ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಉತ್ತರ ದಿಕ್ಕಿಗೆ ಚಾಚಲಿರುವ ದಕ್ಷಿಣದ 'ದಿಗಂತ': ಕೈಗೂಡಲಿ ಕನಸು (Diganth | Pancharangi | Bolly Wood | Kannada Movies)
PR
ದಕ್ಷಿಣ ಭಾರತದ ನಟ-ನಟಿಯರು ಇಲ್ಲಿ ಒಂದು ಮಟ್ಟದ ಯಶಸ್ಸನ್ನು ದಾಖಲಿಸಿದ ನಂತರ ಹಿಂದಿ ಚಿತ್ರರಂಗದಲ್ಲಿ ಒಂದು ಕೈನೋಡಲು ಬಯಸುವುದು ಅನೂಚಾನವಾಗಿ ಬೆಳೆದುಬಂದಿರುವ ಸಂಪ್ರದಾಯ. ಆದರೆ ನಟರಿಗಿಂತ ನಟಿಯರೇ ಈ ನಿಟ್ಟಿನಲ್ಲಿ ಯಶಸ್ಸು ಕಂಡರು ಎಂದು ಹೇಳಬಹುದು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ದಕ್ಷಿಣದವರೇ ಆದ ರೇಖಾ, ಶ್ರೀದೇವಿ, ಹೇಮಾಮಾಲಿನಿ, ತಬು, ದೀಪಿಕಾ ಪಡುಕೋಣೆ ಮೊದಲಾದವರನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು. ಆದರೆ ನಟರಿಗೆ ಈ ಭಾಗ್ಯವು 'ಓಹೋ' ಎಂಬಷ್ಟರ ಮಟ್ಟಿಗೆ ಲಭ್ಯವಾಗಲಿಲ್ಲ. ಕಮಲಹಾಸನ್, ರಜನೀಕಾಂತ್, ಮಾಧವನ್ ಮೊದಲಾದವರು ಈ ಪಟ್ಟಿಗೆ ಸೇರುತ್ತಾರೆ.

ನಮ್ಮಲ್ಲೂ ಈ ಬಗೆಯ ಪ್ರಯತ್ನಗಳು ನಡೆದವು. ವಿಷ್ಣುವರ್ಧನ್ ರವರು 'ಏಕ್ ನಯಾ ಇತಿಹಾಸ್' ಎಂಬ ಚಿತ್ರದಲ್ಲಿ ಹೇಮಾಮಾಲಿನಿಯವರೊಂದಿಗೆ ಕಾಣಿಸಿಕೊಂಡರು. ನಂತರದಲ್ಲಿ 'ಇನ್ಸ್‌ಪೆಕ್ಟರ್ ಧನುಷ್‌', 'ಖಾಕಿವರ್ದಿ' ಮೊದಲಾದ ಚಿತ್ರಗಳಲ್ಲಿ ಅವರು ನಟಿಸಿದರೂ ಸಹ ಅದು ಅವರ ಮಹತ್ವಾಕಾಂಕ್ಷೆಯ ಮಟ್ಟಕ್ಕಿರಲಿಲ್ಲ.

ಇನ್ನು ನಮ್ಮ 'ಕಿಚ್ಚ' ಸುದೀಪ್‌ರವರು ರಾಮ್ ಗೋಪಾಲ್ ವರ್ಮರ 'ರಣ್', 'ಫೂಂಕ್' ಚಿತಗಳಲ್ಲಿ ನಟಿಸಿಬಂದರು. ದಶಕಗಳಷ್ಟು ಹಿಂದೆಯೇ ಅನಂತ್‌ನಾಗ್ ಈ ಪ್ರಯತ್ನವನ್ನು ಮಾಡಿದ್ದರು. ಇವೆಲ್ಲವೂ ಚಿತ್ರಗಳ ಪಟ್ಟಿಗೆ ಸೇರಿಕೊಂಡ ಹೆಸರುಗಳಾದವಷ್ಟೇ.

'ದೂಧ್ ಪೇಡಾ' ಎಂದು ಕರೆಸಿಕೊಳ್ಳುವ ದಿಗಂತ್‌ಗೆ ಹಿಂದಿ ಚಿತ್ರರಂಗದ ಮಣಿಶಂಕರ್ ಆಹ್ವಾನ ನೀಡಿದ್ದಾರಂತೆ. 16 ಡಿಸೆಂಬರ್, ನಾಕೌಟ್, ರುದ್ರಾಕ್ಷಿ ಹಾಗೂ 'ಟ್ಯಾಂಗೋಚಾರ್ಲಿ' ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದು ಇದೇ ಮಣಿಶಂಕರ್ ಎಂಬುದಿಲ್ಲಿ ಗಮನಾರ್ಹ ಸಂಗತಿ.

ಒಂದು ಪಕ್ಷ ಮಾತುಕತೆಗಳು ಪಕ್ಕಾ ಆಗಿ ಕಾಲ್ ಶೀಟ್ ಹೊಂದಾಣಿಕೆಯಾಗಿದ್ದೇ ಆದಲ್ಲಿ, ದಕ್ಷಿಣದ ಚಾಕೊಲೇಟ್ ನಟನೊಬ್ಬ ಹಿಂದಿಯಲ್ಲಿ ಮಿಂಚುವುದಕ್ಕೆ ವೇದಿಕೆಯೊಂದು ಸಿದ್ಧವಾದಂತಾಗುತ್ತದೆ ಎನ್ನಬಹುದು.

ಆದರೆ ಉತ್ತರಕ್ಕೆ ಏಣಿಹಾಕಲು ಹೊರಟಿರುವ ದಿಗಂತ್‌ಗೆ ಒಂದಷ್ಟು ಹಿತನುಡಿಗಳನ್ನು ಕನ್ನಡಿಗರ ಪರವಾಗಿ ಹೇಳಬೇಕಾದುದು ಅಗತ್ಯವೆನಿಸುತ್ತದೆ. ಹಿಂದಿ ಚಿತ್ರರಂಗವು ಅಪ್ಪಟ ವೃತ್ತಿಪರತೆಯನ್ನು ಬಯಸುವ ವಲಯ. ಅಲ್ಲಿ ಸೌಂದರ್ಯ-ಅಭಿನಯ ಸಾಮರ್ಥ್ಯಗಳಷ್ಟೇ ಅಲ್ಲದೇ ಅಲ್ಲಿನ ಕುಳಗಳೊಂದಿಗಿನ ಸಂಪರ್ಕವನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕಾಗುತ್ತದೆ.

ಈ ಸಂದರ್ಭದಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ವರ್ಷಗಳ ಹಿಂದೆ ಉಲ್ಲೇಖಿಸಿದ್ದ ಒಂದು ಸಂಗತಿಯನ್ನು ಇಲ್ಲಿ ಹಂಚಿಕೊಳ್ಳುವುದು ಸೂಕ್ತವೆನಿಸುತ್ತದೆ. ನಾಗತಿಹಳ್ಳಿಯವರು 'ನನ್ನ ಪ್ರೀತಿಯ ಹುಡುಗಿ' ಚಿತ್ರಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದ ಸಂದರ್ಭವದು. ಹೊಸ ಮುಖಗಳ ತಲಾಶೆಯಲ್ಲಿದ್ದ ಅವರು ಅದಕ್ಕಾಗಿ ಮಾಧ್ಯಮಗಳ ಮೂಲಕ ಮತ್ತು ವೃತ್ತಿಬಾಂಧವರ ಮೂಲಕ ಕರೆ ನೀಡಿದ್ದರು.

ಈ ಸಂದರ್ಭದಲ್ಲಿ ಹಾಜರಿದ್ದ ಬಹುತೇಕ ಕನ್ನಡ ಹುಡುಗರು ಒಂದು ಪೂರ್ವಸಿದ್ಧತೆಯೇ ಇಲ್ಲದೆ ಅಥವಾ ವೈಯಕ್ತಿಕ ಆಸಕ್ತಿ-ಅಭಿರುಚಿ-ಸಾಮರ್ಥ್ಯಗಳ ಕುರಿತಾದ ಒಂದು 'ಪ್ರೊಫೈಲ್'ನ್ನು ಸಿದ್ಧಮಾಡಿಕೊಳ್ಳದೆ ಸಂದರ್ಶನಕ್ಕೆ ಹಾಜರಾಗಿದ್ದರಂತೆ. 'ಹೇಗೂ ಕರೆಬಂದಿದೆ, ಒಂದು ಕೈ ನೋಡೋಣ' ಎಂಬಂಥ ಧೋರಣೆಯಿದ್ದ ಬಹುತೇಕರು ಈ ಕುರಿತಾದ ಗಂಭೀರ ಸ್ವರೂಪದ ಆಶಯವನ್ನೇ ಹೊಂದಿರಲಿಲ್ಲವಂತೆ.

ಇಂಥ ಸಂದರ್ಭದಲ್ಲಿ ಸಮೀರ್ ದತ್ತಾನಿ ಎಂಬ ಮುಂಬೈ ಹುಡುಗ ಅಪ್ಪಟ ವೃತ್ತಿಪರತೆಯನ್ನು ಮೆರೆದು ಸಂಬಂಧಿತ ದಾಖಲಾತಿಗಳನ್ನು ಸಾದರಪಡಿಸಿ, ಪಾತ್ರಕ್ಕೆ ಆಯ್ಕೆಯಾದನಂತೆ. ಆತ ಬೇರಾರೂ ಅಲ್ಲ, ಈಗ ಎಲ್ಲರಿಂದ ಪ್ರೀತಿಯಿಂದ 'ಧ್ಯಾನ್' ಎಂದು ಕರೆಸಿಕೊಳ್ಳುತ್ತಿರುವ ಹುಡುಗ.

ಈ ಚಿತ್ರದ ನಂತರ 'ಮೊನಾಲಿಸಾ', 'ಜಾಕ್ ಪಾಟ್' ಹೀಗೆ ಹಲವು ಚಿತ್ರಗಳಲ್ಲಿ ಧ್ಯಾನ್ ಕಾಣಿಸಿಕೊಂಡರು. ಕನ್ನಡದ ಹುಡುಗ ದಿಗಂತ್ ಇವನ್ನೆಲ್ಲಾ ಗಮನದಲ್ಲಿಟ್ಟುಕೊಂಡಿರಲಿ ಎಂದು ಇಷ್ಟೆಲ್ಲಾ ಹೇಳಬೇಕಾಯಿತು. ಅವರು ಅಲ್ಲಿ ಯಶಸ್ಸು ಕಂಡಲ್ಲಿ ಅದು ಕನ್ನಡಿಗರಿಗೆ ಸಿಕ್ಕ ಯಶಸ್ಸಲ್ಲವೇ?

ಬೆಸ್ಟ್ ಆಫ್ ಲಕ್ ದಿಗಂತ್.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ