'ರೆಬೆಲ್' ಅನ್ನೋದು ನಮ್ಮ ಟ್ರೇಡ್ ಮಾರ್ಕು ಕಣ್ರೀ: ರಾಜೇಂದ್ರಸಿಂಗ್ ಬಾಬು
PR
ನಿರ್ಮಾಪಕ-ನಿರ್ದೇಶಕ ರಾಜೇಂದ್ರಸಿಂಗ್ ಬಾಬುರವರು ಈ ಮಾತನ್ನು ಸಾಕಷ್ಟು ಆತ್ಮವಿಶ್ವಾಸದಿಂದಲೇ ಹೇಳಿದರು. ಇದಕ್ಕೆ ಅವರ ಮಗ ಆದಿತ್ಯನೂ ದನಿಗೂಡಿಸಿದರು. ಕೆಲ ದಿನಗಳಿಂದ ಚಾಲ್ತಿಯಲ್ಲಿದ್ದ ಗೊಂದಲಗಳು ಮತ್ತು ಗಾಳಿಸುದ್ದಿಗಳನ್ನು ಓಡಿಸುವುದಕ್ಕೆ ಈ ಮಾತುಗಳು ನಾಂದಿಯಾದವು.
ಅದು ನಾಯಕನಟ ಆದಿತ್ಯ ಅಭಿನಯದ 'ರೆಬೆಲ್' ಚಿತ್ರವು ಸೆಟ್ಟೇರಿದ ಸಂದರ್ಭ. ಕೆಲವು ವರ್ಷಗಳ ಹಿಂದೆ ಬಂದಿದ್ದ 'ಲವ್' ಎಂಬ ಚಿತ್ರದಲ್ಲಿ ತಮ್ಮ ಮಗನನ್ನು ನಿರ್ದೇಶಿಸಿದ್ದ ರಾಜೇಂದ್ರಸಿಂಗ್ ಬಾಬು ಈಗ ಮತ್ತೊಮ್ಮೆ ಈ ಚಿತ್ರದ ಮೂಲಕ ತೊಡಗಿಸಿಕೊಂಡಿದ್ದಾರೆ. ಇದು ಅಪ್ಪ-ಮಕ್ಕಳಿಬ್ಬರಿಗೂ ಅದೃಷ್ಟ-ಪರೀಕ್ಷೆಯ ಚಿತ್ರವೆನ್ನಬಹುದೇನೋ? ಏಕೆಂದರೆ ಇಬ್ಬರೂ ಪ್ರತ್ಯೇಕವಾಗಿ ಹಿಟ್ ಚಿತ್ರಗಳನ್ನು ನೀಡಿ ಬಹಳ ಕಾಲವಾಯಿತು.
ಇದಕ್ಕೂ ಮುಂಚೆ ಪ್ರಿಯಾ ಹಾಸನ್ ಪ್ರಧಾನ ತಾರಾಗಣದಲ್ಲಿರುವ 'ರೆಬೆಲ್' ಎಂಬ ಶೀರ್ಷಿಕೆಯ ಚಿತ್ರವನ್ನು ನಿರ್ಮಾಪಕ ಗಣೇಶ್ ನಿರ್ಮಿಸಲಿದ್ದಾರೆ ಎಂದು ಪ್ರಕಟಣೆಗಳು ಹೊರಬಿದ್ದಿದ್ದವು. ಆದರೆ ಸದರಿ ಹೆಸರನ್ನು ತಮ್ಮ ಬ್ಯಾನರ್ ಅಡಿಯಲ್ಲಿ ನೋಂದಾಯಿಸಲಾಗಿತ್ತು ಹಾಗೂ ಇದು ಕಳೆದ ಮೂರು ವರ್ಷಗಳಿಂದಲೂ ತಮ್ಮ ಸುಪರ್ದಿಯಲ್ಲಿತ್ತು ಎಂದು ಆದಿತ್ಯ ಔಪಚಾರಿಕವಾಗಿ ಹೇಳುವ ಮೂಲಕ ಎಲ್ಲಾ ಗೊಂದಲಗಳಿಗೂ ಮಂಗಳ ಹಾಡಿದ್ದಾರೆ.
ಏನಿಲ್ಲವೆಂದರೂ ಹತ್ತು ನಿರ್ಮಾಪಕರು ಈ ಹೆಸರನ್ನು ಬಿಟ್ಟುಕೊಡುವಂತೆ ಆದಿತ್ಯರನ್ನು ಕೇಳಿದ್ದರಂತೆ ಹಾಗೂ ಸಾಕಷ್ಟು ಹಣವನ್ನೂ ಆಫರ್ ಮಾಡಿದ್ದರಂತೆ. ಆದರೆ ಅದ್ಯಾವುದಕ್ಕೂ ಜಗ್ಗದ ಆದಿತ್ಯ ಈಗ ತಾವೇ ನಿರ್ಮಾಣಕ್ಕಿಳಿದು ತಂದೆಯವರನ್ನು ನಿರ್ದೇಶನ ಪಟ್ಟದಲ್ಲಿ ಕೂರಿಸಿದ್ದಾರೆ.
ದಶಕಗಳ ಹಿಂದೆ 'ಅಂತ' ಚಿತ್ರದ ಮೂಲಕ ಅಂಬರೀಷ್‌ಗೆ 'ರೆಬೆಲ್ ಸ್ಟಾರ್' ಪಟ್ಟವನ್ನು ಕಟ್ಟಿಕೊಟ್ಟಿದ್ದ ಇದೇ ರಾಜೇಂದ್ರಸಿಂಗ್ ಬಾಬು, ತಮ್ಮ ಮಗನನ್ನು ಉದ್ಯಮದಲ್ಲಿ ಹೇಗೆ ಮೇಲೇರಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
ಚಿತ್ರಕ್ಕೆ ಜೆಸ್ಸಿಗಿಫ್ಟ್ ಸಂಗೀತ, ಎಂ.ಎಸ್.ರಮೇಶ್ ಸಂಭಾಷಣೆ, ಕಿಟ್ಟಿ ರಂಗಮಂಚ ಸಹ-ನಿರ್ದೇಶನ, ಡಿಫರೆಂಟ್ ಡ್ಯಾನಿ ಮತ್ತು ರವಿವರ್ಮರ ಸಾಹಸ, ಇಸ್ಮಾಯಿಲ್ ನೃತ್ಯ ನಿರ್ದೇಶನವಿದ್ದು ಮೈಸೂರು ಡ್ರೀಮ್ ಮರ್ಚೆಂಟ್ಸ್ ಅಡಿಯಲ್ಲಿ ಚಿತ್ರವು ಅರ್ಪಣೆಯಾಗುತ್ತಿದೆ. ಅಪ್ಪ-ಮಕ್ಕಳಿಗೆ ಶುಭ ಹಾರೈಸೋಣ.