ಕ್ರಿಯಾಶೀಲರಾಗಿದ್ದೂ ಸಮಾನ ದುಃಖಿಗಳಾಗಿರುವ ಅಥವಾ ವಿಫಲರಾಗಿರುವ ಇಬ್ಬರು ಮತ್ತೆ ಒಟ್ಟಿಗೆ ಸೇರಿದಾಗ ಮತ್ತೊಂದು ಸುಂದರ ಕೃತಿ ಸೃಷ್ಟಿಯಾಗಬಹುದೇ? ಗೊತ್ತಿಲ್ಲ. ಆದರೆ ಸದ್ಯದಲ್ಲಿಯೇ ಅಂಥದೊಂದು ಸನ್ನಿವೇಶಕ್ಕೆ ಕನ್ನಡ ಚಿತ್ರರಂಗ ಸಾಕ್ಷಿಯಾಗಲಿದೆ. ಕಾರಣ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಕಲಾಸಾಮ್ರಾಟ್ ಎಸ್. ನಾರಾಯಣ್ ಮತ್ತೆ ಜೊತೆಗೂಡಿದ್ದಾರೆ.
ಈ ಜೋಡಿಯಲ್ಲಿ ಹೊರಹೊಮ್ಮಿದ 'ಚೆಲುವಿನ ಚಿತ್ತಾರ' ಚಿತ್ರವು ಎಂಥಾ ಅದ್ಬುತ ಯಶಸ್ಸನ್ನು ದಾಖಲಿಸಿತು ಎಂಬುದು ನಿಮಗೆಲ್ಲಾ ಗೊತ್ತಿರುವಂಥದ್ದೇ. ಆದರೆ ಅದು ಬಂದ ನಂತರ ಕಾವೇರಿ ನದಿಯಲ್ಲಿ ಸಾಕಷ್ಟು ನೀರು ಹರಿದಿದೆ.
ಅಚಾನಕ್ಕಾಗಿ ಎದುರಾದ ಸನ್ನಿವೇಶದಲ್ಲಿ ತಮ್ಮದೇ ಅಭಿನಯದ 'ಕೂಲ್' ಚಿತ್ರದ ನಿರ್ದೇಶನದ ಹೊಣೆಗಾರಿಕೆಯನ್ನೂ ಹೊರಬೇಕಾಗಿ ಬಂದಾಗ ಗಣೇಶ್ ಹಿಂದೆ-ಮುಂದೆ ನೋಡದೆ ಅದನ್ನು ಒಪ್ಪಿಕೊಂಡರು. ಆದರೆ ಸಾಕಷ್ಟು ಹೋಂವರ್ಕ್ ಮಾಡಿರದ ಕಾರಣಕ್ಕೋ ಅಥವಾ ನಿರಂತರವಾಗಿ ತನ್ನ ಚಿತ್ರಗಳು ಸೋಲುತ್ತಿರುವುದರ ಮುಂದುವರೆದ ಭಾಗ ಎಂಬಂತೆಯೋ 'ಕೂಲ್' ಚಿತ್ರ ಸೋತಿತು.
ಇನ್ನೊಂದು ಕಡೆ, ತಮ್ಮ ಮಗನಿಗೆ ಚಿತ್ರರಂಗದಲ್ಲೊಂದು ಭದ್ರವಾದ ನೆಲೆಯನ್ನು ಕಲ್ಪಿಸಲು ಹೆಣಗಾಡುತ್ತಿರುವ ಎಸ್.ನಾರಾಯಣ್ 'ದುಷ್ಟ' ಎಂಬ ಚಿತ್ರವನ್ನು ನಿರ್ದೇಶಿಸಿದರೂ ಅದರ ಫಲಿತಾಂಶ ಉತ್ತೇಜಕವಾಗಿ ಕಂಡುಬರಲಿಲ್ಲ.
ಈ ನಿಟ್ಟಿನಲ್ಲಿ ಈ ಇಬ್ಬರೂ ಒಂದೆಡೆ ಸೇರಿಕೊಂಡು 'ಶೈಲೂ' ಎಂಬ ಚಿತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದು ತಮಿಳಿನ 'ಮೈನಾ' ಚಿತ್ರದ ರಿಮೇಕ್ ಎಂಬುದು ಗಮನಾರ್ಹ ಸಂಗತಿ. 'ಚೆಲುವಿನ ಚಿತ್ತಾರ'ವೂ ತಮಿಳಿನ 'ಕಾದಲ್' ಚಿತ್ರದ ರಿಮೇಕ್ ಆಗಿತ್ತು.
'ಶೈಲೂ' ಚಿತ್ರದ ನಿರ್ಮಾಪಕ ಕೆ.ಮಂಜು. ಗಣೇಶನ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ನಡೆದಿದ್ದು ಈಗಾಗಲೇ ಬಸವಳಿದಿರುವ ಕೆ.ಮಂಜು, ಎಸ್.ನಾರಾಯಣ್ ಹಾಗೂ ಗಣೇಶ್ ಮೂವರಿಗೂ ಚಿತ್ರವು ಒಳ್ಳೆಯದನ್ನು ಉಂಟುಮಾಡಲಿ ಎಂದು ಹಾರೈಸೋಣ.