ಚಿತ್ರವು ಸಿದ್ಧಗೊಂಡು ಸಾಕಷ್ಟು ತಿಂಗಳುಗಳು ಕಳೆದಿದ್ದರೂ ಬಿಡುಗಡೆಯ ಭಾಗ್ಯವನ್ನು ಕಂಡಿರಲಿಲ್ಲ. ಈಗ ಅದು ಸದ್ಯದಲ್ಲಿಯೇ ಬಿಡುಗಡೆಯಾಗುತ್ತಿರುವುದರ ಹಿನ್ನೆಲೆಯಲ್ಲಿ ಚಿತ್ರಕ್ಕೆ ರಾಜ್ಯವ್ಯಾಪಿ ಪ್ರಚಾರ ನೀಡಲು ಚಿತ್ರತಂಡ ನಿರ್ಧರಿಸಿದ್ದು, ಈಗ ಸಂಗೀತಬ್ರಹ್ಮ ಹಂಸಲೇಖಾರಿಗೆ ಸನ್ಮಾನ ಮಾಡುವ ಮೂಲಕ ಅದಕ್ಕೆ ತಂಡವು ಚಾಲನೆ ನೀಡಿತು. ಹಂಸಲೇಖಾರವರು ಚಿತ್ರಸಂಗೀತ ನಿರ್ದೇಶನದಲ್ಲಿ 300 ಚಿತ್ರಗಳನ್ನು ಸಂಪೂರ್ಣ ಮಾಡಿರುವ ಶುಭಪರ್ವದಲ್ಲಿಯೇ ಈ ಸಮಾರಂಭ ನಡೆದಿದ್ದು ವಿಶೇಷವೆನಿಸಿತ್ತು.
ಈ ಸಂದರ್ಭದಲ್ಲಿ ಗೀತರಚನೆಕಾರ ಹಾಗೂ ಸದರಿ ಚಿತ್ರದ ನಿರ್ದೇಶಕ ನಾಗೇಂದ್ರಪ್ರಸಾದ್ ಮಾತನಾಡುತ್ತಾ, “ಸತತವಾಗಿ 300 ಚಿತ್ರಗಳಿಗೆ ಸಂಗೀತ ನೀಡುವುದು ಸುಲಭದ ಮಾತಲ್ಲ. ಈ ಸಾಧನೆಯನ್ನು ಮಾಡುವ ಮೂಲಕ ಹಂಸಲೇಖಾರು ಏಷ್ಯಾದ ಸಂಗೀತ ದಿಗ್ಗಜರ ಸಾಲಿಗೆ ಸೇರಿದ್ದಾರೆ; ಅವರನ್ನು ಸನ್ಮಾನಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ” ಎಂದು ಅಭಿಪ್ರಾಯಪಟ್ಟರು.
ಸನ್ಮಾನ ಸ್ವೀಕರಿಸಿ ಹಂಸಲೇಖಾರು ಮಾತನಾಡುತ್ತಾ, “ಇಲ್ಲಿಗೆ ಬರುವ ಮುಂಚೆ ಕಾರ್ಯಕ್ರಮದ ಸ್ವರೂಪ ನನಗೆ ತಿಳಿದೇ ಇರಲಿಲ್ಲ; ಹಾಗಾಗಿ ನನಗೆ ಇದೊಂದು ಅನಿರೀಕ್ಷಿತ ಸನ್ನಿವೇಶ. ನಾಗೇಂದ್ರ ಪ್ರಸಾದ್ ಮತ್ತು ಸಂಗೀತ ನಿರ್ದೇಶಕ ಹರಿಕೃಷ್ಣ ಇಬ್ಬರೂ ನನ್ನ ಶಿಷ್ಯರೇ. ಈ ಇಬ್ಬರ ಜೋಡಿ ಹಾಡುಗಳ ಮೂಲಕ ಮೋಡಿ ಮಾಡಿದೆ” ಎಂದು ತಿಳಿಸಿದರು.
ಹಂಸಲೇಖಾರವರು ತಮ್ಮ ಮಾತುಗಳನ್ನು ಮುಂದುವರೆಸುತ್ತಾ, “ಕನ್ನಡ ಚಿತ್ರರಂಗದಲ್ಲಿ ಸಾಹಿತ್ಯ-ಸಂಭಾಷಣೆ ರಚಿಸಲು ಯಾರ ಅಪ್ಪಣೆಯನ್ನೂ ಪಡೆಯಬೇಕಿಲ್ಲ. ಪ್ರತಿಭೆ ಇದ್ದವ ಇಲ್ಲಿ ನಿಲ್ಲುತ್ತಾನೆ ಎಂದು ಸಾಹಿತಿ ಚಿ.ಉದಯಶಂಕರ್ ಹಿಂದೊಮ್ಮೆ ಹೇಳಿದ್ದರು. ಅದನ್ನೇ ನಾನು ಪಾಲಿಸಿಕೊಂಡು ಬಂದಿದ್ದೇನೆ. ಚಿತ್ರಕ್ಕೆ ಯಶಸ್ಸು ಸಿಗಲಿ” ಎಂದು ಹಾರೈಸಿದರು. ಸಾಹಿತಿ ಮಳವಳ್ಳಿ ಸಾಯಿಕೃಷ್ಣ, ನಾಗೇಂದ್ರ ಪ್ರಸಾದ್, ವಿಜಯ ರಾಘವೇಂದ್ರ, ಹರಿಕೃಷ್ಣ, ಮೇಘನಾ ಗಾಂವ್ಕರ್ ಸೇರಿದಂತೆ ಚಿತ್ರತಂಡದ ಹಲವು ಮಂದಿ ಈ ಸಂದರ್ಭದಲ್ಲಿ ಹಾಜರಿದ್ದರು.