ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಮಿಸ್ಟರ್ ಡೂಪ್ಲಿಕೇಟ್' ಚಿತ್ರದ ಯಶಸ್ಸಿಗಾಗಿ ಕಾದಿರುವ ಕೋಡ್ಲು ರಾಮಕೃಷ್ಣ (Prajwal Devaraj | Mr. Duplicate | Diganth | Kodlu ramakrishna)
'ಮಿಸ್ಟರ್ ಡೂಪ್ಲಿಕೇಟ್' ಚಿತ್ರದ ಯಶಸ್ಸಿಗಾಗಿ ಕಾದಿರುವ ಕೋಡ್ಲು ರಾಮಕೃಷ್ಣ
PR
ನವಿರಾದ ಹಾಸ್ಯವುಳ್ಳ ಕಥೆಗಳನ್ನು ನಿರ್ದೇಶಿಸುವುದರಲ್ಲಿ ಕೋಡ್ಲು ರಾಮಕೃಷ್ಣ ಎತ್ತಿದಕೈ. ಅವರ ನಿರ್ದೇಶನದ 'ಉದ್ಭವ', 'ಯಾರಿಗೂ ಹೇಳ್ಬೇಡಿ', 'ತಮಾಷೆಗಾಗಿ' ಮೊದಲಾದ ಚಿತ್ರಗಳನ್ನು ಈ ನಿಟ್ಟಿನಲ್ಲಿ ನೆನಪಿಸಿಕೊಳ್ಳಬಹುದು. ಆದರೆ ಈಚೀಚೆಗೆ ಅವರ ಚಿತ್ರಗಳು ಯಶಸ್ಸಿನಿಂದ ವಿಮುಖವಾಗಿದ್ದವು. ಹೀಗಾಗಿ ಒಂದು ಹಿಟ್ ಚಿತ್ರವನ್ನು ನೀಡಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಉಮೇದಿನಲ್ಲಿರುವ ಕೋಡ್ಲು ರಾಮಕೃಷ್ಣ ಅದಕ್ಕಾಗಿ 'ಮಿಸ್ಟರ್ ಡೂಪ್ಲಿಕೇಟ್' ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.
'ಮಿಸ್ ಕ್ಯಾಲಿಫೋರ್ನಿಯಾ' ಚಿತ್ರದ ಮೂಲಕ ತಮಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟ ಕೋಡ್ಲುರವರಿಗೆ ಗೌರವವನ್ನು ಸೂಚಿಸುವ ಸಲುವಾಗಿ ನಟ ದಿಗಂತ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಮತ್ತೊಂದು ಪಾತ್ರದಲ್ಲಿ ಪ್ರಜ್ವಲ್ ದೇವರಾಜ್ ನಟಿಸಿದ್ದು, 'ಸಿಕ್ಸರ್' ಚಿತ್ರದ ನಂತರ ಯಶಸ್ಸನ್ನು ಅಷ್ಟಾಗಿ ದಾಖಲಿಸದ ಅವರಿಗೂ ಈ ಚಿತ್ರದ ಯಶಸ್ಸು ಅನಿವಾರ್ಯವೆನಿಸಿದೆ. ಇನ್ನೊಂದು ವಿಶೇಷವೆಂದರೆ ಅವರ ತಂದೆ ದೇವರಾಜ್ ಕೂಡಾ ಈ ಚಿತ್ರದಲ್ಲಿ ನಟಿಸಿದ್ದಾರೆ.
ರಿಯಲ್ ವೆಲ್ತ್ ವೆಂಚರ್ ಲಾಂಛನದಲ್ಲಿ ತಯಾರಾಗಿರುವ ಈ ಚಿತ್ರದ ನಿರ್ಮಾಪಕರು ಕಶ್ಯಪ್ ದಾಕೋಜು. ರಾಘವರವರ ಕಥೆ ಮತ್ತು ಸಂಭಾಷಣೆ ಚಿತ್ರಕ್ಕಿದ್ದು ಸ್ವತಃ ಕೋಡ್ಲು ರಾಮಕೃಷ್ಣ ಚಿತ್ರಕಥೆಯನ್ನು ಬರೆದಿದ್ದಾರೆ. ಹರಿಕೃಷ್ಣರ ಅಲೆಯಲ್ಲಿ ಕೊಂಚಕಾಲ ದೂರಸರಿದಿದ್ದ ಮನೋಮೂರ್ತಿ ಈ ಚಿತ್ರಕ್ಕೆ ಸಂಗೀತವನ್ನು ನೀಡಿದ್ದು ಅದು ಎಷ್ಟರಮಟ್ಟಿಗೆ ಚಿತ್ರವನ್ನು ಯಶಸ್ಸಿನ ದಡ ಮುಟ್ಟಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನುಳಿದಂತೆ ನವೀನ್ ಸುವರ್ಣರ ಛಾಯಾಗ್ರಹಣ, ಬಸವರಾಜ ಅರಸ್ ಅವರ ಸಂಕಲನ, ನಾಗರಾಜ ರಾವ್ ಅವರ ಸಹ-ನಿರ್ದೇಶನ ಚಿತ್ರಕ್ಕಿದ್ದು ಸುರೇಶ್ ರಾವ್ ಮತ್ತು ದಿನಕರ್ ಚಂದು ಸಹ-ನಿರ್ದೇಶಕರಾಗಿದ್ದಾರೆ.