ತೀರಾ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾಗ ಕಮಾನಿನಂತೆ ಸಜ್ಜುಗೊಳಿಸಲಾಗಿದ್ದ ಹಲಗೆಯೊಂದು ನಟ ಶಿವರಾಜ್‌ಕುಮಾರ್ ಅವರ ತಲೆಗೆ ಅಪ್ಪಳಿಸಿತ್ತು. ಆಗ ಅವರಿಗೆ ಸ್ಥಳದಲ್ಲಿಯೇ ಕೊಂಚ ಮಟ್ಟಿಗಿನ ಆರೈಕೆ ಮಾಡಲಾಗಿತ್ತಾದರೂ ಹೇಗಾದರಾಗಲಿ ಎಂದು ಒಮ್ಮೆ ಸ್ಕ್ಯಾನ್ ಮಾಡಿಸಲಾಯಿತಂತೆ.
ಸದರಿ ಬಡಿತದಿಂದ ಅಪಾಯವೇನೂ ಇಲ್ಲ, ಶಸ್ತ್ರಚಿಕಿತ್ಸೆಯ ಅಗತ್ಯವೂ ಇಲ್ಲ ಎಂಬ ಅಭಿಪ್ರಾಯ ವೈದ್ಯರಿಂದ ದೊರೆತರೂ ತಲೆಗೆ ಸಂಬಂಧಿಸಿದಂತೆ ಬಾಕಿ ಉಳಿದಿದ್ದ ಪರೀಕ್ಷೆಯನ್ನು ಮಾಡಿಸಿಕೊಳ್ಳಲು ಶಿವಣ್ಣ ಪ್ಯಾರಿಸ್‌ಗೆ ಕುಟುಂಬ ಸಮೇತರಾಗಿ ಹೋಗಬೇಕಾಗಿ ಬಂತು. ಇದರ ಪೂರ್ಣ ಅರಿವಿರದ ಅಭಿಮಾನಿಗಳು ಸಹಜವಾಗಿಯೇ ಗೊಂದಲಕ್ಕೀಡಾದರು. ಶಿವಣ್ಣನಿಗೇನೋ ಆಗಿದೆ ಎಂಬ ಸುದ್ದಿಗಳೂ ಹಬ್ಬಲು ಶುರುವಾದವು.
ಆದರೆ ಪ್ಯಾರಿಸ್ಸಿನಿಂದ ನಗರಕ್ಕೆ ಹಿಂದಿರುಗಿರುವ ಶಿವಣ್ಣ ಈ ಗಾಳಿಸುದ್ದಿಗಳಿಗೆಲ್ಲಾ ಕೊನೆ ಹಾಡಿದ್ದಾರೆ. ಸಮಾರಂಭವೊಂದರಲ್ಲಿ ತಲೆಗೆ ಆದ ಬಡಿತವೇ ಇದಕ್ಕೆಲ್ಲಾ ಕಾರಣವೇ ಎಂಬ ಪ್ರಶ್ನೆಯನ್ನು ಸ್ಪಷ್ಟವಾಗಿ ನಿರಾಕರಿಸಿದ ಶಿವಣ್ಣ, ಆ ಘಟನೆಯ ನಂತರವೂ ಹೊಡೆದಾಟದ ದೃಶ್ಯಗಳಲ್ಲಿ ನಾನು ಭಾಗವಹಿಸಿದ್ದೆ. ಹೀಗಾಗಿ ಭಯಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
'ನನಗೇನೂ ಆಗಿಲ್ಲ, ಅಭಿಮಾನಿಗಳ ಶ್ರೀರಕ್ಷೆ ನನ್ನ ಮೇಲಿರುವ ತನಕ ನನಗೇನೂ ಆಗುವುದಿಲ್ಲ. ಆದ್ದರಿಂದ ಆತಂಕಪಡುವುದು ಬೇಡ' ಎಂದು ವಾಹಿನಿಯೊಂದರಲ್ಲಿ ಹೇಳಿರುವುದು ಅಭಿಮಾನಿಗಳಿಗೆ ಸಮಾಧಾನ ತಂದಿದೆ. ಮುಂದಿನ ತಿಂಗಳು ಶಿವಣ್ಣನ ನೂರನೇ ಚಿತ್ರ 'ಜೋಗಯ್ಯ' ಬಿಡುಗಡೆಯಾಗಲಿದ್ದು ಆ ಸಂಭ್ರಮದಲ್ಲಿರುವ ಅಭಿಮಾನಿಗಳಿಗೆ ಈ ಸುದ್ದಿ ಹರ್ಷ ತಂದಿದೆ. ಬೆಸ್ಟ್ ಆಫ್ ಲಕ್ ಶಿವಣ್ಣಾ.