ಚಿತ್ರವೊಂದು ಯಶಸ್ಸು ಕಾಣಲು ಅಥವಾ ನೂರು ದಿನ ಓಡಲು ಏನೆಲ್ಲಾ ಅಂಶಗಳಿರಬೇಕು? ಉತ್ತಮ ಕಥೆ ಮತ್ತು ಚಿತ್ರಕಥೆ, ಕಿವಿಗಿಂಪಾದ ಹಾಡುಗಳು, ಪೈಪೋಟಿಗೆ ಬಿದ್ದಂತೆ ಅಭಿನಯ ನೀಡುವ ಕಲಾವಿದರು, ಮನಮುಟ್ಟುವ ನಿರೂಪಣೆ ಹೀಗೆಲ್ಲಾ ನೀವು ಹೇಳುತ್ತೀರಲ್ಲವೇ? ಇವೆಲ್ಲವನ್ನೂ ಒಳಗೊಂಡಿದ್ದ 'ಸಂಜು ವೆಡ್ಸ್ ಗೀತಾ' ಚಿತ್ರ ಈಗ ನೂರು ದಿನಗಳ ಸಂಭ್ರಮವನ್ನು ಕಂಡಿದೆ. ಚಿತ್ರದ ನಾಯಕ ಶ್ರೀನಗರ ಕಿಟ್ಟಿಯ ಜನ್ಮದಿನದ ಸಂದರ್ಭದಲ್ಲೇ ನೂರು ದಿನದ ಸಂಭ್ರಮವೂ ದಾಖಲಾದದ್ದು ಕಾಕತಾಳೀಯ.
ಚಿತ್ರದ ನಿರ್ದೇಶಕ ನಾಗಶೇಖರ್‌ಗಂತೂ ಇದು ಮತ್ತಷ್ಟು ಖುಷಿ ತಂದಿದೆ ಎಂದು ಹೇಳಬಹುದು. ಏಕೆಂದರೆ ಅವರ ಮೊದಲ ಚಿತ್ರವಾದ 'ಅರಮನೆ' ಕೂಡಾ ಶತದಿನೋತ್ಸವವನ್ನು ದಾಖಲಿಸಿತ್ತು. 'ಸಂಜು ವೆಡ್ಸ್ ಗೀತಾ' ಚಿತ್ರವು ಶತದಿನೋತ್ಸವದ ಜೊತೆಜೊತೆಗೆ ಗಳಿಕೆಯಲ್ಲೂ ದಾಖಲೆ ನಿರ್ಮಿಸಿರುವುದು ಅವರ ಖುಷಿ ಹೆಚ್ಚಲು ಕಾರಣವಾಗಿದೆ ಎನ್ನಬಹುದು.
ಪ್ರಾಯಶಃ ನಾಗಶೇಖರ್ ಅವರಿಗೆ ತಮ್ಮ ಶ್ರಮ ಈಗ ಫಲಕೊಡುತ್ತಿರುವುದರ ಅರಿವಾಗುತ್ತಿರಬಹುದು. ಏಕೆಂದರೆ ಈ ಚಿತ್ರಕ್ಕೆ ಹಣ ಹೊಂದಿಸಲು, ಅದರಲ್ಲೂ ವಿಶೇಷವಾಗಿ ಚಿತ್ರದ ನಿರ್ಮಾಣೋತ್ತರ ಕಾರ್ಯದ ಸಂದರ್ಭದಲ್ಲಿ ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಜೊತೆಗೆ ಸರಿಯಾದ ಚಿತ್ರಮಂದಿರ ಸಿಗುವವರೆಗೆ ಹಾಗೂ ಶಾಲಾ-ಕಾಲೇಜು ಪರೀಕ್ಷೆಗಳು ಮುಗಿಯುವವರೆಗೆ ಅವರು ಕಾಯಬೇಕಾಗಿ ಬಂತು. ಅವೆಲ್ಲದರ ಫಲವನ್ನು ಅವರೀಗ ಉಣ್ಣುತ್ತಿದ್ದಾರೆ. ಶ್ರಮಜೀವಿಗೆ ಯಶಸ್ಸು ಇದ್ದೇ ಇದೆಯಲ್ಲವೇ?
ಚಿತ್ರದ ಬಿಡುಗಡೆಗೆ ಮುಂಚಿತವಾಗಿಯೇ ಹಾಡುಗಳು ಸೂಪರ್‌ಹಿಟ್ ಆಗಿದ್ದರಿಂದ ಚಿತ್ರದ ಕುರಿತಾದ ನಿರೀಕ್ಷೆ ಹೆಚ್ಚಾಗಿತ್ತು. ಚಿತ್ರದಲ್ಲಿ ಬಳಸಲಾದ ನಿರೂಪಣಾ ವಿಧಾನ, ಹಾಡುಗಳ ಚಿತ್ರೀಕರಣ, ಕಿಟ್ಟಿ ಮತ್ತು ರಮ್ಯ ತಂತಮ್ಮ ಪಾತ್ರಗಳಲ್ಲಿ ತನ್ಮಯತೆ ಮೆರೆದಿರುವುದು ಇವೆಲ್ಲವನ್ನೂ ಪ್ರೇಕ್ಷಕ-ಪ್ರಭು ಮೆಚ್ಚಿಕೊಂಡಿದ್ದಾನೆ ಎಂಬುದಕ್ಕೆ ಚಿತ್ರದ ಯಶಸ್ಸೇ ಸಾಕ್ಷಿ.
ಇನ್ನೊಂದು ಮಾತು: ಈ ಚಿತ್ರದಲ್ಲಿ ನದಿ ಮತ್ತು ಸೇತುವೆ ಕೂಡಾ ತಮ್ಮದೇ ಆದ ಕೊಡುಗೆಯನ್ನು ನೀಡಿವೆ. ನದಿ ತುಂಬಿರುವ ಸಮಯದಲ್ಲಿ ಸೇತುವೆಯ ಮೇಲೆ ಒಂದಷ್ಟು ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗಿತ್ತು. ನಂತರ ಕಥೆಯ ಅನುಸಾರ ನದಿ ಬತ್ತಿರುವಂತೆ ತೋರಿಸಬೇಕಾಗಿದ್ದರಿಂದ ಬೇಸಿಗೆಯವರೆಗೂ ಕಾದು ಅದೊಂದು ದೃಶ್ಯವನ್ನು ಚಿತ್ರೀಕರಿಸಲಾಯಿತಂತೆ. ನಿರ್ದೇಶಕ ನಾಗಶೇಖರ್ ಹಾಗೂ ಸಂಬಂಧಿತ ಕಲಾವಿದ-ತಂತ್ರಜ್ಞರ ಬದ್ಧತೆಗೆ ಇದು ನಿದರ್ಶನವಲ್ಲವೇ?
ಇಂಥ ಬದ್ಧತೆಗಳೇ ಚಿತ್ರವನ್ನು ಹಿಡಿದೆತ್ತುತ್ತವೆ ಎಂಬುದನ್ನು ಚಿತ್ರೋದ್ಯಮಿಗಳು ಅರಿತುಕೊಳ್ಳಲಿ. 'ಸಂಜು ವೆಡ್ಸ್ ಗೀತಾ' ಚಿತ್ರತಂಡಕ್ಕೆ ಶುಭಹಾರೈಕೆಗಳು.