'ಮಾಲಾಶ್ರೀ' ಪರಂಪರೆಯನ್ನು ಮುಂದುವರಿಸಲಿರುವ 'ಚೆನ್ನಮ್ಮ ಐ.ಪಿ.ಎಸ್'
PR
ಹೀರೋ ಓರಿಯೆಂಟೆಡ್ ಎನಿಸಿಕೊಂಡಿರುವ ಕನ್ನಡ ಚಿತ್ರರಂಗದಲ್ಲಿ ನಟಿ ಮಾಲಾಶ್ರೀ ಒಂದಷ್ಟು ಕಾಲ 'ಏಕಮೇವಾದ್ವಿತೀಯರಾಗಿ' ಮೆರೆದಿದ್ದರು. 'ಎಸ್.ಪಿ.ಭಾರ್ಗವಿ', 'ಕಿರಣ್ ಬೇಡಿ' ಮೊದಲಾದ ಚಿತ್ರಗಳಲ್ಲಿ ಖಾಕಿಬಟ್ಟೆ ಧರಿಸಿ ಹೂಂಕರಿಸಿದ್ದ ಮಾಲಾಶ್ರೀಗೆ ಸರಿಸಮನಾಗಿ ಯಾರೂ ಹೊರಹೊಮ್ಮಿರಲಿಲ್ಲ. ಆದರೆ ನಾಡಿದ್ದು ಬಿಡುಗಡೆಯಾಗುತ್ತಿರುವ 'ಚೆನ್ನಮ್ಮ ಐ.ಪಿ.ಎಸ್' ಚಿತ್ರ ಇದಕ್ಕೆ ಉತ್ತರ ನೀಡಲಿದೆ ಎನ್ನುತ್ತದೆ ಚಿತ್ರತಂಡ.
ಈ ಹಿಂದೆ ಥ್ರಿಲ್ಲರ್ ಮಂಜು ನಿರ್ದೇಶನದ 'ಜಯಹೇ' ಚಿತ್ರದಲ್ಲಿನ ಸಾಹಸಮಯ ದೃಶ್ಯಗಳಲ್ಲಿ ಮಿಂಚಿ 'ಲೇಡಿ ಬ್ರೂಸ್ಲಿ' ಎಂದೇ ಹೆಸರು ಪಡೆದಿದ್ದ ಆಯಿಷಾ 'ಚೆನ್ನಮ್ಮ ಐ.ಪಿ.ಎಸ್' ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದು ಅದು ಮಹಿಳೆಯರು ಪೊಲೀಸ್ ಅಧಿಕಾರಿಗಳ ಪಾತ್ರದಲ್ಲಿ ಹೂಂಕರಿಸುವ ಪರಂಪರೆಗೆ ಮತ್ತೊಮ್ಮೆ ಜೀವ ನೀಡಲಿದೆ ಎಂಬ ಸೆನ್ಸೇಷನ್ ಗಾಂಧಿನಗರದ ತುಂಬಾ ಹಬ್ಬಿದೆ.
ಈ ಚಿತ್ರಕ್ಕೆ 'ಚೆನ್ನಮ್ಮ' ಎಂಬ ಹೆಸರನ್ನು ಇಟ್ಟಿದ್ದಕ್ಕೆ ಅಲ್ಲಲ್ಲಿ ಕೇಳಿಬಂದಿರುವ ವಿವಾದಗಳಿಗೆ ನಿರ್ದೇಶಕ ಆನಂದ್ ಪಿ. ರಾಜ್ ತಮ್ಮ ಸಮರ್ಥನೆಯನ್ನು ನೀಡುತ್ತಾ, ಈ ಚಿತ್ರದ ನಾಯಕಿ ಕಿತ್ತೂರು ರಾಣಿ ಚೆನ್ನಮ್ಮನಂತೆಯೇ ವೀರಾವೇಶದಿಂದ ಹೋರಾಡುವ ಸ್ವಭಾವವನ್ನು ಹೊಂದಿದ್ದು ಅದರಿಂದ ಪ್ರೇರಿತರಾಗಿ ಈ ಹೆಸರನ್ನು ಇಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.
ಈ ಚಿತ್ರಕ್ಕೆ ಕೌರವ ವೆಂಕಟೇಶ್ ರವರು ಸಂಯೋಜಿಸಿರುವ ಸಾಹಸ ದೃಶ್ಯಗಳನ್ನು ಚಿತ್ರದ ಪ್ರಥಮ ಪ್ರತಿಯ ಹಂತದಲ್ಲಿ ನೋಡಿರುವ ಕೆಲವರು ಹೇಳುವ ಪ್ರಕಾರ ಚಿತ್ರವು ಹೊಸತೊಂದು ಟ್ರೆಂಡ್ ಸೃಷ್ಟಿಸಲಿದೆ ಹಾಗೂ ನಾಯಕಿ ಆಯಿಷಾರ ಸ್ಥಾನವನ್ನು ಭದ್ರಪಡಿಸಲಿದೆ. ಆರ್.ಎಸ್.ಗೌಡ ನಿರ್ಮಾಣದ ಈ ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆಯನ್ನು ಬರೆದಿದ್ದು, ರಾಜೇಶ್ ರಾಮನಾಥ್ ಸಂಗೀತ ನೀಡಿದ್ದಾರೆ.
'ಮಕ್ಕಳನ್ನು ಕಾಪಾಡಲು ಎಲ್ಲಾ ಸಂದರ್ಭಗಳಲ್ಲೂ ತಾನಿರಲು ಸಾಧ್ಯವಾಗೋಲ್ಲ ಎಂಬ ಕಾರಣಕ್ಕೆ ದೇವರು ಭೂಮಿಯ ಮೇಲೆ ತಾಯಂದಿರನ್ನು ಸೃಷ್ಟಿಸಿದ' ಎಂಬ ಜಾಣೋಕ್ತಿ ಕನ್ನಡದಲ್ಲಿ ಚಾಲ್ತಿಯಲ್ಲಿರುವುದನ್ನು ನೀವು ಕೇಳಿರಬಹುದು. ಅದನ್ನೇ ಸ್ವಲ್ಪ ಬದಲಿಸಿ, 'ದೇವರು ದುಷ್ಟರ ಸಂಹಾರಕ್ಕೋಸ್ಕರ ತಾನು ಬರೋಕ್ಕಾಗಲ್ಲ ಅಂತಾನೇ ನನ್ನಂಥವರಿಗೆ ಜನ್ಮಕೊಟ್ಟು ನಿನ್ನಂಥ ದುಷ್ಟರನ್ನು ಸಂಹಾರ ಮಾಡೋಕ್ಕೆ ಹೇಳ್ತಾನೆ' ಎಂಬ ಸಂಭಾಷಣೆಯನ್ನು ಮಧು ಬರೆದಿದ್ದಾರಂತೆ. ಅದನ್ನು ಪ್ರಚಾರ ಸಾಮಗ್ರಿಗಳಲ್ಲಿ ಬಳಸಿಕೊಳ್ಳಲಾಗಿದ್ದು ಅದು ನಿರೀಕ್ಷೆ ಹೆಚ್ಚಲು ಕಾರಣವಾಗಿದೆ.