'ನೆನಪುಗಳ ಮಾತು ಮಧುರಾ' ಎನ್ನುತ್ತದೆ ಒಂದು ಚಿತ್ರಗೀತೆ. 'ನೂರೊಂದು ನೆನಪು ಎದೆಯಾಳದಿಂದಾ ಹಾಡಾಗಿ ಬಂತೂ ಆನಂದದಿಂದಾ' ಎನ್ನುತ್ತದೆ ಮತ್ತೊಂದು ಗೀತೆ. ಒಟ್ಟಿನಲ್ಲಿ ನೆನಪು ಎಂಬುದು ಒಂದು ಮಧುರಾನುಭೂತಿ. ಈ ಚಿತ್ರದಲ್ಲಿ ಕಾಣಿಸುತ್ತಿರುವ ತಾರಾ ಮತ್ತು ಸುಧಾರಾಣಿ ಸುಮಾರು ಒಂದು ದಶಕದ ಹಿಂದೆ ತಮ್ಮ ಪ್ರತಿಭೆಯಿಂದಲೇ ನಾಯಕಿ ಪಾತ್ರದಲ್ಲಿ ಮಿಂಚಿದವರು ಎಂಬುದನ್ನು ಮರೆಯುವಂತಿಲ್ಲ. ಈ ನಿಟ್ಟಿನಲ್ಲಿ ಈ ಇಬ್ಬರು ನಟೀಮಣಿಯರು ಹಳೆಯದನ್ನೆಲ್ಲಾ ನೆನಪಿಸಿಕೊಳ್ಳುತ್ತಿರುವಂತಿದೆಯಲ್ಲವೇ?
ವೇಮಗಲ್ ಜಗನ್ನಾಥ್ ನಿರ್ದೇಶನದ 'ತುಳಸೀದಳ' ಚಿತ್ರದಲ್ಲಿನ ಚಿಕ್ಕ ಪಾತ್ರವೊಂದರ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ತಾರಾರವರು ನಂತರ ಹಲವು ಹನ್ನೊಂದು ಪಾತ್ರಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಉದ್ಯಮದಲ್ಲಿ ಬೆಳೆದ ರೀತಿ ಬೆರಗು ಹುಟ್ಟಿಸುವಂಥಾದ್ದು.
ರಾಜ್‌ಕುಮಾರ್‌ರವರ ತಂಗಿಯಾಗಿ 'ಗುರಿ' ಚಿತ್ರದಲ್ಲಿ, ವಿಷ್ಣುವರ್ಧನ್‌ರವರ ಜೊತೆಯಲ್ಲಿ 'ಡಾಕ್ಟರ್ ಕೃಷ್ಣ' ಚಿತ್ರದಲ್ಲಿ ನಟಿಸಿದ್ದು ಅವರ ವೃತ್ತಿಜೀವನದ ಪ್ರಮುಖ ಅವಕಾಶಗಳಾದರೆ, ರಾಷ್ಟ್ರಪ್ರಶಸ್ತಿ ವಿಜೇತ 'ಹಸೀನಾ' ಚಿತ್ರದಲ್ಲಿ ಅಭಿನಯಿಸಿದ್ದು ಮತ್ತೊಂದು ಮಜಲು. ಇವುಗಳ ನಡುವೆ ಸರಿಸುಮಾರಾಗಿ ಕನ್ನಡದ ಎಲ್ಲ ನಾಯಕರೊಂದಿಗೂ ಅವರು ಅಭಿನಯಿಸಿದರು ಎನ್ನಬಹುದು.
ಇನ್ನು ಸುಧಾರಾಣಿಯವರು ಚಿತ್ರವೊಂದರಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರಾದರೂ, ರಾಜ್ ಸಂಸ್ಥೆಯಿಂದ ನಿರ್ಮಾಣಗೊಂಡ 'ಆನಂದ್' ಚಿತ್ರದಲ್ಲಿ ನಾಯಕಿಯಾಗಿ ಅಭಿನಯ ವೃತ್ತಿಗೆ ದೊಡ್ಡ ಮಟ್ಟದಲ್ಲಿ ಪಾದಾರ್ಪಣೆ ಮಾಡಿದರು. ಆಗ ಅವರಿಗಿನ್ನೂ 13 ವರ್ಷ. ಅದು ಯಶಸ್ವಿಯಾಗಿದ್ದೇ ತಡ 'ಮನ ಮೆಚ್ಚಿದ ಹುಡುಗಿ', 'ರಣರಂಗ', 'ಸಮರ', 'ಸ್ವಾತಿ', 'ಅವನೇ ನನ್ನ ಗಂಡ', 'ಪಂಚಮವೇದ', 'ಅರಗಿಣಿ', 'ಮೈಸೂರು ಮಲ್ಲಿಗೆ', 'ಮನೆದೇವ್ರು' ಮೊದಲಾದ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಸಾಲುಸಾಲು ಹಿಟ್ ಚಿತ್ರಗಳನ್ನು ನೀಡಿದ ಕೀರ್ತಿಯನ್ನು ತಮ್ಮ ದಾಖಲೆಗೆ ಸೇರಿಸಿಕೊಂಡರು. ರಾಜ್ ಅಭಿನಯದ 'ದೇವತಾ ಮನುಷ್ಯ' ಹಾಗೂ 'ಜೀವನಚೈತ್ರ' ಚಿತ್ರಗಳಲ್ಲಿ ನಟಿಸಿದ್ದು ಇವರ ವೃತ್ತಿಜೀವನದ ಪ್ರಮುಖ ಮಜಲುಗಳು ಎನ್ನಬಹುದು.
ಈ ಇಬ್ಬರೂ ಈಗ ವಿವಾಹಿತರು. ತಾರಾರವರು ಈಗ ಹಾಸ್ಯಪಾತ್ರಗಳಿಗೂ ತಮ್ಮನ್ನು ಒಗ್ಗಿಸಿಕೊಂಡಿದ್ದರೆ, ಸುಧಾರಾಣಿಯವರು ಆಯ್ದ ಪಾತ್ರಗಳಲ್ಲಷ್ಟೇ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಚಿತ್ರರಸಿಕರಿಗೆ ಮನರಂಜನೆಯನ್ನು ಒದಗಿಸುವಲ್ಲಿ ಈ ಇಬ್ಬರೂ ಹಿಂದೆಬಿದ್ದಿಲ್ಲ ಎಂಬುದಂತೂ ಸತ್ಯ. ಇಬ್ಬರಿಗೂ ಒಳ್ಳೆಯದನ್ನೇ ಹಾರೈಸೋಣ ಮತ್ತು ಇನ್ನೂ ಬಹಳಷ್ಟು ಕಾಲದವರೆಗೆ ಚಿತ್ರರಸಿಕರನ್ನು ರಂಜಿಸುತ್ತಿರಲಿ ಎಂದು ಆಶಿಸೋಣ.