ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಆಲದ ಮರದಂಥ ಹಿನ್ನೆಲೆಯಿದ್ದರೂ ಹೆಣಗಾಡುತ್ತಿರುವ ಆದಿತ್ಯ (Adithya | Rajendra Singh babu | Deadly Soma | Rebel)
PR
ಕೆಲವರಿಗೆ ಹೀಗಾಗುತ್ತದೆ. ಚಿತ್ರರಂಗದಲ್ಲಿ ತೊಡಗಿಸಿಕೊಳ್ಳಲು ಯಾವುದೇ ಅಡೆತಡೆಯಿರುವುದಿಲ್ಲ. ಅವಕಾಶಗಳಿಗೆ ಕೊರತೆಯಿರುವುದಿಲ್ಲ. ಆದರೆ ತಮ್ಮ ಚಿತ್ರಗಳ ಮೂಲಕ ತಮ್ಮದೇ ಆದ ಛಾಪನ್ನು ಒತ್ತಲು ಅದ್ಯಾವುದೋ ಕಾಣದ ಕೈ ಅಡ್ಡಿಮಾಡುತ್ತಿರುತ್ತದೆ. ಅಂಥ ಕಾಣದ ಶಕ್ತಿ ಯಾವುದು ಎಂದು ಕಂಡುಕೊಳ್ಳುವುದರಲ್ಲೇ ಕೆಲವರು ಬಹಳ ದಿನಗಳನ್ನು ವ್ಯಯಿಸಬೇಕಾಗುತ್ತದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ನಾಯಕ ನಟ ಆದಿತ್ಯರನ್ನು ನೋಡಿದಾಗೆಲ್ಲಾ ಇದು ನೆನಪಿಗೆ ಬರುತ್ತದೆ. ಇವರದು ಆಲದ ಮರದಂಥ ಹಿನ್ನೆಲೆಯಿರುವ ಕುಟುಂಬ. ಅಪ್ಪ ಯಶಸ್ವೀ ನಿರ್ಮಾಪಕ-ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು, ಮಹಾತ್ಮಾ ಪಿಕ್ಚರ್ಸ್‌ನಂಥ ಸಂಸ್ಥೆಯನ್ನು ಹುಟ್ಟುಹಾಕಿದ ಶಂಕರ್‌ಸಿಂಗ್‌ ಇವರ ತಾತ, ಪ್ರತಿಮಾ ದೇವಿಯಂಥ ಮಹಾನ್‌ ಕಲಾವಿದೆ ಇವರ ಅಜ್ಜಿ, ನಟಿ-ವಸ್ತ್ರ ವಿನ್ಯಾಸಕಿ-ನಿರ್ಮಾಪಕಿ-ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್‌ ಇವರ ಚಿಕ್ಕಮ್ಮ, ಹಲವು ಮಹೋನ್ನತ ಚಿತ್ರಗಳನ್ನು ನಿರ್ಮಿಸಿದ ಬ್ಯಾನರ್‌.... ಹೀಗೆ ಬಣ್ಣದ ಲೋಕವೇ ಮನೆಯಲ್ಲಿ ಕಾಲುಮುರಿದುಕೊಂಡು ಬಿದ್ದಿದೆ.

ಇಂಥ ಹಿನ್ನೆಲೆಯಿರುವ ಆದಿತ್ಯ 'ಡೆಡ್ಲಿ ಸೋಮ'ದಂಥ ಒಂದೆರಡು ಚಿತ್ರಗಳನ್ನು ಹೊರತುಪಡಿಸಿದರೆ ಉದ್ಯಮದಲ್ಲಿ ಕಾಲೂರಲು ಇನ್ನೂ ಹೆಣಗಾಡುತ್ತಿರುವುದು ಅಚ್ಚರಿಯ ಸಂಗತಿ. ಈಗ ಅವರ ಅಪ್ಪ ರಾಜೇಂದ್ರಸಿಂಗ್‌ರವರೇ ಮೈಕೊಡವಿಕೊಂಡು ಎದ್ದು ನಿಂತು ಮಗನ ಚಿತ್ರವನ್ನು ನಿರ್ದೇಶಿಸಲು ಮುಂದಾಗಿದ್ದಾರೆ. 'ರೆಬೆಲ್‌' ಎಂಬ ಚಿತ್ರವು ಈ ಇಬ್ಬರಿಗೂ ಒಂದು ನೆಲೆಯನ್ನು ಕಲ್ಪಿಸಿದರೆ ಅದೊಂದು ಸಂತೋಷದ ಸಂಗತಿಯೇ.

ಈ ನಿಟ್ಟಿನಲ್ಲಿ ಆದಿತ್ಯ ಕೂಡಾ ಒಂದಷ್ಟು ಹೋಂವರ್ಕ್‌, ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತೆನಿಸುತ್ತದೆ. ಹೊಡೆದಾಟ-ಬಡಿದಾಟದ ಚಿತ್ರಗಳು, ಲಾಂಗು-ಮಚ್ಚಿನ ಝಳಪಿಸುವಿಕೆಯ ಚಿತ್ರಗಳು ಆ ಕ್ಷಣಕ್ಕೆ ಕೆಲವೊಂದು ಅಭಿಮಾನಿಗಳಿಗೆ ಹಿಡಿಸಬಹುದೇನೋ. ಆದರೆ ಕಲಾವಿದನೊಬ್ಬ ಬಹಳ ದಿನಗಳವರೆಗೆ ಉದ್ಯಮದಲ್ಲಿ ಕಾಲೂರಿ ನಿಲ್ಲಬೇಕೆಂದರೆ ಗಟ್ಟಿಯಾದ ಕಥೆ-ಚಿತ್ರಕಥೆಯನ್ನು ಒಳಗೊಂಡ ನಿರೂಪಣಾ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಬೇಕಾಗುತ್ತದೆ.

'ಹೀರೋಯಿಸಂ' ಎಂಬುದು ಒಂದು ಹಂತದವರೆಗೆ ಮಾತ್ರವೇ ನೆರವಾಗಬಲ್ಲದು. ಆದರೆ ಮನಮುಟ್ಟುವ ಕಥೆ ಮಾತ್ರ ಎಂದೆಂದಿಗೂ ಜನರ ಮನದಲ್ಲಿ ನಿಲ್ಲುತ್ತದೆ. 'ಬಂಗಾರದ ಮನುಷ್ಯ', 'ಬೂತಯ್ಯನ ಮಗ ಅಯ್ಯು', 'ನಾಗರಹಾವು', 'ಸನಾದಿ ಅಪ್ಪಣ್ಣ' ಮೊದಲಾದ ಚಿತ್ರಗಳು ಈಗ ಬಿಡುಗಡೆಯಾದರೂ ದಾಖಲೆ ನಿರ್ಮಿಸುತ್ತವೆ. ಅದು ಹೇಗೆ ಸಾಧ್ಯವಾಯಿತು ಎಂಬುದನ್ನು ಅವಲೋಕಿಸಿದರೆ, ಸದರಿ ಚಿತ್ರಗಳ ನಿರ್ಮಾಣದ ಸಮಯದಲ್ಲಿ ಯಾವ ಮಟ್ಟದ 'ಕೃಷಿ' ನಡೆದಿತ್ತು ಎಂಬ ಸತ್ಯ ಅನಾವರಣಗೊಳ್ಳುತ್ತದೆ. ಆ ಬಗೆಯ ಶ್ರಮ ಮತ್ತು ಕೃಷಿಯಲ್ಲಿ ಆದಿತ್ಯ ತಮ್ಮನ್ನು ತೊಡಗಿಸಿಕೊಳ್ಳಲಿ. ಬೆಸ್ಟ್‌ ಆಫ್‌ ಲಕ್‌ ಆದಿತ್ಯ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ