ಶಿವರಾಜ್‌ಕುಮಾರ್ ಅಭಿನಯದ 100ನೇ ಚಿತ್ರ ಎಂಬ ಹೆಗ್ಗಳಿಕೆಯೊಂದಿಗೆ ಬೆಳ್ಳಿತೆರೆಗೆ ಅಪ್ಪಳಿಸಲು ಧಾವಿಸಿ ಬರುತ್ತಿರುವ 'ಜೋಗಯ್ಯ' ಚಿತ್ರವು ಆಗಸ್ಟ್‌ನಲ್ಲಿ ತೆರೆಕಾಣಲಿದ್ದು ಅವರ ಅಭಿಮಾನಿಗಳು ಅಲ್ಲಿಯವರೆಗೆ ಕಾಯಬೇಕಾಗಿದೆ.
ಶಿವಣ್ಣ ಅಭಿನಯದ ಮತ್ತು ಪ್ರೇಮ್ ನಿರ್ದೇಶನದ 'ಜೋಗಿ' ಚಿತ್ರವು ಕೆಲ ವರ್ಷಗಳ ಹಿಂದೆ ಬಿಡುಗಡೆಯಾದಾಗ ಅದೆಂಥಾ ಸಂಚಲನೆಯನ್ನು ಸೃಷ್ಟಿಸಿತ್ತೆಂದರೆ ಸೂಪರ್‌ಸ್ಟಾರ್ ರಜನೀಕಾಂತ್ ಖುದ್ದು ಬೆಂಗಳೂರಿಗೆ ಬಂದು ಡಾ.ರಾಜ್‌ಕುಮಾರ್ ಜೊತೆಯಲ್ಲಿ ಆ ಚಿತ್ರವನ್ನು ವೀಕ್ಷಿಸಿದ್ದರು. ಅದರ ಎಲ್ಲಾ ಹಾಡುಗಳೂ ಸೂಪರ್‌ಹಿಟ್ ಆಗಿದ್ದವು. ಇವೆಲ್ಲವೂ ಈಗ ಇತಿಹಾಸ.
ಅಂದು 'ಜೋಗಿ' ಚಿತ್ರವನ್ನು ಅಶ್ವಿನಿ ಮೀಡಿಯಾ ನೆಟ್‌ವರ್ಕ್ ಸಂಸ್ಥೆಯು ನಿರ್ಮಿಸಿತ್ತು. ಈಗಿನ 'ಜೋಗಯ್ಯ' ಚಿತ್ರದ ನಿರ್ಮಾಪಕಿ ರಕ್ಷಿತಾ ಪ್ರೇಮ್. ಹಾಗಂತ ಅಶ್ವಿನಿ ಸಂಸ್ಥೆಯ ಸಹಯೋಗ ಈ ಚಿತ್ರಕ್ಕೆ ಇಲ್ಲವೆಂದಲ್ಲ. ಚಿತ್ರದ ಸಿ.ಡಿ. ಮತ್ತು ಧ್ವನಿಸುರುಳಿಗಳ ವಿತರಣೆಯ ಜೊತೆಗೆ, ಪ್ರತಿಷ್ಠಿತ ಚಿತ್ರವಿತರಣಾ ವಲಯವೆಂದೇ ಹೆಸರಾದ ಬೆಂಗಳೂರು-ಕೋಲಾರ-ತುಮಕೂರು (ಬಿ.ಕೆ.ಟಿ.) ಪ್ರಾಂತ್ಯದ ವಿತರಣಾ ಹಕ್ಕುಗಳನ್ನು ಈ ಸಂಸ್ಥೆಯು ದಕ್ಕಿಸಿಕೊಂಡಿರುವುದು ಎಲ್ಲರ ಹುಬ್ಬೇರಿಸಿದೆ.
'ಜೋಗಿ' ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದರು. 'ಜೋಗಯ್ಯ'ನ ಸಂಗೀತ ನಿರ್ದೇಶನವನ್ನು ವಿ.ಹರಿಕೃಷ್ಣ ನಿರ್ವಹಿಸಿದ್ದಾರೆ. ಈಗಾಗಲೇ ಹಾಡುಗಳು ಸೂಪರ್‌ಹಿಟ್ ಆಗಿವೆ. ಅದರಲ್ಲೂ ಭಾರತದಲ್ಲೇ ಪ್ರಪ್ರಥಮ ಬಾರಿಗೆ 3ಡಿ ಆಯಾಮದಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗುತ್ತಿರುವ ಹಾಡಿನ ವೀಕ್ಷಣೆಗೆ ಎಲ್ಲರೂ ಕಾಯುತ್ತಿದ್ದಾರೆ.
ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಈ ಚಿತ್ರದ ಮುಹೂರ್ತವನ್ನು ನಿರ್ದೇಶಕ ಪ್ರೇಮ್ ಆಯೋಜಿಸಿದ್ದುದು ನಿಮಗೆ ನೆನಪಿರಬಹುದು. ದಕ್ಷಿಣ ಭಾರತದ ಚಿತ್ರರಂಗದ ಸೂಪರ್‌ಸ್ಟಾರ್‌ಗಳು ಭಾಗವಹಿಸಿದ್ದ ಈ ಸಮಾರಂಭದಲ್ಲಿ ಶಿವಣ್ಣ ಅಘೋರಿಗಳ ರೀತಿಯಲ್ಲಿ ಮೈಗೆಲ್ಲಾ ಬೂದಿಯನ್ನು ಬಳಿದುಕೊಂಡು ಸಹ-ನರ್ತಕರೊಂದಿಗೆ ನೃತ್ಯಮಾಡಿದ್ದು ವಿಶೇಷವಾಗಿತ್ತು ಮತ್ತು ಅಂದಿನಿಂದಲೇ ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಒಟ್ಟಿನಲ್ಲಿ 'ಜೋಗಯ್ಯ' ಈಗ ಅಕ್ಷರಶಃ ನಿರೀಕ್ಷೆಗಳ ಮೂಟೆಯಾಗಿದ್ದಾನೆ...!!