ಗಾಂಧಿನಗರದಲ್ಲಿ ಚಿತ್ರವೊಂದರ ಕುರಿತು ನಿರೀಕ್ಷೆಗಳು ಹುಟ್ಟಿಕೊಳ್ಳಬೇಕೆಂದರೆ ಅವಕ್ಕೆ ಅದರದ್ದೇ ಆದ ಮೂಲಗಳಿರುತ್ತವೆ. ಚಿತ್ರದ ಬಿಡುಗಡೆಗೆ ಮುಂಚಿತವಾಗಿ ಆಡಿಯೋ ಸೂಪರ್‌ಹಿಟ್ ಆಗಿದ್ದರೆ, ಚಿತ್ರಕ್ಕೆ ವೈಭವಪೂರ್ಣ ದೃಶ್ಯಗಳ ಅಥವಾ ತಾಂತ್ರಿಕತೆಯ ಚೌಕಟ್ಟನ್ನು ಲಗತ್ತಿಸಿದ್ದರೆ, ಅತಿರಥ-ಮಹಾರಥರೆಂಬಂಥ ಕಲಾವಿದರು ನಟಿಸಿದ್ದರೆ, ಚಿತ್ರದ ಕಥೆಯು ಮುದ್ರಣ ಮಾಧ್ಯಮದಲ್ಲಾಗಲೇ ಒಂದು ಮಟ್ಟದ ಯಶಸ್ಸನ್ನು ದಾಖಲಿಸಿದ್ದರೆ, ಅನ್ಯಭಾಷೆಯಲ್ಲಿ ಸೂಪರ್‌ಹಿಟ್ ಆಗಿರುವ ಚಿತ್ರವನ್ನು ಕನ್ನಡದಲ್ಲಿ ಪುನರ್-ನಿರ್ಮಿಸಿದ್ದರೆ... ಹೀಗೆ ಚಿತ್ರವೊಂದರ ಕುರಿತು ನಿರೀಕ್ಷೆಗಳನ್ನು ಇಟ್ಟುಕೊಳ್ಳಲು ಹಲವಾರು ಕಾರಣಗಳಿವೆ.
ಪ್ರಸ್ತುತ 'ಶ್ರೀಮತಿ' ಚಿತ್ರದ ಕುರಿತು ನಿರೀಕ್ಷೆಗಳು ಹೆಚ್ಚಿರಲು ಮೂಲಸ್ವರೂಪದಲ್ಲಿ ಅದು ದಾಖಲಿಸಿದ ಅಪೂರ್ವ ಯಶಸ್ಸೇ ಕಾರಣ. ಹಿಂದಿಯಲ್ಲಿ ಬಿಡುಗಡೆಯಾಗಿ ಗಳಿಕೆಯಲ್ಲಿ ದಾಖಲೆಯನ್ನು ನಿರ್ಮಿಸಿದ 'ಐತ್‌ರಾಜ್' ಚಿತ್ರವನ್ನು ಆಧರಿಸಿ 'ಶ್ರೀಮತಿ' ಚಿತ್ರವನ್ನು ನಿರ್ಮಿಸಿರುವುದೇ ನಿರೀಕ್ಷೆಯು ಹೆಚ್ಚಲು ಕಾರಣವಾಗಿದೆ.
ಹಿಂದಿ ಆವೃತ್ತಿಯಲ್ಲಿ ಅಕ್ಷಯ್ ಕುಮಾರ್ ಮತ್ತು ಕರೀನಾ ಕಪೂರ್ ವಹಿಸಿದ್ದ ಪಾತ್ರವನ್ನು ಕನ್ನಡದಲ್ಲಿ ಉಪೇಂದ್ರ ಮತ್ತು ಅವರ ಶ್ರೀಮತಿ ಪ್ರಿಯಾಂಕ ನಿರ್ವಹಿಸಿದ್ದರೆ, ಹಿಂದಿ ಆವೃತ್ತಿಯಲ್ಲಿ ಪ್ರಿಯಾಂಕಾ ಚೋಪ್ರಾ ವಹಿಸಿದ್ದ ಪಾತ್ರವನ್ನು ಕನ್ನಡದಲ್ಲಿ ಸೆಲಿನಾ ಜೆಟ್ಲಿ ನಿರ್ವಹಿಸಿದ್ದಾರೆ.
ಚಿತ್ರದಲ್ಲಿನ ಗಂಡ-ಹೆಂಡತಿಯ ಪಾತ್ರವನ್ನು ನಿಜ ಜೀವನದಲ್ಲೂ ದಂಪತಿಗಳಾದ ಉಪೇಂದ್ರ ಮತ್ತು ಪ್ರಿಯಾಂಕಾ ವಹಿಸಿರುವುದು ಕುತೂಹಲವನ್ನು ಕೆರಳಿಸಿದ್ದರೆ, ಉಪೇಂದ್ರ ಇದರಲ್ಲಿ ಮೀಸೆ-ರಹಿತರಾಗಿರುವುದು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ.
ಇನ್ನೊಂದು ತಮಾಷೆಯೆಂದರೆ ಹಿಂದಿ ಆವೃತ್ತಿಯಲ್ಲಿ ಪ್ರಿಯಾಂಕಾ ಚೋಪ್ರಾ ವಹಿಸಿದ್ದ ಪಾತ್ರವನ್ನು ನಿರ್ವಹಿಸುವಂತೆ ಮೊದಲಿಗೆ ಇದೇ ಸೆಲಿನಾ ಜೆಟ್ಲಿಯನ್ನು ಕೇಳಿಕೊಳ್ಳಲಾಗಿತ್ತಂತೆ. ಅವರು ನಿರಾಕರಿಸಿದಾಗ ಅದು ಚೋಪ್ರಾ ಪಾಲಾಯಿತು.
ಆದರೆ ಅದು ಅಭೂತಪೂರ್ವ ಯಶಸ್ಸನ್ನು ಕಂಡಿದ್ದರಿಂದ ಕನ್ನಡದಲ್ಲಿ ಈ ಪಾತ್ರಕ್ಕಾಗಿ ಕರೆಬಂದಾಗ ಹಿಂದೆ-ಮುಂದೆ ನೋಡದೆ ಸೆಲಿನಾ ಒಪ್ಪಿಕೊಂಡಿರುವುದು ಪಾತ್ರ ಹಾಗೂ ಚಿತ್ರಕತೆಯ ಗಟ್ಟಿತನಕ್ಕೆ ಸಾಕ್ಷಿಯಾಗಿದೆ ಎಂದು ಗಾಂಧಿನಗರಿಗರು ಅಭಿಪ್ರಾಯಪಡುತ್ತಿದ್ದಾರೆ. ಇದು ಚಿತ್ರಕ್ಕೆ ಗೆಲುವು ತಂದುಕೊಡುವ ಅಂಶವಾಗಲಿದೆ ಎಂಬುದು ಚಿತ್ರಪಂಡಿತರ ಅಭಿಪ್ರಾಯ.
ಈ ಚಿತ್ರದ ಕಥೆಯು ವಿಭಿನ್ನವಾಗಿರುವುದರಿಂದ, ತಮ್ಮ ಪತ್ನಿ ಪ್ರಿಯಾಂಕ ಹಾಗೂ ಕೆಲವು ಮಹಿಳಾ ಅಭಿಮಾನಿಗಳು ಪಾತ್ರಕ್ಕೆಂದು ಮೀಸೆಯನ್ನು ತೆಗೆಯಲು ಒತ್ತಾಯಿಸಿದ್ದೇ ಉಪೇಂದ್ರರ ಹೊಸ ಗೆಟಪ್‌ಗೆ ಕಾರಣವಂತೆ. ಪತ್ನಿಗೆ ಸಂಪೂರ್ಣ ನಿಷ್ಠನಾಗಿರುವ ವ್ಯಕ್ತಿಯೋರ್ವನಿಗೆ ಮಹಿಳೆಯೊಬ್ಬಳು ತನ್ನ ವೈಯಕ್ತಿಕ ಕಾರಣದಿಂದ ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದಾಗ ಮತ್ತು ಇಡೀ ಪರಿಸ್ಥಿತಿಯೇ ಪತಿಗೆ ಎದುರಾಗಿ ನಿಂತಾಗ ಹೆಂಡತಿಯು ತನ್ನ ಗಂಡನ ನೆರವಿಗೆ ಬಂದು ನಿಜ ಸಂಗತಿಯನ್ನು ಎಲ್ಲರಿಗೂ ಮನದಟ್ಟುಮಾಡಿಕೊಡುವುದು ಚಿತ್ರದ ಕಥೆ. ಆದರೆ ಅದು ಹೇಗಾಯಿತು ಎಂಬುದನ್ನು ನೋಡಲು ನೀವು ನಾಡಿದ್ದಿನವರೆಗೂ ಕಾಯಬೇಕು.
ಪ್ರಾಯಶಃ 'ಪ್ರೀತ್ಸೆ' ಚಿತ್ರದ ನಂತರ ಈ ಬಗೆಯ ಚಿತ್ರವೊಂದು ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ. ವಿದೇಶಗಳಲ್ಲಿ ಚಿತ್ರೀಕರಿಸಿರುವ ಹಾಡುಗಳು ಈಗಾಗಲೇ ಜನಪ್ರಿಯವಾಗಿವೆ. ಜಾನಿಲಾಲ್ ಛಾಯಾಗ್ರಹಣ, ಚಿನ್ನಿಪ್ರಕಾಶ್ ನೃತ್ಯ ನಿರ್ದೇಶನವಿರುವ ಈ ಚಿತ್ರವನ್ನು ಶಂಕರ್ ಗೌಡ ನಿರ್ಮಿಸಿದ್ದಾರೆ ಹಾಗೂ ವಿ.ರವಿ ನಿರ್ದೇಶಿಸಿದ್ದಾರೆ.