ನಮ್ಮ ನಡುವಿನ ಪ್ರತಿಭಾವಂತ ಪೋಷಕನಟರಲ್ಲಿ ಶ್ರೀನಿವಾಸಮೂರ್ತಿ ಕೂಡಾ ಒಬ್ಬರು. ಇವರ ಸಾಮರ್ಥ್ಯಕ್ಕೆ 'ಕವಿರತ್ನ ಕಾಳಿದಾಸ' ಚಿತ್ರದಲ್ಲಿನ ಭೋಜರಾಜನ ಪಾತ್ರವೊಂದೇ ಸಾಕು. ಅವರ ಮಗ ನವೀನ್‌ಕೃಷ್ಣರೂ ಪ್ರತಿಭಾವಂತರೇ. ಆದರೆ ಅವರಿಗೆ ತಮ್ಮ ಸಾಮರ್ಥ್ಯವನ್ನು ಹೊರಗೆಡವಲು ಒಂದು ಬ್ರೇಕ್ ಬೇಕಿದೆ ಅಷ್ಟೇ. ಅದು ಈಗ 'ಯೋಗರಾಜ' ಚಿತ್ರದ ಮೂಲಕ ಸಾಕಾರಗೊಳ್ಳಲಿದೆ ಎನ್ನುತ್ತಿದೆ ಚಿತ್ರತಂಡ.
ಈ ಹಿಂದೆ ತಮ್ಮ ಅಭಿನಯದ 'ಧಿಮಾಕು' ಚಿತ್ರದ ಕುರಿತು ನವೀನ್‌ಕೃಷ್ಣ ಸಾಕಷ್ಟು ನಿರೀಕ್ಷೆಯನ್ನಿಟ್ಟುಕೊಂಡಿದ್ದರು. ಅವರ ಅಭಿನಯ, ಡೈಲಾಗ್ ಡೆಲಿವರಿ, ಚಿತ್ರದ ಹಾಸ್ಯ ಸನ್ನಿವೇಶಗಳು ಮತ್ತು ಹಾಡುಗಳು ಚೆನ್ನಾಗಿಯೇ ಮೂಡಿಬಂದಿದ್ದವು. ಆದರೆ ದುರದೃಷ್ಟವಶಾತ್ ಚಿತ್ರವು ಗಳಿಕೆಯಲ್ಲಿ ಸೋತಿತು.
ಪ್ರಸ್ತುತ 'ಯೋಗರಾಜ' ಚಿತ್ರವನ್ನು ದಯಾಳ್ ಪದ್ಮನಾಭನ್ ನಿರ್ದೇಶಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಸರ್ಕಸ್' ಚಿತ್ರ, ಮುರಳಿ-ಪೂಜಾಗಾಂಧಿ-ರಾಧಿಕಾಗಾಂಧಿ ಅಭಿನಯದ 'ಶ್ರೀಹರಿಕಥೆ' ಚಿತ್ರಗಳು ವಿಫಲಗೊಂಡಿದ್ದರಿಂದ ಈ ಚಿತ್ರವನ್ನು ಶತಾಯ-ಗತಾಯ ಗೆಲ್ಲಿಸಲು ದಯಾಳ್ ಶ್ರಮವಹಿಸಿದ್ದಾರಂತೆ.
ಮಿಲಿಂದ್ ಧರ್ಮಸೇನ ಸಂಗೀತ, ರಾಜೇಶ್ ಛಾಯಾಗ್ರಹಣವಿರುವ ಈ ಚಿತ್ರದ ಚಿತ್ರಕಥೆ ಮತ್ತು ಸಂಭಾಷಣೆಯಲ್ಲಿ ನಿರ್ದೇಶಕ ದಯಾಳ್ ಜೊತೆಯಲ್ಲಿ ನವೀನ್‌ಕೃಷ್ಣ ಕೂಡಾ ಕೈಜೋಡಿಸಿರುವುದು ಮತ್ತು ಚಿತ್ರಕ್ಕೆಂದು ಎರಡು ಹಾಡುಗಳನ್ನೂ ಬರೆದಿರುವುದು ವಿಶೇಷ. ಚಿತ್ರದ 'ಯೋಗರಾಜ್' ಎಂಬ ಶೀರ್ಷಿಕೆಯ ಅಡಿಯಲ್ಲಿ 'But' ಎಂಬ ಪದವನ್ನು ಸೇರಿಸಲಾಗಿದೆ. ಇದು ಯಾರದ್ದಾದರೂ ಕಾಲೆಳೆಯುವ ತಂತ್ರವೇ ಎಂಬುದು ಚಿತ್ರವನ್ನು ನೋಡಿದ ನಂತರವೇ ಅರ್ಥವಾದೀತು!!