ಒಂದು ಯಶಸ್ಸಿಗಾಗಿ ನಿರ್ದೇಶಕ ದಯಾಳ್ ಪದ್ಮನಾಭನ್ ಹಪಹಪಿಸುತ್ತಿದ್ದಾರೆ. ಅವರ ಬಹು ನೀರೀಕ್ಷಿತ ಚಿತ್ರವಾದ 'ಸರ್ಕಸ್' ಬಿಗಿಯಾದ ನಿರೂಪಣೆಯಿದ್ದೂ ಯಶಸ್ಸು ಕಾಣುವಲ್ಲಿ ವಿಫಲಗೊಂಡಿತು. ಮುರಳಿ, ಪೂಜಾಗಾಂಧಿ, ರಾಧಿಕಾಗಾಂಧಿ ಅಭಿನಯದ 'ಶ್ರೀ ಹರಿಕಥೆ' ವಿಫಲಗೊಂಡಿತು. ಈಗ 'ಯೋಗರಾಜ' ಚಿತ್ರದ ಯಶಸ್ಸು ಅವರಿಗೆ ಅತ್ಯಗತ್ಯವಾಗಿದೆ ಎನ್ನುವುದು ಗಾಂಧಿನಗರಿಗರ ಅಭಿಪ್ರಾಯ.
ಈ ಚಿತ್ರಕ್ಕೆ ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಇತ್ತೀಚೆಗಷ್ಟೇ ಡಿ.ಟಿ.ಎಸ್. ತಂತ್ರಜ್ಞಾನವನ್ನು ಅಳವಡಿಸಿ ಪ್ರಥಮ ಪ್ರತಿಯನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿದುಬಂದಿದೆ. ನಿರ್ದೇಶಕ ದಯಾಳ್ ಅವರೇ ಚಿತ್ರವನ್ನು ನಿರ್ಮಿಸಿದ್ದಾರೆ ಎಂಬುದು ಗಮನಾರ್ಹ ಸಂಗತಿ.
ನಿಜಜೀವನದಲ್ಲಿ ಕಂಡುಬಂದ ವ್ಯಕ್ತಿಗಳನ್ನು ಆಧರಿಸಿ ಸದರಿ ಚಿತ್ರದ ಕಥಾವಸ್ತುವನ್ನು ರೂಪಿಸಲಾಗಿದ್ದು, ನವೀನ್ ಕೃಷ್ಣ ಹಾಗೂ ನೀತೂ ನಾಯಕ-ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನವೀನ್ ಕೃಷ್ಣರ ತಂದೆ ಹಾಗೂ ಖ್ಯಾತ ಪೋಷಕ ಕಲಾವಿದ ಶ್ರೀನಿವಾಸಮೂರ್ತಿಯವರು ಈ ಚಿತ್ರದಲ್ಲಿ ಓರ್ವ ಅವಧೂತನ ಪಾತ್ರವನ್ನು ವಹಿಸಿದ್ದಾರೆ ಎನ್ನುತ್ತದೆ ಚಿತ್ರತಂಡ.
ರಾಕೇಶ್ ಛಾಯಾಗ್ರಹಣ, ಮಿಲಿಂದ್ ಧರ್ಮಸೇನ ಸಂಗೀತವಿರುವ ಈ ಚಿತ್ರದಲ್ಲಿ ಅಜಿತ್, ಪವನ್ ಕುಮಾರ್, ಎ.ಆರ್. ಬಾಬು, ತರುಣ್ ಸುಧೀರ್, ಸಿಹಿಕಹಿ ಚಂದ್ರು, ಪ್ರತಾಪ್ ನಟಿಸಿದ್ದಾರೆ. ಚಿತ್ರೀಕರಣದ ಹಂತದಲ್ಲಿಯೇ ಈ ಚಿತ್ರದ ಕುರಿತಾಗಿ ಒಳ್ಳೆಯ ಮಾತುಗಳು ಕೇಳಿಬರುತ್ತಿದ್ದವು. ಆ ಮಾತುಗಳನ್ನು ಪ್ರೇಕ್ಷಕರು ಎಷ್ಟರ ಮಟ್ಟಿಗೆ ನಿಜವಾಗಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು.