ಇದು ವಾಹಿನಿಗಳ ವೀಕ್ಷಕರ ಪ್ರಶ್ನೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕಾರ್ತಿಕ ದೀಪ’ ಎಂಬ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದ ಅವರು ತಮ್ಮೊಂದಿಗಿದ್ದ ಚಿತ್ರೀಕರಣ ತಂಡದಲ್ಲಿ ಕಂಡುಬಂದ ಅಸಹಕಾರಿ ಮನೋಭಾವದಿಂದ ತಾವು ನೊಂದಿರುವುದನ್ನು ಮಾಧ್ಯಮದ ಮಿತ್ರರ ಮುಂದೆ ಹೇಳಿಕೊಳ್ಳುವ ಉದ್ದೇಶದಿಂದ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಆದರೆ ಪತ್ರಿಕಾ ಗೋಷ್ಠಿಯು ಶುರುವಾಗುತ್ತಿದ್ದಂತೆ ಅಲ್ಲಿಯೇ ಕುಸಿದುಬಿದ್ದರು ಎಂಬ ಸುದ್ದಿಗಳನ್ನು ಈಗಾಗಲೇ ಓದಿದ್ದೀರಿ.
ಇಲ್ಲಿ ಪ್ರಶ್ನೆಯೇಳುವುದು ಚಿತ್ರರಂಗ ಅಥವಾ ಟಿವಿ ಮಾಧ್ಯಮದಲ್ಲಿ ಕಂಡುಬರುವ ಅಸ್ಥಿರತೆಯ ಬಗ್ಗೆ. ಹಿರಿಯೂರು ರಾಘವೇಂದ್ರ ನಿನ್ನೆ ಮೊನ್ನೆ ಉದ್ಯಮಕ್ಕೆ ಬಂದವರಲ್ಲ. ಈಗಾಗಲೇ ನೂರಾರು ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ, ಕನ್ನಡ ಪರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ, ಪತ್ರಿಕೆಗಳಲ್ಲಿನ ಬರಹಗಳ ರೂಪದಲ್ಲಿ ತಮ್ಮನ್ನು ಸಾದರಪಡಿಸಿಕೊಂಡಿದ್ದಾರೆ, ಸಂಗೀತದ ಜ್ಞಾನವೂ ಇದೆ. ಒಂದು ರೀತಿಯಲ್ಲಿ ಅವರದು ಬಹುಮುಖ ಪ್ರತಿಭೆ. ಹೀಗಿರುವಾಗ ಸಹಜವಾಗಿಯೇ ಅವರಿಗೆ ಉದ್ಯಮದ ಆಳ-ಅಗಲಗಳು ಗೊತ್ತಿರಬೇಕಾಗುತ್ತದೆ. ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುವಂಥ ಸನ್ನಿವೇಶವು ಎದುರಾಗುವವರೆಗೆ ಅವರು ತಡೆದುಕೊಂಡಿದ್ದೇಕೆ? ಇದಕ್ಕೆ ಅವರು ಉಲ್ಲೇಖಿಸಿದ್ದಕ್ಕಿಂತಲೂ ಬೇರೆಯದೇ ಆದ ಕಾರಣಗಳೇನಾದರೂ ಇವೆಯೇ? ಎಂಬುದೀಗ ಯಕ್ಷಪ್ರಶ್ನೆಗಳಾಗಿ ಉಳಿದಿವೆ.
ತೀರಾ ಇತ್ತೀಚೆಗೆ ನಟ ಹರೀಶ್‌ರಾಜ್ ‘ಗನ್’ ಎಂಬ ಚಿತ್ರವನ್ನು ಸಂತೋಷ್ ಚಿತ್ರಮಂದಿರದಿಂದ ತೆಗೆದುಹಾಕಿ ಬೇರೊಂದು ಚಿತ್ರಕ್ಕೆ ಅವಕಾಶ ನೀಡಲಾಗುತ್ತಿದೆ ಎಂದು ಆರೋಪಿಸಿ ಆತ್ಮಹತ್ಯೆಗೆ ಮುಂದಾಗಿದ್ದರು. ನಿರ್ದೇಶಕ ಸಾಯಿಪ್ರಕಾಶ್‌ರವರು ತಮ್ಮ ನಿರ್ಮಾಣ-ನಿರ್ದೇಶನದ ‘ದೇವರು ಕೊಟ್ಟ ತಂಗಿ’ ಚಿತ್ರವು ವಿಫಲಗೊಂಡ ಹಿನ್ನೆಲೆಯಲ್ಲಿ ಹೀಗೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.
ಈ 3 ನಿದರ್ಶನಗಳಲ್ಲಿ ಸಂಬಂಧಪಟ್ಟವರು ಆ ಕ್ಷಣದ ಭಾವೋದ್ವೇಗದಲ್ಲಿ ಈ ತೆರನಾದ ಕ್ರಮಗಳಿಗೆ ಮುಂದಾಗಿರಬಹುದು. ಆದರೂ ಆತ್ಮಹತ್ಯೆ ಎಂಬುದು ಇದಕ್ಕೆ ಉತ್ತರವನ್ನು ದೊರಕಿಸಿಕೊಡಲಾರದು ಎಂಬುದನ್ನಿಲ್ಲಿ ಅರ್ಥಮಾಡಿಕೊಳ್ಳಬೇಕಾಗುತ್ತದೆ.
ನೂರಾರು ಧಾರಾವಾಹಿಗಳನ್ನು ನಿರ್ದೇಶಿಸಿದ ಕಿರುತೆರೆಯ ನಿರ್ದೇಶಕ ಹಾಗೂ ಕಡಿಮೆ ಬಜೆಟ್-ಕಡಿಮೆ ದಿನಗಳಲ್ಲಿ ಚಿತ್ರಗಳನ್ನು ರೂಪಿಸಿಕೊಟ್ಟು ನಿರ್ಮಾಪಕರ ಹಿತಕಾಯುವ ನಿರ್ದೇಶಕ ಎಂದು ಹೆಸರು ಪಡೆದ ಚಲನಚಿತ್ರ ನಿರ್ದೇಶಕ ಇಂಥ ಪ್ರಯತ್ನಕ್ಕೆ ಮುಂದಾಗುವುದಾದರೆ, ದೃಶ್ಯ ಮಾಧ್ಯಮದಲ್ಲಿ ಅನುಭವಿಗಳಾಗಿದ್ದೂ ವೃತ್ತಿಬದುಕಲ್ಲಿ ಅಸ್ಥಿರತೆಯನ್ನು ಎದುರಿಸುತ್ತಿರುವವರಿದ್ದಾರೆ ಎಂದು ಭಾವಿಸಬೇಕೇ? ಸಂಬಂಧಪಟ್ಟವರು ಇದಕ್ಕೆ ಉತ್ತರಿಸಬೇಕು.