ಕನಸಿನ ಆಡುಂಬೊಲವಾದ ಚಿತ್ರರಂಗದಲ್ಲಿ ಕನಸಿಗರಿಗೇನೂ ಕಮ್ಮಿಯಿಲ್ಲ. ಚಿತ್ರದ ಟೈಟಲ್ ಕಾರ್ಡಿನಲ್ಲಿ ಒಮ್ಮೆ ಹೆಸರು ಗೋಚರಿಸಿದರೆ ಸಾಕು ಎಂದು ಬಯಸುವವರಿಂದ ಮೊದಲ್ಗೊಂಡು ಜನರ ಗುಂಪಿನ ದೃಶ್ಯದಲ್ಲಿ ಒಮ್ಮೆ ಕಾಣಿಸಿಕೊಂಡರೆ ಸಾಕು ಎಂದು ಹಾತೊರೆಯುವವರವರೆಗೆ ಹಾಗೂ ಪುಟ್ಟ ಪೋಷಕ ಪಾತ್ರ ಸಿಕ್ಕರೆ ಸಾಕು ಎಂದು ಆಶಿಸುವವರಿಂದ ಮೊದಲ್ಗೊಂಡು ನನ್ನ ಮೇಲೇ ಒಂದು ಹಾಡನ್ನು ಚಿತ್ರೀಕರಿಸಿದರೆ ಹೇಗಿರುತ್ತೆ ಎಂದು ಕನಸುಕಾಣುವವರವರೆಗೆ ಈ ಕನಸುಗಳ ವ್ಯಾಪ್ತಿಯಿದೆ. ಆದರೆ ಈ ಕನಸು-ವಾಸ್ತವತೆಯ ಸಂಗಮವಾಗಿ ಕಾಣಿಸುತ್ತಾರೆ ಹಿರಿಯ ಕಲಾವಿದೆಯರಾದ ಭಾರತಿ ವಿಷ್ಣುವರ್ಧನ್ ಮತ್ತು ಜಯಂತಿ.
ಇಬ್ಬರಲ್ಲೂ ಒಂದಷ್ಟು ಹೋಲಿಕೆಗಳಿವೆ. ಇಬ್ಬರೂ ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ಅಭಿನಯಿಸಿದ್ದಾರೆ (ಭಾರತಿಯವರು ಹಿಂದಿಯಲ್ಲೂ ಅಭಿನಯಿಸಿದ್ದಾರೆ), ಇಬ್ಬರೂ ಪುಟ್ಟಣ್ಣ ಕಣಗಾಲರ ಚಿತ್ರಗಳಲ್ಲಿ ಶ್ರೇಷ್ಠ ಅಭಿನಯವನ್ನು ನೀಡಿದ್ದಾರೆ (ಜಯಂತಿಯವರು 'ಮಸಣದ ಹೂವು' ಚಿತ್ರದಲ್ಲಿ ಮತ್ತು ಭಾರತಿಯವರು 'ಋಣಮುಕ್ತಳು' ಚಿತ್ರದಲ್ಲಿ), ಚಲನಚಿತ್ರ ಸಂಬಂಧಿ ಸಮಾರಂಭಗಳು ನಡೆದಾಗ ಇಬ್ಬರೂ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ ಹಾಗೂ 'ತಾರೋಚಿತವಾಗಿ' ಕಾಣಿಸಿಕೊಳ್ಳುತ್ತಾರೆ.
ಕನ್ನಡದ ವಾಹಿನಿಗಳಲ್ಲಿ ಭಾರತಿ ಮತ್ತು ಜಯಂತಿಯವರು ನಟಿಸಿರುವ ಚಿತ್ರಗಳನ್ನು ಅವಲೋಕಿಸುತ್ತಾ ಬನ್ನಿ. ಇವರು ಅಭಿನಯಿಸದ ಪಾತ್ರಗಳೇ ಉಳಿದಿಲ್ಲ ಎನಿಸುತ್ತದೆ. ಆ ಮಟ್ಟಿಗೆ ಈ ಇಬ್ಬರದೂ ವೈವಿಧ್ಯಪೂರ್ಣ ವೃತ್ತಿಜೀವನವೆನ್ನಬಹುದು. ಸಾಮಾಜಿಕ, ಐತಿಹಾಸಿಕ, ಪೌರಾಣಿಕ ನೆಲೆಗಟ್ಟಿನ ಪಾತ್ರಗಳಿಂದ ಮೊದಲ್ಗೊಂಡು ಮಾಡರ್ನ್ ಬೆಡಗಿಯ ಪಾತ್ರ, ಗಯ್ಯಾಳಿಯ ಪಾತ್ರ, ಹಾಸ್ಯ ಪಾತ್ರ ಹೀಗೆ ಈ ಇಬ್ಬರು ಕಾಣಿಸಿಕೊಳ್ಳದ ಪಾತ್ರಗಳೇ ಇಲ್ಲವೆನ್ನಬಹುದು.
ಕಪ್ಪು-ಬಿಳುಪು ಚಿತ್ರಗಳಿಂದ ಮೊದಲ್ಗೊಂಡು ಸಿನಿಮಾಸ್ಕೋಪ್/70 ಎಂ.ಎಂ./ಡಾಲ್ಬಿ/ಡಿಟಿಎಸ್/ಸ್ಟೆಡಿ ಕ್ಯಾಮರಾ/ಹೈಡೆಫನಿಷನ್ ಕ್ಯಾಮರಾ...... ಹೀಗೆ ಹಲವು ಹನ್ನೊಂದು ತಾಂತ್ರಿಕ ವೈಭವಗಳಿಗೆ ಸಾಕ್ಷಿಯಾಗಿದ್ದರೂ ಸಹ ಮತ್ತು ಚಿತ್ರಜೀವನದಿಂದ ಸಾಕಷ್ಟು ಯಶಸ್ಸು-ಹಣ-ಕೀರ್ತಿಯನ್ನು ಸಂಪಾದಿಸಿದ್ದರೂ ಸಹ, ಸರಳತೆ-ಆತ್ಮೀಯತೆಯನ್ನು ಬಿಟ್ಟುಕೊಡದಿರುವುದು ಈ ಇಬ್ಬರು ಕಲಾವಿದೆಯರ ಹೆಗ್ಗಳಿಕೆ.
ಇಲ್ಲಿ ಒಂದೆರಡು ವಿಷಯವನ್ನು ಪ್ರಸ್ತಾವಿಸುವುದಿದೆ. ಒಂದೆರಡು ಚಿತ್ರಗಳಲ್ಲಿ ನಾಯಕಿಮಣಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ತಮಗೆ ಪ್ರತ್ಯೇಕ ಮೇಕಪ್‌ಮ್ಯಾನ್ ಬೇಕು, ಕಾರು ಬೇಕು, ಉಳಿದುಕೊಳ್ಳಲು ಪ್ರತ್ಯೇಕ ಕೋಣೆ ಬೇಕು ಎಂದು ಹಟ ಹಿಡಿಯುವ ಕೆಲವೊಂದು ಗಾಜಿನಗೊಂಬೆಗಳು ಈ ಇಬ್ಬರ ಸರಳತೆಯಿಂದ ಮತ್ತು ನಿರ್ಮಾಪಕರನ್ನು ಪೀಡಿಸದ ವರ್ತನೆಯಿಂದ ಸಾಕಷ್ಟು ಕಲಿಯುವುದಿದೆ. ಅಷ್ಟೇ ಅಲ್ಲ, ಸಹನೆಯಿಂದಿದ್ದು ಉತ್ತಮವಾದ ಕಥೆ-ಚಿತ್ರಕಥೆಯಿರುವ ಪಾತ್ರಗಳಲ್ಲಿ ಅಭಿನಯಿಸುತ್ತಾ ಬಂದಲ್ಲಿ ಬಹಳ ಕಾಲದವರೆಗೆ ಈ ನೆಲದಲ್ಲಿ ಹೆಸರನ್ನು ಉಳಿಸಬಹುದು ಎಂಬುದಕ್ಕೆ ಈ ಇಬ್ಬರು ಸಾಕ್ಷಿಯಾಗಿದ್ದಾರೆ.
ನಾಳಿನ ಕನಸು ಕಾಣುವವರು ನಿನ್ನೆಯ ನೆನಪನ್ನು ಬಿಂಬಿಸುವ ಈ ತಾರಾಮಣಿಗಳನ್ನು ಆದರ್ಶವಾಗಿಟ್ಟುಕೊಂಡರೆ ಒಳಿತಲ್ಲವೇ?