ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದೊಡ್ಡಣ್ಣ ಎಂಬ 'ದೈತ್ಯ ಪ್ರತಿಭೆ'ಗೆ ತನ್ನ ಆರೋಗ್ಯದ ಕಡೆ ನಿರ್ಲಕ್ಷ್ಯ (Doddanna | S.Narayan | Dinesh | Kannada Movies)
PR
ಭದ್ರಾವತಿಯಿಂದ ಬಂದ ಇಬ್ಬರು ಪ್ರತಿಭಾವಂತರು ಕನ್ನಡ ಚಿತ್ರರಸಿಕರ ವಲಯದಲ್ಲಿ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ: ಒಬ್ಬರು ನಟ-ನಿರ್ದೇಶಕ ಎಸ್‌.ನಾರಾಯಣ್‌, ಮತ್ತೊಬ್ಬರು ಪೋಷಕ ನಟ ದೊಡ್ಡಣ್ಣ. ನಟನೆಯಲ್ಲಿ, ದೇಹದ ಗಾತ್ರದಲ್ಲಿ ಮತ್ತು ಹೃದಯ ವೈಶಾಲ್ಯತೆಯಲ್ಲಿ ದೊಡ್ಡಣ್ಣ ನಿಜಕ್ಕೂ ದೊಡ್ಡಣ್ಣನೇ ಸರಿ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ದೊಡ್ಡಣ್ಣ ಮತ್ತು ಈಗ ಅಸ್ತಂಗತರಾಗಿರುವ ಕಲಾವಿದ ದಿನೇಶ್‌ ನಡುವೆ ಒಂದು ವಿಷಯದಲ್ಲಿ ಸಾಮ್ಯತೆಯಿದೆ. ಖಳನಾಯಕರಾಗಿ ಚಿತ್ರಜೀವನವನ್ನು ಆರಂಭಿಸಿದ ದಿನೇಶ್‌ ತಮ್ಮ ಚಿತ್ರಜೀವನದ ದ್ವಿತೀಯಾರ್ಧದಲ್ಲಿ ಹಾಸ್ಯಪಾತ್ರಗಳಿಗೆ ಒಗ್ಗಿಕೊಂಡರು ಅಥವಾ ಪಾತ್ರಗಳನ್ನು ಹಾಗೆ ಒಗ್ಗಿಸಿಕೊಂಡರು. ಈ ಮಾತು ದೊಡ್ಡಣ್ಣನವರಿಗೂ ಅನ್ವಯವಾಗುತ್ತದೆ.

'ಅಪರಂಜಿ', 'ಒಂದು ಮುತ್ತಿನ ಕಥೆ' ಸೇರಿದಂತೆ ಹಲವು ಹನ್ನೊಂದು ಚಿತ್ರಗಳಲ್ಲಿ ಖಳನಾಗಿ ಮಿಂಚಿದ ದೊಡ್ಡಣ್ಣ ಕಾಲಾನಂತರದಲ್ಲಿ ಹಾಸ್ಯಮಿಶ್ರಿತ ಖಳನಾಯಕನ ಪಾತ್ರದಲ್ಲಿ ಇಲ್ಲವೇ ಸಂಪೂರ್ಣ ಹಾಸ್ಯಪಾತ್ರದಲ್ಲಿ ಕಾಣಿಸಿಕೊಳ್ಳಲು ಶುರುಮಾಡಿದರು. 'ಮುದ್ದಿನ ಮಾವ', 'ಯಾರಿಗೂ ಹೇಳ್ಬೇಡಿ', 'ಸಿ.ಬಿ.ಐ.ಶಂಕರ್‌', 'ಸೂರ್ಯವಂಶ', 'ಗಲಾಟೆ ಅಳಿಯಂದ್ರು' ಮೊದಲಾದ ಚಿತ್ರಗಳಲ್ಲಿ ಹಾಸ್ಯಪಾತ್ರಗಳನ್ನು ನಿರ್ವಹಿಸಿರುವ ದೊಡ್ಡಣ್ಣ ತಮ್ಮ ಸಾಮರ್ಥ್ಯವನ್ನು ಈ ಮ‌ೂಲಕ ದಾಖಲಿಸಿದ್ದಾರೆ.

ಸಾಮಾನ್ಯವಾಗಿ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಗಳು ಅಥವಾ ಬೇರಾವುದೇ ಚಲನಚಿತ್ರ ಸಂಬಂಧಿತ ಕಾರ್ಯಕ್ರಮಗಳು ನಡೆದಾಗ ಜನಪ್ರಿಯ ನಾಯಕ-ನಾಯಕಿಯರು ನರ್ತಿಸುವುದು ವಾಡಿಕೆ. ಆದರೆ ಇತ್ತೀಚೆಗೆ ಸುವರ್ಣ ವಾಹಿನಿಯು ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಒಂದಷ್ಟು ಹಾಸ್ಯನಟರ ಜೊತೆಗೆ ದೊಡ್ಡಣ್ಣನವರೂ ಹಾಡಿಗೆ ನರ್ತಿಸಿದಾಗ ಸಮಾರಂಭದಲ್ಲಿ ಸೇರಿದ್ದ ಜನ ಮ‌ೂಗಿನ ಮೇಲೆ ಬೆರಳಿಟ್ಟರು.

ತೆಲುಗಿನಲ್ಲಿ ಕೆಲವು ವರ್ಷಗಳ ಹಿಂದೆ 'ಸೀತಾರಾಮಯ್ಯಗಾರಿ ಮನಮುರಾಲು' ಎಂಬುದೊಂದು ಚಿತ್ರ ಬಂದಿತ್ತು. ಅಕ್ಕಿನೇನಿ ನಾಗೇಶ್ವರರಾವ್‌ರವರು ಈ ಚಿತ್ರದಲ್ಲಿ ಮನೋಜ್ಞ ಅಭಿನಯವನ್ನು ನೀಡಿದ್ದರು ಹಾಗೂ ದಕ್ಷಿಣ ಭಾರತದಲ್ಲಿ ತದನಂತರದಲ್ಲಿ ಖ್ಯಾತಿಯನ್ನು ಪಡೆದ ಮೀನಾರವರು ನಾಗೇಶ್ವರರಾಯರ ಮೊಮ್ಮಗಳ ಪಾತ್ರವನ್ನು ಮಾಡಿದ್ದರು.
ಈ ಚಿತ್ರವನ್ನು ಕೆ.ವಿ.ರಾಜು ನಿರ್ದೇಶನದಲ್ಲಿ ರಿಮೇಕ್‌ ಮಾಡಲು ಸಿದ್ಧತೆಗಳನ್ನು ಮಾಡಿಕೊಂಡು, ನಾಗೇಶ್ವರರಾವ್‌ ನಿರ್ವಹಿಸಿದ್ದ ಪಾತ್ರಕ್ಕೆ ದೊಡ್ಡಣ್ಣನವರನ್ನು ಹಾಕಿಕೊಂಡಾಗ, "ಎಲ್ಲಿಯ ನಾಗೇಶ್ವರರಾವ್‌ ಎಲ್ಲಿಯ ದೊಡ್ಡಣ್ಣ?" ಎಂದು ಆಡಿಕೊಂಡವರುಂಟು. ಆದರೆ ತಮ್ಮ ಪಾತ್ರನಿರ್ವಹಣೆಯ ಮ‌ೂಲಕ ದೊಡ್ಡಣ್ಣ ಟೀಕಾಕಾರರ ಬಾಯಿ ಮುಚ್ಚಿಸಿದರು.

ಅವರ ದಢೂತಿ ದೇಹವು ಅವರಿಗೆ ಹಾಸ್ಯಪಾತ್ರಗಳನ್ನು ದೊರಕಿಸಿಕೊಡುವಲ್ಲಿ ನೆರವಾಗಿದೆಯಾದರೂ ತಮ್ಮ ಆರೋಗ್ಯದ ಕಡೆಗೆ ಗಮನಕೊಡುವಲ್ಲಿ ದೊಡ್ಡಣ್ಣ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬುದಾಗಿ ಅವರ ಪ್ರೀತಿಪಾತ್ರರು ಪ್ರೀತಿಯಿಂದಲೇ ಆಕ್ಷೇಪಿಸುತ್ತಾರೆ. ಈ ಕುರಿತು ದೊಡ್ಡಣ್ಣ ಗಮನ ಹರಿಸಲಿ ಎಂಬುದು ನಮ್ಮ ವಿನಮ್ರ ಕೋರಿಕೆ. ದೊಡ್ಡಣ್ಣ ನೂರುಕಾಲ ಬಾಳಲಿ ಹಾಗೂ ಚಿತ್ರರಸಿಕರನ್ನು ಹೀಗೆಯೇ ರಂಜಿಸುತ್ತಿರಲಿ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ