ರವಿಶಂಕರ್ ಮತ್ತು ತಬಲಾ ನಾಣಿ ಎಂಥಾ ಅಪ್ರತಿಮ ಕಲಾವಿದರು ಎಂಬುದನ್ನು ಹೇಳಬೇಕಿಲ್ಲ. ರವಿಶಂಕರ್‌ಗೆ ಚಿತ್ರರಂಗದಲ್ಲಿನ್ನೂ ಬ್ರೇಕ್ ಸಿಕ್ಕಿಲ್ಲವಾದರೂ ಅವರು ಕಿರುತೆರೆಯ ಧಾರಾವಾಹಿಗಳಲ್ಲಿ ಸೂಪರ್‌ಸ್ಟಾರ್ ಆಗಿದ್ದರು ಎಂಬುದನ್ನು ಮರೆಯುವಂತಿಲ್ಲ. ಈ-ಟಿವಿಯಲ್ಲಿ ಬರುತ್ತಿದ್ದ 'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿ ಡಾ.ವಿಟ್ಠಲ್‌ರಾವ್ ಪಾತ್ರದಲ್ಲಿ ಅವರದು ಅನನ್ಯ ಅಭಿನಯ.
ಇದೇ ರೀತಿಯಲ್ಲಿ ತಬಲಾ ನಾಣಿ ಅಲ್ಲಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅವರ ಪ್ರತಿಭೆಯು ಸಮರ್ಥವಾಗಿ ಅನಾವರಣಗೊಂಡಿದ್ದು ಗುರುಪ್ರಸಾದ್ ನಿರ್ದೇಶನದ 'ಮಠ' ಚಿತ್ರದಲ್ಲಿ. ಕುಡುಕನ ಪಾತ್ರದಲ್ಲಿ ಅವರು ನೀಡಿದ್ದ ಅಭಿನಯ ಎಷ್ಟೊಂದು ಅದ್ಭುತವಾಗಿತ್ತೆಂದರೆ ಅವರು ಇರುವುದೇ ಹೀಗೆ, ಮಾತಾಡುವುದೇ ಹೀಗೆ ಎಂದು ನೋಡುಗರು ಭಾವಿಸುವಂತಾಗಿತ್ತು.
ಇದೇ ಗುರುಪ್ರಸಾದ್ ನಿರ್ದೇಶನದ 'ಎದ್ದೇಳು ಮಂಜುನಾಥ' ಚಿತ್ರದಲ್ಲಿ ಜಗ್ಗೇಶ್ ಜೊತೆಗೆ ನಟಿಸಿದ ತಬಲಾನಾಣಿ, ಕುರುಡನ ಪಾತ್ರದ ಅಭಿನಯದ ಮೂಲಕ ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು. ಇವರೂ ಸಹ ಅಭಿನಯವನ್ನು ಹೊರತುಪಡಿಸಿ ಹಾಸ್ಯೋತ್ಸವ, ನಗೆಯ ಹಬ್ಬಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.
ರವಿಶಂಕರ್‌ರವರು ಕಿರುತೆರೆಯಲ್ಲಿನ ತಮ್ಮ ಖ್ಯಾತಿಯನ್ನು ಬೆನ್ನಿಗಿಟ್ಟುಕೊಂಡು 'ಪಯಣ', 'ನಂಜನಗೂಡು ನಂಜುಂಡ', 'ಮಿಸ್ಟರ್ ಪೇಂಟರ್' ಮೊದಲಾದ ಚಿತ್ರಗಳಲ್ಲಿ ನಟಿಸಿದ್ದರೂ ಅವುಗಳಿಂದ ಅವರಿಗೆ ಗಿಟ್ಟಲಿಲ್ಲ. ಈಗ ರವಿಶಂಕರ್ ಮತ್ತು ತಬಲಾನಾಣಿ ಒಟ್ಟಾಗಿ ನಟಿಸುತ್ತಿರುವ 'ಹಕ್ಕ-ಬುಕ್ಕ' ಚಿತ್ರವು ಜನರನ್ನು ರಂಜಿಸಲು ಸದ್ಯದಲ್ಲಿಯೇ ಬೆಳ್ಳಿತೆರೆಗೆ ಬರಲಿದೆ. ಚಿತ್ರದ ಶೀರ್ಷಿಕೆಯ ಕುರಿತು ಸಣ್ಣ ಮಟ್ಟಿಗಿನ ವಿವಾದ ಎದ್ದಿತ್ತಾದರೂ ಅದೀಗ ತಣ್ಣಗಾಗಿದೆ.
ಹಾಸ್ಯನಟರಾಗಿ ದೇಹಭಾಷೆಯನ್ನು ಸಮರ್ಥವಾಗಿ ಬಿಂಬಿಸಬಲ್ಲ ಈ ಇಬ್ಬರು ಕಲಾವಿದರು ಈ ಹಾಸ್ಯಚಿತ್ರಕ್ಕೆ ಮತ್ತೊಂದು ಆಯಾಮವನ್ನೇ ಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದು ನಿಜವಾಗಿ, ಚಿತ್ರದ ಯಶಸ್ಸಿಗೆ ಕಾರಣವಾಗಲಿ ಮತ್ತು ಈ ಇಬ್ಬರಿಗೂ ಚಿತ್ರರಂಗದಲ್ಲಿ ಒಂದು ಭದ್ರವಾದ ನೆಲೆಯನ್ನು ಕಲ್ಪಿಸಿಕೊಡುವಂತಾಗಲಿ.