ಮಕ್ಕಳಿಗೆ ಕಥೆ ಹೇಳುವಾಗ, 'ಒಂದೂರಲ್ಲಿ ಒಬ್ಬ ರಾಜ ಇದ್ನಂತೆ...' ಎಂದೇ ಶುರುಮಾಡುವುದು ವಾಡಿಕೆ. ಮಕ್ಕಳ ಚಿತ್ರವೊಂದಕ್ಕೆ ಹೆಸರಿಡುವಾಗ ಈ ಸಾಲಿನ ಆರಂಭಿಕ ಪದವನ್ನೇ ಆರಿಸಿಕೊಂಡಿರುವುದು ನಿರ್ದೇಶಕರ ಜಾಣತನಕ್ಕೆ ಸಾಕ್ಷಿಯೆನ್ನಬಹುದೇ?
ಈ ಚಿತ್ರದ ಧ್ವನಿಸುರುಳಿಯನ್ನು ಬೆಂಗಳೂರಿನ ಜಯನಗರದ ಜೆ.ಎಸ್.ಎಸ್. ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ನಡೆಸಲಾಯಿತು. ಬಣ್ಣದ ಲೋಕದ ಮಂದಿಗೆ ಸಂಬಂಧಿಸಿದ ಈ ಸಮಾರಂಭಕ್ಕೆ ಆಗಮಿಸಿದಾಗ ನಾವು ಅಪ್ಪಿ-ತಪ್ಪಿ ಕವಿ ಸಮ್ಮೇಳನಕ್ಕೇನಾದರೂ ಆಗಮಿಸಿಬಿಟ್ಟೆವೇ? ಎಂಬ ಗೊಂದಲ ಅರೆಕ್ಷಣ ಮೂಡಿದ್ದು ಸಹಜ. ಏಕೆಂದರೆ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ, ಕವಿಗಳಾದ ಎಂ.ಎನ್. ವ್ಯಾಸರಾವ್, ಬಿ.ಆರ್. ಲಕ್ಷ್ಮಣರಾವ್, ಎಚ್.ಎಸ್. ವೆಂಕಟೇಶಮೂರ್ತಿ, ಸಾಹಿತಿ ಹಾಗೂ ವಿಚಾರವಾದಿ ಜಿ.ಕೆ. ಗೋವಿಂದರಾವ್, ಸಾಹಿತಿ-ಸಂಗೀತ ನಿರ್ದೇಶಕ ವಿ. ಮನೋಹರ್ ಮುಂತಾದವರ ಹಾಜರಿ ಅಂಥದ್ದೊಂದು ವಾತಾವರಣವನ್ನು ಅಲ್ಲಿ ಸೃಷ್ಟಿಸಿತ್ತು.
ಈ ಹಿಂದೆ 'ಚಿನ್ನಾರಿ ಮುತ್ತ' ಚಿತ್ರಕ್ಕೆ ಹಾಡುಗಳನ್ನು ಬರೆದುಕೊಟ್ಟು ಚಿತ್ರದ ರೂಪರೇಷೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸಾಹಿತಿ ಎಚ್.ಎಸ್. ವೆಂಕಟೇಶ ಮೂರ್ತಿಯವರು 'ಒಂದೂರಲ್ಲಿ....' ಚಿತ್ರದ ಕಥೆ-ಚಿತ್ರಕಥೆಯನ್ನು ರಚಿಸಿರುವುದರೊಂದಿಗೆ ಇದರ ಎಂಟೂ ಹಾಡುಗಳನ್ನು ಬರೆದಿರುವುದು ಮತ್ತೊಂದು ವಿಶೇಷ ಸಂಗತಿ.
ಇದು ಮಕ್ಕಳ ಚಿತ್ರ ಮಾತ್ರವಷ್ಟೇ ಅಲ್ಲ, ಕಣ್ಣು-ಮೂಗು-ಬಾಯಿಯನ್ನು ಕಳೆದುಕೊಂಡಿರುವ ವಿಶೇಷ ಮಕ್ಕಳ ಕುರಿತಾದ ಚಿತ್ರ. ಸಂಪೂರ್ಣ ಅಂಧಮಕ್ಕಳೇ ಈ ಚಿತ್ರದಲ್ಲಿ ನಟಿಸಿದ್ದಾರೆ ಎಂಬುದು ಇಲ್ಲಿನ ಮತ್ತೊಂದು ವಿಶೇಷ. ಚಿತ್ರದ ಅಂಧಬಾಲಕ ಚೆನ್ನಕುಮಾರ ಧ್ವನಿಸುರುಳಿಯನ್ನು ಬಿಡುಗಡೆ ಮಾಡಿದಾಗ, ಈತನಿಂದ ಧ್ವನಿಸುರುಳಿಯನ್ನು ಮಾರುಕಟ್ಟೆಗೆ ತರುತ್ತಿರುವುದು ಚಿತ್ರತಂಡದ ಪರವಾಗಿ ಅವನಿಗೆ ನಾವು ನೀಡುತ್ತಿರುವ ಗೌರವ ಎಂದು ಚಿತ್ರ ನಿರ್ದೇಶಕ ನಿಖಿಲ್ ಮಂಜು ನುಡಿದಾಗ ಎಲ್ಲರ ಹೃದಯ ತುಂಬಿ ಬಂದಿತ್ತು. ಚಿತ್ರಕ್ಕೆ ಜಯಶ್ರೀ ಅರವಿಂದ್ ಸಂಗೀತ ನೀಡಿದ್ದಾರೆ.
ನಿಖಿಲ್ ಮಂಜುರವರ ಆಶಯ ಯಶಸ್ಸಾಗಿ ಪರಿವರ್ತನೆಗೊಳ್ಳಲಿ ಎಂಬುದೇ ನಮ್ಮ ತುಂಬುಹೃದಯದ ಹಾರೈಕೆ.