ತೆರೆಯ ಮೇಲೆ ಕಾಣಿಸಿಕೊಳ್ಳುವ ರೀತಿಯಲ್ಲಿಯೇ ಎದುರಿಗೆ ಸಿಕ್ಕಾಗ ಕೋಮಲ್ ತಮಾಷೆಯಾಗಿ ವರ್ತಿಸುತ್ತಾರೆ ಎಂದು ನೀವು ಭಾವಿಸಿದರೆ ಅದು ನಿಮ್ಮ ತಪ್ಪಾಗುತ್ತದೆ. ಏಕೆ ಗೊತ್ತಾ? ಮೇಕಪ್ ಬಿದ್ದೊಡನೆ ಹಾಸ್ಯರಸವನ್ನು ಆವಾಹಿಸಿಕೊಳ್ಳುವ ಈ ಕೋಮಲ್ ವಾಸ್ತವವಾಗಿ ತುಂಬ ಸಂಕೋಚದ ಮನುಷ್ಯ, ಅಪ್ಪಟ ದೈವಭಕ್ತ. ಪ್ರಚಾರದ ಹುಕಿಗೆ ಬಿದ್ದು ಏನೇನೋ ಮಾತಾಡಿ ವಿವಾದಕ್ಕೆ ಒಳಗಾಗುವುದಿಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಎಂಬ ಸ್ವಭಾವದವರು ಈ ಕೋಮಲ್.
ಇಂಥ ಕೋಮಲ್ ಹಾಸ್ಯಪ್ರಧಾನ ಪಾತ್ರಗಳಿಗೆ ಎಷ್ಟೊಂದು ಅನಿವಾರ್ಯವಾಗಿದ್ದಾರೆ ಮತ್ತು ಅದನ್ನು ಅವರೆಷ್ಟು ಸಮರ್ಥವಾಗಿ ನಿಭಾಯಿಸಬಲ್ಲವರಾಗಿದ್ದಾರೆ ಎಂಬುದಕ್ಕೆ ಅವರಿಗೆ ಸಿಗುತ್ತಿರುವ ಅಂಥ ಪಾತ್ರಗಳು ಸಾಕ್ಷಿಯಾಗಿ ನಿಂತಿವೆ. 'ಮಿಸ್ಟರ್ ಗರಗಸ', 'ಚಮ್ಕಾಯ್ಸಿ ಚಿಂದಿ ಉಡಾಯ್ಸಿ', 'ಕಳ್ ಮಂಜ', 'ವಾರೆವ್ಹಾ' ಮೊದಲಾದ ಚಿತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಈಗಾಗಲೇ ಸಾಬೀತುಪಡಿಸಿರುವ ಕೋಮಲ್‌ಗೆ ಪಾತ್ರಗಳು ಈಗ ಹುಡುಕಿಕೊಂಡು ಬರುತ್ತಿರುವುದು ಸಂತಸದ ಸಂಗತಿ. ಈಗ ಕೋಮಲ್ 'ಮರ್ಯಾದೆ ರಾಮಣ್ಣ'ನಾಗಿ ಮಿಂಚಲಿದ್ದಾರೆ.
ಈ ಚಿತ್ರವನ್ನು ತಮ್ಮಯ್ಯ ಕುಮರೇಶ್ ಬಾಬು ನಿರ್ಮಿಸುತ್ತಿದ್ದು ಪತ್ತಿ ವಿ.ಎಸ್.ಗುರುಪ್ರಸಾದ್ ನಿರ್ದೇಶಿಸುತ್ತಿದ್ದಾರೆ. ಸಂಭಾಷಣೆಯನ್ನೂ ಅವರೇ ಬರೆದಿದ್ದಾರಂತೆ. ಸುಧಾರಾಣಿ-ಶಶಿಕುಮಾರ್ ಅಭಿನಯದ 'ಸ್ವಾತಿ' ಚಿತ್ರದಿಂದ ಕನ್ನಡದಲ್ಲಿ ಮನೆಮಾತಾಗಿದ್ದ ಎಂ.ಎಂ.ಕೀರವಾಣಿ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.
ಆರ್.ಗಿರಿ ಛಾಯಾಗ್ರಹಣ, ಬಸವರಾಜ ಅರಸ್ ಸಂಕಲನವಿರುವ ಈ ಚಿತ್ರದ ಸಾಹಸ ನಿರ್ದೇಶನವನ್ನು ಥ್ರಿಲ್ಲರ್ ಮಂಜು ಹೊತ್ತುಕೊಂಡಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಕೋಮಲ್‌ಗೆ 'ಮರ್ಯಾದೆ ರಾಮಣ್ಣ' ಸೇರಿದಂತೆ ಮುಂಬರುವ ಚಿತ್ರಗಳು ಕೂಡಾ ಶುಭವನ್ನು ತರಲಿ ಎಂದು ಹಾರೈಸೋಣವೇ?