದ್ದರೂ!!) ಅದನ್ನು ಚಾಚೂ ತಪ್ಪದೆ ಅನುಸರಿಸಲಾಗುತ್ತದೆ. ಇನ್ನು ಹಾಸ್ಯದೃಶ್ಯಗಳು ಮತ್ತು ಸಂಭಾಷಣೆಗಳ ಕುರಿತು ಹೇಳುವುದೇ ಬೇಡ. ಅವು ಅಕ್ಷರಶಃ ತರ್ಜುಮೆ ಆಗಿರುತ್ತವೆ. ಹೀಗಿರುವಾಗ ನಮ್ಮತನ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದಾದರೂ ಹೇಗೆ?

ಹಾಗಂತ ಹಿಂದೆ ಬಂದಿದ್ದೆಲ್ಲವೂ ಈ ಮಣ್ಣಿನ ಸಾಹಿತ್ಯ-ಸಂಸ್ಕೃತಿಯಲ್ಲಿ ಅದ್ದಿ ತೆಗೆದ ಚಿತ್ರಗಳು ಎಂದು ಇಲ್ಲಿ ಹೇಳುತ್ತಿಲ್ಲ. ಚಿತ್ರಕಥೆ ರಚನೆಯಲ್ಲಿ ತೊಡಗಿಸಿಕೊಳ್ಳುವವರಲ್ಲಿ ಸಾಹಿತ್ಯ-ಸಂಸ್ಕೃತಿಗಳ ಕುರಿತು ಹೆಚ್ಚು ಓದಿಗೊಂಡವರು ಅಥವಾ ಅಧಿಕಾರಯುತವಾಗಿ ಮಾತನಾಡಬಲ್ಲವರ ಸಂಖ್ಯೆ ಇಲ್ಲಿ ಕಡಿಮೆಯಾಗುತ್ತಿದೆ. ಮೊಸರನ್ನು ಮಥಿಸಿ ಮಥಿಸಿ ಬೆಣ್ಣೆ ತೆಗೆಯುವುದಕ್ಕಿಂತ ಅಂಗಡಿಯಿಂದ ತಂದು ಫ್ರಿಜ್‌ನಲ್ಲಿ ಇಟ್ಟಿರುವ ಬೆಣ್ಣೆಯ ಕಡೆಗೇ ಎಲ್ಲರ ಒಲವು...!!

ಹಿಂದೆಲ್ಲಾ ಚಿತ್ರಕಥೆಯ ರಚನೆಗೇ ತಿಂಗಳುಗಟ್ಟಲೆ ಸಮಯ ಹಿಡಿಯುತ್ತಿತ್ತು. ಚಿತ್ರಕಥೆಯು ನ್ಯೂನತೆಯಿಲ್ಲದೆ ಪರಿಪೂರ್ಣವಾಗಿದ್ದರೆ ಚಿತ್ರವು ಶೇಕಡಾ 50 ರಷ್ಟು ಸಿದ್ಧವಾದಂತೆ ಎಂದು ಪುಟ್ಟಣ್ಣ ಕಣಗಾಲ್ ಹೇಳುತ್ತಿದ್ದರು. ಅಷ್ಟೇ ಅಲ್ಲ, ಚಿತ್ರಕಥೆ ರಚನೆಗೆ ಒಂದಕ್ಕೆರಡರಷ್ಟು ಕಾಗದ ವೇಸ್ಟ್ ಆದರೂ ಪರವಾಗಿಲ್ಲ, ಹಾಗಾದಾಗಲೇ ಮುಂದೆ ಚಿತ್ರೀಕರಣದ ಸಮಯದಲ್ಲಿ 'ಕಚ್ಚಾ ಫಿಲಂ' ವೇಸ್ಟ್ ಆಗುವುದು ಕಡಿಮೆಯಾಗುತ್ತದೆ ಎಂದು ಅವರು ಹೇಳುತ್ತಿದ್ದರು.

ಈಗ ಕನ್ನಡ ಮಣ್ಣಿನ ವಾಸನೆಯ ಚಿತ್ರಗಳು ಬರುತ್ತಿಲ್ಲ ಎಂದು ಉದ್ಗಾರವನ್ನೇನಾದರೂ ತೆಗೆದು ನೋಡಿ? 'ಕನ್ನಡದಲ್ಲಿ ಚಲನಚಿತ್ರವನ್ನಾಗಿಸುವ ಕಥೆಗಳಾದರೂ ಎಲ್ಲಿದೆ ರೀ?' ಎಂದು ಮರುಪ್ರಶ್ನೆ ಹಾಕುವವರ ಸಂಖ್ಯೆಯೇ ಹೆಚ್ಚು. ಯಾವ ಶ್ರೇಷ್ಠ ಕೃತಿಯನ್ನೂ ಇದು ಚಲನಚಿತ್ರವಾಗಲಿ ಎಂಬ ಉದ್ದೇಶಕ್ಕಾಗಿ ರಚಿಸುವುದಿಲ್ಲ ಹಾಗೂ ಅದನ್ನು ನಾವು ಮಾಧ್ಯಮಕ್ಕೆ ಒಗ್ಗಿಸಿಕೊಳ್ಳಬೇಕು ಎಂಬ ಮನೋಭಾವನೆ ಚಿತ್ರರಂಗದವರಲ್ಲಿ ಮೂಡಬೇಕು. ಅದನ್ನು ದೃಶ್ಯಮಾಧ್ಯಮಕ್ಕೆ ಅಳವಡಿಸುವಾಗ ಅದರ ಸಾಧಕ-ಬಾಧಕಗಳ ಕುರಿತಾಗಿ ಚಿತ್ರಸಾಹಿತಿ-ನಿರ್ದೇಶಕ-ಚಿತ್ರಕಥಾ ರಚನೆಗಾರರ ನಡುವೆ ಆರೋಗ್ಯಕರ ಚರ್ಚೆ ನಡೆದಲ್ಲಿ ಉತ್ತಮ ಚಿತ್ರ ಹೊರಹೊಮ್ಮುವುದರಲ್ಲಿ ಆಶ್ಚರ್ಯವಿಲ್ಲ. ಆದರೆ ಚಿತ್ರಕೃಷಿಗೆ ಸಂಬಂಧಿಸಿದಂತೆ ಹಾಕಲಾಗುವ ಹೊಟೇಲಿನ ರೂಮುಗಳು ಮೂಲ ಉದ್ದೇಶವನ್ನು ಬಿಟ್ಟು ಗುಂಡು-ತುಂಡುಗಳ ಸಮಾರಾಧನೆ 'ಮತ್ತೊಂದು-ಮಗದೊಂದರ' ಈಡೇರಿಕೆಗಾಗಿ ಬಳಕೆಯಾದರೆ ಅಲ್ಲಿ ಸೃಜನಶೀಲತೆ ಹುಟ್ಟುವುದಿಲ್ಲ. ಹೀಗಾಗಿ ಸ್ವಂತವಾಗಿ ಆಹಾರ ಪದಾರ್ಥಗಳನ್ನು ಬೆಳೆದೂ ಸಹ ಕಂಡವರ ಎಂಜಲಿಗೆ ಕೈ ಚಾಚುವಂಥ ದೈನೇಸಿ ಪರಿಸ್ಥಿತಿ ನಮ್ಮವರದಾಗುತ್ತದೆ.

ಇದರ ಕುರಿತು ಗಮನ ಹರಿಸುವರಾರು? ಚಿತ್ರೋದ್ಯಮಿಗಳು ಇತ್ತ ಒಮ್ಮೆ ಗಮನ ಹರಿಸಲಿ ಎಂಬುದೇ ನಮ್ಮ ಆಶಯ.
ಇವನ್ನೂ ಓದಿ