'ಸಿದ್ಲಿಂಗು' ಚಿತ್ರದ ಪ್ರಚಾರ ಸಾಮಗ್ರಿಗಳನ್ನು ನೋಡಿದಾಗ ಹಾಗೊಂದು ಪ್ರಶ್ನೆ ಉದ್ಭವವಾಗುತ್ತದೆ. ಈ ಹಿಂದೆ 'ದೇವದಾಸ್', 'ಧೂಳ್' ಚಿತ್ರಗಳು ವಿಫಲವಾದಾಗ 'ಹುಡುಗರು' ಚಿತ್ರದ ಯಶಸ್ಸು ಯೋಗಿಯನ್ನು ಕಾಪಾಡಿತು. ಯಶಸ್ಸಿನ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕೆಂದರೆ ಮತ್ತು ತಮ್ಮ ಸ್ಥಾನವನ್ನು ಯೋಗಿ ಭದ್ರಪಡಿಸಿಕೊಳ್ಳಬೇಕೆಂದರೆ 'ಸಿದ್ಲಿಂಗು' ಚಿತ್ರವೂ ಯಶಸ್ಸು ದಾಖಲಿಸಬೇಕಾಗಿದೆ.
'ಅಂಬಾರಿ' ಚಿತ್ರದ ಅಭಿನಯಕ್ಕಾಗಿ ಯೋಗಿ ರಾಜ್ಯಪ್ರಶಸ್ತಿಯನ್ನೇನೋ ಪಡೆದುಕೊಂಡಿದ್ದಾರೆ. ಆದರೆ ಗಾಂಧಿನಗರದ ಪಂಡಿತರು ಅಭಿಪ್ರಾಯಪಡುವ ಪ್ರಕಾರ 'ಹುಡುಗರು' ಚಿತ್ರದಲ್ಲಿದ್ದಂಥ ತರಲೆ ಪಾತ್ರಗಳನ್ನು ಯೋಗಿ ನಿರ್ವಹಿಸಿದರೆ ಅವರ ಅಭಿಮಾನಿಗಳಾಗಿರುವ ಪಡ್ಡೆಹುಡುಗರಿಗೆ ಇಷ್ಟವಾಗುತ್ತದಂತೆ.
ಜೊತೆಗೆ ಯೋಗಿ ನೃತ್ಯದಲ್ಲಿ ಪ್ರವೀಣ. 'ಜಿಂಕೆ ಮರೀನಾ ನೀ ಜಿಂಕೆ ಮರೀನಾ' ಹಾಡು, 'ಎಲೆ ಕೆಂಚಿ ತಾರೆ ತಮ್ ಮನೇ ತಂಕ ಬಾರೇ' ಹಾಡು, ಮತ್ತು ಇತ್ತೀಚಿನ 'ಹುಡುಗರು' ಚಿತ್ರದ ಹಾಡುಗಳಲ್ಲಿ ಯೋಗಿಯ ನೃತ್ಯವನ್ನು ಮಕ್ಕಳು ಮತ್ತು ಪಡ್ಡೆ ಹುಡುಗರು ಮೆಚ್ಚಿಕೊಂಡಿರುವುದರಿಂದ ಅವರು ಇನ್ನೊಂದಷ್ಟು ದಿನ ಇಂಥ 'ಟಪಾಂಗುಚ್ಚಿ' ಶೈಲಿಯಲ್ಲೇ ಮನರಂಜಿಸುವುದು ಉತ್ತಮ ಎಂಬುದು ಅವರ ಅಭಿಪ್ರಾಯ.
ಮೋಹಕ ತಾರೆ ರಮ್ಯಾ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಸಿದ್ಲಿಂಗು' ಚಿತ್ರವನ್ನು ಯೋಗಿಯ ತಂದೆ ಟಿ.ಪಿ.ಸಿದ್ಧರಾಜು ನಿರ್ಮಿಸುತ್ತಿದ್ದು ವಿಜಯ್ ಪ್ರಸಾದ್ ನಿರ್ದೇಶಿಸಿದ್ದಾರೆ. ಅನೂಪ್ ಸಿಳೀನ್ ಸಂಗೀತ, ಹೊಸಮನೆ ಮೂರ್ತಿ ಕಲಾ ನಿರ್ದೇಶನವಿರುವ ಈ ಚಿತ್ರ ಯೋಗಿಯ ಚಿತ್ರಬದುಕಿಗೆ ಮತ್ತಷ್ಟು ಬಲ ತುಂಬಲಿ ಎಂದು ಹಾರೈಸೋಣ.