ಇಂಥದೊಂದು ಹುರುಪು ಕನ್ನಡ ಚಿತ್ರರಂಗಕ್ಕೆ ಬೇಕಿತ್ತು. ಅಭಿಮಾನಿಗಳು ಹೀಗೆ ಕುಣಿದು ಕುಪ್ಪಳಿಸುವುದನ್ನು ನೋಡಿ ತಿಂಗಳುಗಳೇ ಕಳೆದಿದ್ದವು ಎಂದು ಗಾಂಧಿನಗರದ ಪಂಡಿತರೊಬ್ಬರು ಇತ್ತೀಚೆಗೆ ಉದ್ಗರಿಸಿದರು. ಅವರು ಹೀಗೆ ಹೇಳಿದ್ದು 'ವಿನಾಯಕ ಗೆಳೆಯರ ಬಳಗ' ಚಿತ್ರತಂಡವು ಊರೂರುಗಳಲ್ಲಿ ಹಮ್ಮಿಕೊಂಡಿರುವ ‘ಸ್ಟ್ರೀಟ್ ಷೋ’ ಕುರಿತಾಗಿ ಮತ್ತು ಅದರಲ್ಲಿ ಕಲಾವಿದರು-ಅಭಿಮಾನಿಗಳು ಪಾಲ್ಗೊಳ್ಳುತ್ತಿರುವುದನ್ನು ಕಂಡು.
ಈಗಾಗಲೇ ಚಿತ್ರದುರ್ಗ, ದಾವಣಗೆರೆ, ಹೊಸಪೇಟೆ, ಕೊಪ್ಪಳ ಹಾಗೂ ಗಂಗಾವತಿಗಳಲ್ಲಿ ತಂಡಕ್ಕೆ ವಿಜೃಂಭಣೆಯ ಸ್ವಾಗತ ದೊರೆತಿದ್ದು, ಇದರ ಮುಂದುವರೆದ ಭಾಗವಾಗಿ ಸಿಂಧನೂರು, ರಾಯಚೂರು, ಗುಲ್ಬರ್ಗ, ಬಿಜಾಪುರ, ಬಾಗಲಕೋಟೆ, ಬೆಳಗಾಂ, ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ, ಹೊನ್ನಾವರ, ಶಿವಮೊಗ್ಗ, ಹಾಸನ, ಮೈಸೂರು ಮತ್ತು ಮಂಡ್ಯ ಮೊದಲಾದ ಕಡೆಗಳಲ್ಲಿ ಚಿತ್ರತಂಡದ ಸದಸ್ಯರು ವಿಭಿನ್ನವಾಗಿ ಕಾರ್ಯಕ್ರಮಗಳನ್ನು ಸಂಘಟಿಸಲಿರುವುದು ರಾಜ್ಯಾದ್ಯಂತ ಸಂಚಲನೆಯನ್ನೇ ಸೃಷ್ಟಿಸಿದೆ.
ನಿರ್ಮಾಣಗೊಂಡು ಸಾಕಷ್ಟು ದಿನಗಳು ಕಳೆದಿದ್ದರೂ ಕಾರಣಾಂತರದಿಂದ ಬಿಡುಗಡೆಯಾಗಿರದಿದ್ದ ಈ ಚಿತ್ರವು ವಿಭಿನ್ನವಾಗಿರುವ ತನ್ನ ಹಾಡುಗಳಿಂದ ಈಗಾಗಲೇ ಜನರ ಮನಸ್ಸನ್ನು ಸೆಳೆದಿದೆ. 'ನೋಡಿ ನೋಡಿ ಸ್ವಾಮಿ ನಾವ್ ಇರೋದು ಹೀಗೆ' ಎಂಬ ಹಾಡು ವಾಹಿನಿಗಳಲ್ಲಿ ಬರುತ್ತಿದ್ದರೆ ಚಿಕ್ಕಮಕ್ಕಳೂ ಬಂದು ಕುಣಿಯಲು ಶುರುಮಾಡುತ್ತವೆ. ಇನ್ನು ಎಪ್ಪತ್ತರ ದಶಕದ ನಾಯಕ-ನಾಯಕಿಯರಂತೆ ವೇಷಭೂಷಣಗಳನ್ನು ಧರಿಸಿಕೊಂಡು ವಿಜಯ ರಾಘವೇಂದ್ರ ಮತ್ತು ಮೇಘನಾ ಗಾಂವ್ಕರ್ ಕಾಣಿಸಿಕೊಳ್ಳುವ ಹಾಡಂತೂ ಪಡ್ಡೆ ಹುಡುಗರು ಮತ್ತು ನಡುವಯಸ್ಕರ ಗಮನವನ್ನು ಸೆಳೆದಿದೆ.
ಗೀತಸಾಹಿತಿ ಮತ್ತು ನಿರ್ದೇಶಕ ನಾಗೇಂದ್ರ ಪ್ರಸಾದ್ ನಿರ್ದೇಶನದ ಈ ಚಿತ್ರಕ್ಕೆ 'ಓಡುತ್ತಿರುವ ಸಂಗೀತದ ಕುದುರೆ' ಹರಿಕೃಷ್ಣ ಸಂಗೀತ ನೀಡಿದ್ದಾರೆ. ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆಯನ್ನು ಬರೆದಿದ್ದಾರೆ. ಈ ಚಿತ್ರವನ್ನು ನೋಡಬೇಕೆಂದರೆ ನೀವು ಈ ತಿಂಗಳ 15ರವರೆಗೂ ಕಾಯಬೇಕು. ಚಿತ್ರತಂಡಕ್ಕೆ ಶುಭಹಾರೈಕೆಗಳು.