ದಶಕಗಳ ಹಿಂದೆ ಕಣ್ಣ ತುಂಬ ಕನಸುಗಳನ್ನು ತುಂಬಿಕೊಂಡು ಚಿತ್ರದುರ್ಗದಿಂದ ಗಾಂಧಿನಗರಕ್ಕೆ ಬಂದ ಅಭಿಜಿತ್ ಒಂದು 'ಬ್ರೇಕ್'ನ ನಿರೀಕ್ಷೆಯಲ್ಲಿದ್ದಾರೆ. ಈ ಹಿಂದೆ ಸ್ವಂತ ನಿರ್ಮಾಣದ 'ಸಮರಸಿಂಹ ನಾಯ್ಕ' ಎಂಬ ಚಿತ್ರದಲ್ಲಿ ನಟಿಸಿದ್ದರೂ ಅದು ಅವರಿಗೆ 'ಆಂಗ್ರಿ ಯಂಗ್ ಮ್ಯಾನ್' ಇಮೇಜನ್ನು ದೊರಕಿಸಿಕೊಡುವಲ್ಲಿ ವಿಫಲವಾಯಿತು.
ಈಗ ಸ್ವಂತ ನಿರ್ಮಾಣದ 'ವಿಷ್ಣು' ಚಿತ್ರದ ಮೇಲೆ ಅಭಿಜಿತ್ ಭರವಸೆಯನ್ನು ಇರಿಸಿಕೊಂಡಿದ್ದಾರೆ. ಅಭಿಜಿತ್ ಪತ್ನಿ ರೋಹಿಣಿ ನಿರ್ಮಾಣದ ಈ ಚಿತ್ರದ ಚಿತ್ರೀಕರಣವು ಸಂಪೂರ್ಣಗೊಂಡಿದ್ದು ನಿರ್ಮಾಣಾನಂತರದ ಕಾರ್ಯಗಳಿಗೆ ಚಿತ್ರವು ತನ್ನನ್ನು ಒಡ್ಡಿಕೊಳ್ಳಬೇಕಿದೆ.
ಕರ್ನಾಟಕದ ರಮ್ಯ ತಾಣಗಳಲ್ಲಿ ಈ ಚಿತ್ರದ ಚಿತ್ರೀಕರಣವು ನಡೆದಿದ್ದು, ನಂದಿ ಬೆಟ್ಟದ ಕೆಳಗೆ ಚಿತ್ರೀಕರಿಸಲಾದ ಸಾಹಸ ದೃಶ್ಯವು ಚಿತ್ರದ ಹೈಲೈಟ್ ಆಗಲಿದೆ ಎನ್ನುತ್ತದೆ ಚಿತ್ರತಂಡ. ಅಭಿಜಿತ್ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ಮತ್ತೊಂದು ವಿಶೇಷ.
ಕೃಪಾಕರ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಥ್ರಿಲ್ಲರ್ ಮಂಜು ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ ಹಾಗೂ ರಾಮಚಂದ್ರುಡು ಸಂಭಾಷಣೆಯನ್ನು ಬರೆದಿದ್ದಾರೆ. ಗೋವರ್ಧನ್ ಸಂಕಲನ, ವೇಣು ಸಹ-ನಿರ್ದೇಶನ, ಅರಸು ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ಇತರ ಪಾತ್ರಗಳಲ್ಲಿ ಸತ್ಯಪ್ರಕಾಶ್, ಪೂನಂ, ಆಶೀಷ್ ವಿದ್ಯಾರ್ಥಿ, ಬುಲೆಟ್ ಪ್ರಕಾಶ್, ಲೋಹಿತಾಶ್ವ ರವಿಶಂಕರ್, ಮನೋಜ್ ಮೊದಲಾದವರಿದ್ದಾರೆ.
'ವಿಷ್ಣು' ಯಶ ಕಾಣಲಿ, ಅಭಿಜಿತ್ ಕನಸು ಸಾಕಾರಗೊಳ್ಳಲಿ ಎಂದು ನೀವೂ ಹಾರೈಸಿ.