ಹಾಗೊಂದು ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ರವಿಶಂಕರ್‌ರವರದು ಸೂಪರ್‌ಹಿಟ್ ಎನ್ನುವಂಥ ಚಿತ್ರಗಳೇ ಬಂದಿಲ್ಲ, ಇನ್ನು ಅಭಿಮಾನಿಗಳೆಲ್ಲಿಂದ ಬರಬೇಕು? ಎಂದು ನೀವು ಕೇಳಬಹುದು. ಆದರೆ ರವಿಶಂಕರ್‌ರವರು ಕಿರುತೆರೆಯ ಸೂಪರ್‌ಸ್ಟಾರ್ ಆಗಿದ್ದವರು ಎಂಬುದನ್ನು ನಾವು-ನೀವು ಮರೆಯುವಂತಿಲ್ಲ. ಹೌದು.
ಈ-ಟಿವಿಯಲ್ಲಿ ಬಿತ್ತರಗೊಳ್ಳುತ್ತಿದ್ದ ‘ಸಿಲ್ಲಿ-ಲಲ್ಲಿ’ ಧಾರಾವಾಹಿಯಲ್ಲಿ ರವಿಶಂಕರ್ ಡಾ.ವಿಟ್ಠಲ್‌ರಾವ್ ಆಗಿ ನಟಿಸಿದ್ದರು. ಆ ಧಾರಾವಾಹಿ ಮತ್ತು ಅವರ ಪಾತ್ರ ಅದೆಷ್ಟು ಜನಪ್ರಿಯವಾಗಿತ್ತೆಂದರೆ, ಪ್ರತಿದಿನ ಸಂಜೆ ಏಳು ಗಂಟೆಯಾಗುವುದನ್ನೇ ಕಾಯುವಂತಾಗುತ್ತಿತ್ತು. ಆದರೆ ಅದೇಕೋ ಏನೋ ರವಿಶಂಕರ್‌ರವರಿಗೂ ಹಿರಿತೆರೆಯ ಗೀಳುಹತ್ತಿತು. ‘ಪಯಣ’ ಎಂಬ ಚಿತ್ರದಲ್ಲಿ ನಟಿಸಲು ಅಣಿಯಾಗುವುದಕ್ಕಾಗಿ ಡಾ.ವಿಟ್ಠಲ್‌ರಾವ್ ಪಾತ್ರಕ್ಕೆ ರವಿಶಂಕರ್ ಗುಡ್‌ಬೈ ಹೇಳಬೇಕಾಯಿತು.
‘ಪಯಣ’ ಚಿತ್ರದ ಹಾಡುಗಳೆಲ್ಲವೂ ಚೆನ್ನಾಗಿದ್ದರೂ ಚಿತ್ರ ಯಶಸ್ಸು ಕಾಣಲಿಲ್ಲ. ಇದಾದ ನಂತರ ‘ನಂಜನಗೂಡಿನ ನಂಜುಂಡ’, ‘ಮಿಸ್ಟರ್ ಪೇಂಟರ್’ ಎಂಬ ಚಿತ್ರಗಳಲ್ಲಿ ರವಿಶಂಕರ್ ಕಾಣಿಸಿಕೊಂಡರೂ ಅವು ಹಿಟ್ ಚಿತ್ರಗಳೆನಿಸಿಕೊಳ್ಳಲಿಲ್ಲ. ಈ ಹಿಂದೆ ‘ಪಾಪ ಪಾಂಡು’ ಧಾರಾವಾಹಿಯಲ್ಲಿ ನಟಿಸುತ್ತಿರುವ ಸಂದರ್ಭದಲ್ಲಿ ಯಶಸ್ಸಿನ ಉತ್ತುಂಗತೆಯಲ್ಲಿದ್ದ ಪಾಂಡು ಪಾತ್ರಧಾರಿ ಚಿದಾನಂದ ಇದೇ ರೀತಿಯಲ್ಲಿ ತಮ್ಮ ಪಾತ್ರಕ್ಕೆ ಗುಡ್‌ಬೈ ಹೇಳಿ ಚಿತ್ರರಂಗಕ್ಕೆ ಕಾಲಿರಿಸಿದ್ದರೂ ವಿಫಲರಾಗಿದ್ದನ್ನು ನೋಡಿರುವ ರವಿಶಂಕರ್ ಅಭಿಮಾನಿಗಳು ಅವರಿಗೂ ಹಾಗೆಯೇ ಆಗುವುದೇ ಎಂಬ ನಿರಾಶೆಯಲ್ಲಿದ್ದಾರೆ ಎಂಬುದಂತೂ ಸತ್ಯ.
ಇಲ್ಲಿ ಇನ್ನೊಂದು ಫ್ಲಾಶ್‌ಬ್ಯಾಕ್ ಹೇಳಲಿಕ್ಕಿದೆ. ಡಾ.ರಾಜ್‌ಕುಮಾರ್‌ರವರು ರವಿಶಂಕರ್‌ರವರ ಅಪ್ಪಟ ಅಭಿಮಾನಿಯಾಗಿದ್ದರಂತೆ ಹಾಗೂ ಸಿಲ್ಲಿ-ಲಲ್ಲಿ ಧಾರಾವಾಹಿಯನ್ನು ಬಿಡದೇ ನೋಡುತ್ತಿದ್ದರಂತೆ. ಮುಂದೆಂದಾದರೂ ತಾವು ಮತ್ತೊಮ್ಮೆ ‘ಶ್ರೀಕೃಷ್ಣ-ರುಕ್ಮಿಣಿ-ಸತ್ಯಭಾಮ’ ಚಿತ್ರದಲ್ಲಿ ನಟಿಸಿದ್ದೇ ಆದಲ್ಲಿ ಅದರಲ್ಲಿ ಮಕರಂದನ ಪಾತ್ರಕ್ಕೆ ಈ ಡಾ.ವಿಟ್ಠಲ್‌ರಾವ್‌ನ್ನೇ ಹಾಕ್ಕೋಬೇಕು ಎಂದು ಮನೆಯವರ ಬಳಿ ಹೇಳುತ್ತಿದ್ದರಂತೆ. ಆದರೆ ಈ ವಿಷಯ ರವಿಶಂಕರ್‌ವರಿಗೆ ಗೊತ್ತಾದದ್ದು ಅಣ್ಣಾವ್ರು ಮರಣಿಸಿದ ನಂತರ ಎಂಬುದು ವಿಷಾದನೀಯ.
ಅಭಿಮಾನಿಗಳು ತಮ್ಮಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದು ರವಿಶಂಕರ್‌ಗೂ ಗೊತ್ತಿದೆ. ಡಾ.ವಿಟ್ಠಲ್‌ರಾವ್ ರೀತಿಯ ಎಡಬಿಡಂಗಿ ಪಾತ್ರ ಅಥವಾ ಸಂಪೂರ್ಣ ಹಾಸ್ಯಚಿತ್ರದಲ್ಲಿ ಅವರು ಚೆನ್ನಾಗಿ ಅಭಿನಯಿಸಬಲ್ಲರು. ಆ ಕುರಿತು ಕಥೆ-ಚಿತ್ರಕಥೆಯ ಕೃಷಿಯಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡರೆ ಅವರಿಗೂ ಅವರ ಅಭಿಮಾನಿಗಳಿಗೂ ತೃಪ್ತಿ ತರಬಲ್ಲ ಚಲನಚಿತ್ರವು ರೂಪುಗೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಬೆಸ್ಟ್ ಆಫ್ ಲಕ್ ರವಿಶಂಕರ್...!!