ಯುವನಟ ದೀಪಕ್‌ರನ್ನು ಎಲ್ಲರೂ ಶಂಕರ್‌ನಾಗ್‌ರವರ ಉತ್ತರಾಧಿಕಾರಿ ಎಂದು ಕರೆಯುತ್ತಿದ್ದರು. ಅಭಿನಯದಲ್ಲಿ ಅವರ ಮ್ಯಾನರಿಸಂಗಳು ಶಂಕರ್‌ನಾಗ್‌ರನ್ನು ಹೋಲುತ್ತಿದ್ದುದರಿಂದ ಈ ಮೆಚ್ಚುಗೆಯ ಮಾತು ಕೇಳಿಬಂದಿತ್ತು. ದೀಪಕ್ ಅಭಿನಯದ 'ಶಿಷ್ಯ' ಚಿತ್ರವು ಸೇರಿದಂತೆ ಅವರ ಬಹುತೇಕ ಚಿತ್ರಗಳು ರೌಡಿಸಂ ಕಥೆಗಳನ್ನೇ ಒಳಗೊಂಡಿದ್ದವು. ಆದರೆ ದೀಪಕ್ ಈಗ ಹೊಸ ಅವತಾರವೆತ್ತಲಿದ್ದಾರಂತೆ.
ಈಗ ಸೆಟ್ಟೇರಿರುವ 'ಅವತಾರ' ಎಂಬ ಹೊಸ ಚಿತ್ರವು ದೀಪಕ್‌ರ ಈ ಇಮೇಜನ್ನು ತೊಡೆದುಹಾಕಲಿದೆಯಂತೆ. ಏಕೆಂದರೆ ಇದು 'ವಿಭಿನ್ನ' ಚಿತ್ರ ಎಂಬುದು ಅವರ ವಿವರಣೆ. ತಾಯಿ ಎದುರಲ್ಲೇ ನಿಂತಿದ್ದರೂ ನಾನೇ ನಿನ್ನ ಮಗ ಎಂದು ಹೇಳಿಕೊಳ್ಳಲಾಗದಂಥ ವಿಲಕ್ಷಣ ಪರಿಸ್ಥಿತಿಯಲ್ಲಿರುವ ಮಗನ ಕಥೆಯಿಂದ ತಾವು ಪ್ರಭಾವಿತರಾದದ್ದನ್ನು ದೀಪಕ್ ಹೇಳಿಕೊಂಡರು.
ಈ ಚಿತ್ರದ ನಿರ್ದೇಶಕರು ವಿಜೀಶ್ ಮಣಿ. ಈತ ಈಗಾಗಲೇ ಮಲಯಾಳಂನಲ್ಲಿ ಅರ್ಧ ಡಜನ್ ಚಿತ್ರಗಳನ್ನು ನಿರ್ದೇಶಿಸಿದ್ದು ಕನ್ನಡದಲ್ಲಿ 'ಅವತಾರ' ಅವರ ಮೊದಲ ಚಿತ್ರವಾಗಲಿದೆ. ಮೂಲತಃ ಆಕ್ಷನ್ ಸ್ವರೂಪವನ್ನು ಹೊಂದಿದ್ದರೂ ಚಿತ್ರದಲ್ಲಿ ತಾಯಿ ಸೆಂಟಿಮೆಂಟ್ ಇದೆ ಎಂಬುದು ವಿಜೀಶರ ವಿವರಣೆ.
ವಿಷ್ಣುವರ್ಧನ್, ಬೇಬಿ ಇಂದಿರಾ ಅಭಿನಯದ 'ಚಿನ್ನಾ ನಿನ್ನಾ ಮುದ್ದಾಡುವೆ' ಎಂಬ ಚಿತ್ರದಲ್ಲಿ 'ದೇಹಕೇ ಉಸಿರೇ ಸದಾ ಭಾರ, ಇಲ್ಲ ಆಧಾರ' ಎಂಬ ಸುಂದರ ಗೀತೆಗೆ ಸ್ವರವನ್ನು ಸಂಯೋಜಿಸಿದ್ದ ಸಂಗೀತ ನಿರ್ದೇಶಕ ಸಲೀಲ್ ಚೌಧರಿಯವರನ್ನು ಕನ್ನಡಿಗರು ಇಂದಿಗೂ ಮರೆತಿಲ್ಲ. ಅವರ ಮಗ ಸಂಜಯ್ ಚೌಧರಿ ಈ ಚಿತ್ರಕ್ಕೆ ಸಂಗೀತ ನೀಡಿರುವುದು ವಿಶೇಷವೆಂದೇ ಹೇಳಬೇಕು.
ಬಿ.ಎ.ಮಧು ಸಂಭಾಷಣೆ, ನಿರಂಜನಬಾಬು ಛಾಯಾಗ್ರಹಣ ಈ ಚಿತ್ರಕ್ಕಿದೆ. ವಿ.ಎಸ್.ಕುಮಾರ್ ಚಿತ್ರದ ನಿರ್ಮಾಪಕರು. ಚಿತ್ರರಂಗದಲ್ಲಿ ದುಡಿದು ಈಗ ಅಸಹಾಯಕ ಪರಿಸ್ಥಿತಿಯನ್ನು ಎದುರಿಸುತ್ತಿರುವ ಕಲಾವಿದ-ತಂತ್ರಜ್ಞರಿಗೆ ನೆರವಾಗಲು ಹಮ್ಮಿಕೊಂಡ ಯೋಜನೆಯ ಅಂಗವಾಗಿ ಚಿತ್ರತಂಡವು ಹಿರಿಯ ಸಂಗೀತ ನಿರ್ದೇಶಕ ಆರ್.ರತ್ನಂರವರಿಗೆ 25 ಸಾವಿರ ರೂಪಾಯಿಗಳ ಸಹಾಯಧನದ ಚೆಕ್ ನೀಡಿತು. ಈ ಸಹಾಯಧನದ ಉಳಿದ ಫಲಾನುಭವಿಗಳಲ್ಲಿ ಸದಾಶಿವ ಸಾಲಿಯಾನ್, ಶನಿಮಹಾದೇವಪ್ಪ ಮತ್ತು ರೇಣುಕಾ ಪ್ರಸಾದ್ ಸೇರಿದ್ದಾರಂತೆ.