'ಶ್ರೀಮತಿ'ಯಲ್ಲಿ ತಮ್ಮ ಶ್ರೀಮತಿಯೊಂದಿಗೆ ನಟಿಸಿರುವ ಉಪೇಂದ್ರ
PR
ಎಚ್2ಓ ಚಿತ್ರ ಬೆಳ್ಳಿತೆರೆಯಲ್ಲಿ ರಾರಾಜಿಸಿದಾಗ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕ ಮದುವೆಯಾಗಿರಲಿಲ್ಲ. ಅವರು ದಂಪತಿಗಳಾದ ನಂತರ ಒಟ್ಟಾಗಿ ನಟಿಸಿರುವ 'ಶ್ರೀಮತಿ' ಎಂಬ ಕೌಟುಂಬಿಕ ಚಿತ್ರವು ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ.
ಇತ್ತೀಚೆಗೆ ಬಿಡುಗಡೆಯಾಗಿ ಹಣಗಳಿಕೆಯಲ್ಲಿ ದಾಖಲೆಯನ್ನು ಮಾಡಿದ 'ಸೂಪರ್' ಚಿತ್ರದ ಯಶಸ್ಸು ಉಪೇಂದ್ರರ ಬೆನ್ನಿಗಿದೆ. ಈಗ ಬಿಡುಗಡೆಯಾಗಲಿರುವ 'ಶ್ರೀಮತಿ' ಚಿತ್ರದಲ್ಲಿ ಮೀಸೆ ತೆಗೆದ ರೂಪದಲ್ಲಿ ಉಪೇಂದ್ರ ಕಾಣಿಸಿಕೊಳ್ಳಲಿದ್ದು, ಈ ಚಿತ್ರಕ್ಕೆ ಅಭಿಮಾನಿಗಳು ಎಷ್ಟರಮಟ್ಟಿಗೆ ಪ್ರೋತ್ಸಾಹ ನೀಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
ಉಪೇಂದ್ರ, ಪ್ರಿಯಾಂಕ ಮಾತ್ರವಲ್ಲದೇ ಬಾಲಿವುಡ್ ಬೆಡಗಿ ಸೆಲಿನಾ ಜೇಟ್ಲಿ ಕೂಡಾ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಾನಿಲಾಲ್ ಛಾಯಾಗ್ರಹಣ, ಚಿನ್ನಿಪ್ರಕಾಶ್ ನೃತ್ಯನಿರ್ದೇಶನ, ರಾಜೇಶ್ ರಾಮನಾಥ್ ಸಂಗೀತ ಚಿತ್ರಕ್ಕಿದೆ. ಶಂಕರೇಗೌಡರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
'ಜಸ್ಟ್ ಮಾತ್ ಮಾತಲ್ಲಿ' ಚಿತ್ರದ ಸೋಲು ಹಾಗೂ 'ಕೆಂಪೇಗೌಡ' ಚಿತ್ರದ ಭರ್ಜರಿ ಯಶಸ್ಸಿನ ಮಿಶ್ರಫಲವನ್ನು ಅನುಭವಿಸಿರುವ ನಿರ್ಮಾಪಕ ಶಂಕರೇಗೌಡರು ಇತ್ತೀಚೆಗೆ ಹೈದರಾಬಾದ್‌ನಲ್ಲಿ ಸಿನಿತಾರೆಗಳ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಚೆನ್ನೈ ತಂಡದೆದುರು ಕರ್ನಾಟಕದ ಬುಲ್ಡೋಜರ್ಸ್ ತಂಡವು ಸೋತಾಗ ಪುಟ್ಟ ಮಗುವಿನಂತೆ ಕಣ್ಣೀರು ಹಾಕಿದ್ದರು. ನಿರಂತರವಾಗಿ ಮೂರ್ನಾಲ್ಕು ತಿಂಗಳು ಆಟವನ್ನು ಅಭ್ಯಾಸ ಮಾಡಿ, ಆರಂಭಿಕ ಪಂದ್ಯಗಳಲ್ಲಿ ನಿರಂತರ ಗೆಲುವನ್ನು ಸಾಧಿಸಿದ ಹೊರತಾಗಿಯೂ ಅಂತಿಮ ಪಂದ್ಯದಲ್ಲಿ ಸೋತಿದ್ದಕ್ಕೆ ಅಂದು ಅವರು ನೊಂದುಕೊಂಡಂತಿತ್ತು. 'ಶ್ರೀಮತಿ' ಚಿತ್ರವು ಯಶಸ್ಸನ್ನು ಕಂಡು ಅವರ ನೋವನ್ನು ಮರೆಸಿಹಾಕಲಿ ಎಂದು ಹಾರೈಸೋಣವೇ?