ಸ್ಯಾಂಡಲ್‌ವುಡ್ ಅಥವಾ ಚಂದನವನದಲ್ಲಿ ಸಂಚಲನೆಯನ್ನೇ ಸೃಷ್ಟಿಸುತ್ತಿರುವ ರಾಗಿಣಿ ಈಗ 'ಶಿವ' ಚಿತ್ರದಲ್ಲಿ ಶಿವರಾಜ್‌ಕುಮಾರ್ ಜೊತೆಯಲ್ಲಿ ನಟಿಸುತ್ತಿರುವುದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ಈ ಹಿಂದೆ ಸುದೀಪ್ ಜೊತೆಯಲ್ಲಿ 'ವೀರ ಮದಕರಿ', 'ಕೆಂಪೇಗೌಡ' ಚಿತ್ರಗಳಲ್ಲಿ ನಟಿಸಿದ್ದ ರಾಗಿಣಿ ಚೆನ್ನಾಗಿ ನರ್ತಿಸಬಲ್ಲರು ಎಂಬುದನ್ನು ತಮ್ಮ ಚಿತ್ರಗಳಲ್ಲಿನ ಹಾಗೂ ಚಲನಚಿತ್ರ ಸಂಬಂಧಿ ಕಾರ್ಯಕ್ರಮಗಳಲ್ಲಿನ ನರ್ತನದ ಮೂಲಕ ಸಾಬೀತುಮಾಡಿದ್ದಾರೆ.
'ಶಿವ' ಚಿತ್ರದ ಶೀರ್ಷಿಕೆಯ ವಿನ್ಯಾಸವನ್ನು ನೋಡುತ್ತಿದ್ದರೆ ತೊಂಬತ್ತರ ದಶಕದಲ್ಲಿ ಬಂದ ತೆಲುಗು ಹೀರೋ ನಾಗಾರ್ಜುನರ ಇದೇ ಶೀರ್ಷಿಕೆಯ ವಿನ್ಯಾಸ ನೆನಪಾಗುತ್ತದೆ. ಕಾಲೇಜು ಜೀವನದಲ್ಲಿ ರೌಡಿಸಂ ಪ್ರವೇಶಿಸಿದಾಗ ಕಂಡುಬರುವ ತಲ್ಲಣಗಳನ್ನು ಆ ಚಿತ್ರವು ಸಮರ್ಥವಾಗಿ ಹೊರಹೊಮ್ಮಿಸಿತ್ತು.
ಪ್ರಸ್ತುತ ಕನ್ನಡದ 'ಶಿವ' ಚಿತ್ರವನ್ನು ಓಂಪ್ರಕಾಶ್‌ರಾವ್ ನಿರ್ದೇಶಿಸುತ್ತಿದ್ದಾರೆ. ಹಾಗಾಗಿ ಹಾಡು-ಹಾಸ್ಯ-ಮನರಂಜನೆಗಳಿಗೆ ಕೊರತೆಯಿರುವುದಿಲ್ಲ ಅಂದುಕೊಳ್ಳಬಹುದು. ಆರ್.ಎಸ್.ಪ್ರೊಡಕ್ಷನ್ಸ್ ವತಿಯಿಂದ ಅರ್ಪಣೆಯಾಗುತ್ತಿರುವ ಈ ಚಿತ್ರವನ್ನು ಕೆ.ಪಿ.ಶ್ರೀಕಾಂತ್ ಮತ್ತು ಬಿ.ಕಾಂತರಾಜ್ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತ, ಸತ್ಯ ಹೆಗಡೆಯವರ ಛಾಯಾಗ್ರಹಣವಿದೆ. ಕಡಕ್ ಸಂಭಾಷಣೆಗೆ ಹೆಸರಾದ ಎಂ.ಎಸ್.ರಮೇಶ್ ಸಂಭಾಷಣಾಕಾರರು.
ಚಿತ್ರದ ಶೀರ್ಷಿಕೆಯ ಅಡಿಯಲ್ಲಿ 'ದಿ ಮೋಸ್ಟ್ ಪವರ್‌ಫುಲ್ ಮ್ಯಾನ್ ಆನ್ ದಿ ಅರ್ತ್' ಎಂಬ ಅಡಿಬರಹವನ್ನು ನೀಡಲಾಗಿದೆ. ಅಂದರೆ ಇದರಲ್ಲಿ ಸ್ಟಂಟ್-ಹೊಡೆದಾಟದ ದೃಶ್ಯಗಳಿಗೇನೂ ಕಮ್ಮಿಯಿಲ್ಲ ಎಂದಾಯಿತು. 'ತಂಗಿ' ಸರಣಿಯ ಚಿತ್ರಗಳಲ್ಲಿ ಒಂದಷ್ಟು ದಿನ ತೊಡಗಿಸಿಕೊಂಡಿದ್ದ ಶಿವಣ್ಣನವರಿಗೆ ಹಾಗೂ ಅವರ ಅಭಿಮಾನಿಗಳಿಗೆ ಇದೊಂದು ಚೇಂಜ್ ಆಗಬಹುದು.