'ನಮ್ ಏರಿಯಾಲಿ ಒಂದ್ ದಿನ' ಎಂಬ ಚಿತ್ರ ಈ ಹಿಂದೆ ಬಂದಿತ್ತು ಎಂಬುದು ನಿಮಗೆ ಗೊತ್ತಿರಬಹುದು. ತಾಜಾ ತಾಜಾ ಆಗಿರುವ ಆಲೋಚನೆಗಳು, ವಿಭಿನ್ನ ನಿರೂಪಣಾ ತಂತ್ರಗಳಿಂದ ಈ ಚಿತ್ರ ಜನಮೆಚ್ಚುಗೆಯನ್ನು ಗಳಿಸಿತ್ತು. ಕಿರುತೆರೆಯ ನಟ ಅರವಿಂದ್ ಕೌಶಿಕ್ ನಿರ್ದೇಶಕರಾಗಿ ತಮ್ಮನ್ನು ಗುರುತಿಸಿಕೊಂಡ ಚಿತ್ರವಿದು.
ಅವರದೇ ನಿರ್ದೇಶನದ 'ತುಘಲಕ್' ಚಿತ್ರ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆಯಂತೆ. ಮೊದಲ ಚಿತ್ರಕ್ಕೆ ಬೊಂಬಾಟ್ ಪ್ರಚಾರವನ್ನು ದಕ್ಕಿಸಿಕೊಂಡಿದ್ದ ಕೌಶಿಕ್ ಈ ಚಿತ್ರವನ್ನು ಸದ್ದುಗದ್ದಲವಿಲ್ಲದೆ, ಮಾಧ್ಯಮಗಳಲ್ಲಿ ಪ್ರಚಾರವಿಲ್ಲದೆ ಸಂಪೂರ್ಣಗೊಳಿಸಿರುವುದು ವಿಶೇಷ.
ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ವೈಟ್ ಐರ್ ಎಂಟರ್‌ಟೈನ್ಮೆಂಟ್ ಸಂಸ್ಥೆ ಇದನ್ನು ನಿರ್ಮಿಸಿದೆ. ರಕ್ಷಿತ್ ಶೆಟ್ಟಿ, ಮೇಘನಾ ಗಾಂವ್ಕರ್ ಹಾಗೂ ಅನೂಷಾ ಎಂಬ ಹೊಸ ಮುಖ ಈ ಚಿತ್ರದ ಪ್ರಧಾನ ಪಾತ್ರಧಾರಿಗಳಾಗಿದ್ದಾರೆ.
ತುಘಲಕ್ ಎಂದ ಕೂಡಲೇ ನಮ್ಮ ನೆನಪಿಗೆ ಬರುವುದು ರಂಗಮಂಚದ ಮೇಲೆ ಪ್ರದರ್ಶನಗೊಂಡ ತುಘಲಕ್ ನಾಟಕ; ಸಾಹಿತಿ-ನಿರ್ದೇಶಕ ಗಿರೀಶ್ ಕಾರ್ನಾಡ್ ಮತ್ತು ನಟ-ನಿರ್ದೇಶಕ ಸಿ.ಆರ್.ಸಿಂಹ. ಇಬ್ಬರೂ ಸಹ ಈ ಕೃತಿಯಿಂದ ಸಾಕಷ್ಟು ಪ್ರಸಿದ್ದಿಯನ್ನು ಪಡೆದಿದ್ದರು. ಈಗ ಸದರಿ 'ತುಘಲಕ್' ಚಿತ್ರವು ಸಂಬಂಧಪಟ್ಟ ಕಲಾವಿದರು ಮತ್ತು ತಂತ್ರಜ್ಞರಿಗೆ ಯಾವ ಮಟ್ಟದ ಯಶಸ್ಸನ್ನು ತಂದುಕೊಡಲಿದೆ ಎಂಬುದನ್ನು ಕಾದುನೋಡಬೇಕಿದೆ.