ನಿರ್ದೇಶಕ ವೇಮಗಲ್ ಜಗನ್ನಾಥರಾವ್ ಇಂದಿನ ಕೆಲವು ಚಿತ್ರರಸಿಕರಿಗೆ ಅಷ್ಟಾಗಿ ಪರಿಚಯವಿಲ್ಲದಿರಬಹುದು. ದಶಕಗಳ ಹಿಂದೆ 'ಪ್ರಜಾ ಮತ' ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡ ಯಂಡಮೂರಿ ವೀರೇಂದ್ರನಾಥರ 'ತುಳಸೀದಳ' ಕಾದಂಬರಿಯನ್ನು (ಅನುವಾದ: ವಂಶಿ) ಚಲನಚಿತ್ರ ಮಾಧ್ಯಮಕ್ಕೆ ಅಳವಡಿಸಿದವರು ಇದೇ ಜಗನ್ನಾಥರಾವ್. ಆದರೆ ಮುದ್ರಣ ಮಾಧ್ಯಮದಲ್ಲಿ ಕಂಡುಬಂದ ಅಭೂತಪೂರ್ವ ಯಶಸ್ಸು ಚಲನಚಿತ್ರದ ರೂಪದಲ್ಲಿ ಕಂಡುಬರಲಿಲ್ಲ.
ಇದರ ನಂತರ ಹಲವು ಚಿತ್ರಗಳಲ್ಲಿ ಜಗನ್ನಾಥ್ ತೊಡಗಿಸಿಕೊಂಡರಾದರೂ ಅವೆಲ್ಲಾ ಹತ್ತರಲ್ಲಿ ಹನ್ನೊಂದು ಎಂಬಂತಿದ್ದವು. ತೀರಾ ಇತ್ತೀಚೆಗೆ ಬಂದ 'www.ಭಯ.com' ಎಂಬ ವಿಲಕ್ಷಣ ಹೆಸರಿನ ಚಿತ್ರವೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಯಿತು. ಈಗ 'ಚಿನ್ನದ ತಾಳಿ' ಎಂಬ ಚಿತ್ರದ ಮೂಲಕ ವೇಮಗಲ್ ಜಗನ್ನಾಥರಾವ್ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು ಅದು ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ.
ಡೈನಮಿಕ್ ಸ್ಟಾರ್ ದೇವರಾಜ್ ಮತ್ತು ತಿಲಕ್ ಪ್ರಧಾನ ಪಾತ್ರಗಳಲ್ಲಿರುವ ಈ ಚಿತ್ರವನ್ನು 'ಸ್ಟೊ ಮೀಡಿಯಾ ಅಂಡ್ ಎಂಟರ್‌ಟೈನ್‌ಮೆಂಟ್ಸ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯ ಅಡಿಯಲ್ಲಿ ಮಟಮರೆಡ್ಡಿ ನಿರ್ಮಿಸಿದ್ದಾರೆ. ಕಥೆ-ಚಿತ್ರಕಥೆಯನ್ನು ಒದಗಿಸಿರುವ ಬಿ.ಚಲಪತಿ ಚಿತ್ರದ ಸಹ-ನಿರ್ಮಾಪಕರೂ ಆಗಿದ್ದಾರೆ. ಸಂಭಾಷಣೆ ಶ್ರೀಚಂದ್ರುರವರದು.
ಯು/ಎ ಪ್ರಮಾಣಪತ್ರವನ್ನು ಪಡೆದುಕೊಂಡಿರುವ ಈ ಚಿತ್ರವು ಯಶಸ್ವಿಯಾದಲ್ಲಿ ವೇಮಗಲ್ ಜಗನ್ನಾಥ್ ರವರಿಗೆ ಒಂದಷ್ಟು ಮೈಲೇಜ್ ಸಿಗಲಿದೆ. ಇಲ್ಲವಾದರೆ ಅವರು ತಮ್ಮ ಕಾರ್ಯಶೈಲಿಯನ್ನು ಒಂದಷ್ಟು ಒರೆಗೆ ಹಚ್ಚಿಕೊಳ್ಳಬೇಕಾಗಿ ಬರಬಹುದು ಎನ್ನುತ್ತಾರೆ ಗಾಂಧಿನಗರದ ಓರ್ವ ಚಿತ್ರೋದ್ಯಮಿ. ಜಗನ್ನಾಥರಿಗೆ ಜಯವಾಗಲಿ ಎನ್ನೋಣವೇ?