ನೆಲದ ಮೇಲಿದ್ದೇ ಆಕಾಶದ ನಕ್ಷತ್ರಕ್ಕೆ ಕೈಹಾಕಿದ ನಾಗಶೇಖರ್...!!
EVENT
"ಕಷ್ಟಗಳು ಬಂದರೆ ಪರಂಪರೆಯಾಗಿ ಬರುತ್ತವೆ" ಎಂಬ ಮಾತನ್ನು ತೊಂದರೆ-ತಾಪತ್ರಯಗಳಿಗೆ ಸಂಬಂಧಿಸಿ ನಿದರ್ಶಿಸುವಾಗ ಬಳಸುವುದುಂಟು. ಅದೇ ರೀತಿಯಲ್ಲಿ, "ಯಶಸ್ಸು ಎಂಬುದು ಸಿಟಿಬಸ್ ಇದ್ದಹಾಗೆ. 'ಇದೇನಪ್ಪಾ ಬರ್ತಾನೇ ಇಲ್ಲಾ...' ಎಂದು ರೋಸತ್ತು ಹೋಗುವಷ್ಟರಮಟ್ಟಿಗೆ ಅದು ನಮ್ಮನ್ನು ಕಾಯಿಸುತ್ತದೆ. ಬರೋದಕ್ಕೆ ಶುರುವಾಯ್ತು ಅಂದರೆ ಒಂದರ ಹಿಂದೆ ಒಂದು ಬರ್ತಾನೇ ಇರುತ್ವೆ" ಎಂಬ ಮಾತನ್ನು ಯಶಸ್ಸಿನ ಕ್ಷಣಗಳಿಗೆ ಬಳಸುವುದನ್ನು ನಾವು ಕಾಣಬಹುದು.
ಈ ಎರಡೂ ಜಾಣೋಕ್ತಿಗಳು ಕಲಾವಿದ-ನಿರ್ದೇಶಕ ನಾಗಶೇಖರ್ ವಿಷಯದಲ್ಲಿ ಅಪ್ಪಟ ಹದಿನಾರಾಣೆ ಸತ್ಯವೆನಿಸಿಕೊಂಡಿವೆ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಾಗಶೇಖರ್ ಕೆಲ ವರ್ಷಗಳ ಹಿಂದೆ ಚಿತ್ರರಂಗದಲ್ಲಿ ಅಸ್ತಿತ್ವವನ್ನು ಕಂಡುಕೊಳ್ಳಲು ಹೆಣಗಾಡುತ್ತಿದ್ದಾಗ ಒಂದೇ ಕೋಣೆಯನ್ನು ಹಂಚಿಕೊಂಡವರು, ಇದ್ದುದನ್ನು ಹಂಚಿಕೊಂಡು ತಿನ್ನುತ್ತಾ ರಾತ್ರಿಯಾಗುತ್ತಿದ್ದಂತೆ ಆಕಾಶದಲ್ಲಿ ನಕ್ಷತ್ರಗಳನ್ನು ಎಣಿಸುತ್ತಲೇ ಅಲ್ಲಿಗೆ ಏಣಿಹಾಕುವ ಮಹತ್ವಾಕಾಂಕ್ಷೆಯನ್ನು ಕಂಡವರು. ಈ ಪೈಕಿ ಗಣೇಶ್‌ಗೆ ಮೊದಲು ಬ್ರೇಕ್ ಸಿಕ್ಕಿತು.
ಆದರೆ, 'ರಂಗ ಎಸ್.ಎಸ್.ಎಲ್.ಸಿ', 'ಬಾ ಬಾರೋ ರಸಿಕಾ', 'ಜಾಜಿ ಮಲ್ಲಿಗೆ' ಮೊದಲಾದ ಚಿತ್ರಗಳಲ್ಲಿ ಸಣ್ಣ ಪುಟ್ಟ ಕಾಮಿಡಿ ಪಾತ್ರಗಳನ್ನು ಮಾಡುತ್ತಾ ನಾಗಶೇಖರ್ ಸೈಕಲ್ ಹೊಡೆಯುತ್ತಲೇ ಇದ್ದರು. ಈ ನಡುವೆ ಸೈಬರ್ ಕೆಫೆಯೊಂದನ್ನೂ ಅವರು ನಡೆಸಿದ್ದುಂಟು. ಆದರೆ 'ಕ್ಯಾಪ್ಟನ್ ಆಫ್ ದಿ ಷಿಪ್' ಆಗುವ ಮಹತ್ವಾಕಾಂಕ್ಷೆಯನ್ನಂತೂ ಅವರು ಕಳೆದುಕೊಂಡಿರಲಿಲ್ಲ. ಈ ನಡುವೆ ತಮ್ಮ ಜೀವದ ಗೆಳೆಯ ಗಣೇಶ್‌ರವರ 'ಅರಮನೆ' ಚಿತ್ರವನ್ನು ನಿರ್ದೇಶಿಸುವ ಸದವಕಾಶ ಪ್ರಾಪ್ತವಾಯಿತು. ಆ ಚಿತ್ರದ ಸನ್ನಿವೇಶಗಳು ಮತ್ತು ಹಾಡುಗಳು ನಿಜಕ್ಕೂ ಅದ್ಭುತವಾಗಿ ಚಿತ್ರೀಕರಿಸಲ್ಪಟ್ಟಿದ್ದವು. ಶತದಿನೋತ್ಸವದ ಭಾಗ್ಯ ಈ ಚಿತ್ರಕ್ಕೆ ಪ್ರಾಪ್ತವಾಯಿತು.
ಹಾಗಂತ ಅವಕಾಶಗಳ ಸುರಿಮಳೆ ನಾಗಶೇಖರ್‌ಗೆ ಒದಗಿಬರಲಿಲ್ಲ. ಅವರೂ ಎದೆಗುಂದಲಿಲ್ಲ. ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಲೇ ನಿರ್ದೇಶನದ ಕಸುಬುಗಾರಿಕೆಯ ವಸ್ತ್ರಕ್ಕೆ ಒಂದೊಂದೇ ವಿನ್ಯಾಸವನ್ನು ಸೇರ್ಪಡೆ ಮಾಡುತ್ತಾ ಬಂದರು. ಆಗ ಸಿದ್ಧವಾದದ್ದೇ 'ಸಂಜು ವೆಡ್ಸ್ ಗೀತಾ' ಚಿತ್ರದ ಕಥೆ. ಆದರೆ ಚಿತ್ರೀಕರಣ ಪ್ರಾರಂಭವಾಗಿ ಮುಗಿಯುವವರೆಗೂ ಅದು ಸುಲಭದ ತುತ್ತೇನೂ ಆಗಿರಲಿಲ್ಲ. ಹಾಗಂತ ನಾಗಶೇಖರ್ ಎದೆಗುಂದಲಿಲ್ಲ, ಪಟ್ಟುಹಿಡಿದು ಚಿತ್ರವನ್ನು ಸಂಪೂರ್ಣಗೊಳಿಸಿದರು. ಈಗ ಚಿತ್ರ ಬಿಡುಗಡೆಯಾಗಿ ಶತದಿನೋತ್ಸವವನ್ನೂ ಕಂಡಿದೆ. ನಾಗಶೇಖರ್ ಪ್ರತಿಭೆ ಅನಾವರಣಗೊಂಡಿದೆ, ಅವರ ಭಾಗ್ಯದ ಬಾಗಿಲು ತೆರೆದಿದೆ.
ಹೀಗೆ, ಪರಂಪರೆಯಾಗಿ ಬಂದ ಕಷ್ಟಗಳಿಗೆ ಮತ್ತು ಯಶಸ್ಸಿನ ಕ್ಷಣಗಳಿಗೆ ಎರಡಕ್ಕೂ ಸಾಕ್ಷಿಯಾಗಿರುವ ನಾಗಶೇಖರ್ ಸುಮ್ಮನೇ ಕೂತಿಲ್ಲ, ಸುಮ್ಮನೇ ಕೂರುವ ಜಾಯಮಾನವೂ ಅವರದಲ್ಲ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ಗಾಗಿ 'ಆಂಜನೇಯ' ಎಂಬ ಸ್ಕ್ರಿಪ್ಟ್‌ನ್ನು ಅವರು ಸಿದ್ಧಪಡಿಸುತ್ತಿದ್ದಾರೆ ಎಂಬುದು ಇತ್ತೀಚಿನ ಸುದ್ದಿ. ಇದಕ್ಕೇನಾದರೂ ಹಸಿರು ನಿಶಾನೆ ಸಿಕ್ಕಿದಲ್ಲಿ ಅದಕ್ಕಿಂತಾ ಸಂತೋಷದ ಸಂಗತಿಯಿದೆಯೇ? ನಾಗಶೇಖರ್ ಈಗ ದಾಖಲಿಸಿರುವ ಯಶಸ್ಸನ್ನು ಮುಂದುವರೆಸಿಕೊಂಡು ಹೋಗುವಂತಾಗಲಿ ಮತ್ತು ತಮ್ಮ ಕಸುಬುಗಾರಿಕೆಯನ್ನು ದಿನೇದಿನೇ ಪುಟವಿಟ್ಟ ಚಿನ್ನದಂತೆ ಅಪ್ಪಟವಾಗಿಸುತ್ತಾ ಹೋಗುವಂತಾಗಲಿ ಎಂದು ಹಾರೈಸೋಣ.