'ಯೋಗರಾಜ'ದಿಂದ ನನ್ನ ಯೋಗಾಯೋಗ ಬದಲಾಗುತ್ತೆ: ದಯಾಳ್ ಪದ್ಮನಾಭನ್
EVENT
ನಿರ್ದೇಶಕ ಮತ್ತು ನಿರ್ಮಾಪಕ ದಯಾಳ್ 'ಯೋಗರಾಜ' ಚಿತ್ರದ ಕುರಿತಾದ ಪತ್ರಿಕಾಗೋಷ್ಠಿಯಲ್ಲಿ ಈ ಅರ್ಥದಲ್ಲಿ ಹೇಳಿಕೊಳ್ಳುವಾಗ ಆತ್ಮವಿಶ್ವಾಸದಿಂದ ಬೀಗುತ್ತಿದ್ದರು. ಕಲಾವಿದರು, ತಂತ್ರಜ್ಞರು ತಮ್ಮ ತಮ್ಮ ಕರ್ತವ್ಯಗಳನ್ನು ಮನಸಾರೆ ನಿರ್ವಹಿಸಿ ಚಿತ್ರದ ಗುಣಮಟ್ಟವನ್ನು ವರ್ಧಿಸಿರುವುದು ಅವರ ಆ ಆತ್ಮವಿಶ್ವಾಸಕ್ಕೆ ಕಾರಣವಾಗಿತ್ತು ಎನಿಸುತ್ತದೆ.
ಹೈಲೈಟ್ ಎನಿಸುವಂತೆ ಚಿತ್ರದ ರೀರೆಕಾರ್ಡಿಂಗ್ ಮಾಡಿಕೊಟ್ಟ ಗೌತಮ್ ಶ್ರೀವತ್ಸ, ಸಂಭಾವನೆಯ ಕುರಿತು ಚಕಾರವೆತ್ತದೆ ತಮ್ಮ ಪಾತ್ರಕ್ಕೆ ಜೀವತುಂಬಿದ ನಟ ಸುಚೇಂದ್ರ ಪ್ರಸಾದ್, ಎರಡು ಹಾಡುಗಳನ್ನು ಬರೆದು ಸಂಭಾಷಣೆಯಲ್ಲೂ ಸಹಾಯಹಸ್ತ ನೀಡಿರುವ ನಾಯಕ ನವೀನ್ ಕೃಷ್ಣ ಎಲ್ಲರ ಕುರಿತೂ ಈ ಸಂದರ್ಭದಲ್ಲಿ ದಯಾಳ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಈ ಜೀವನ ನಾವು ಭಾವಿಸಿದಂತೆ ಸಾಗದೇ ಯೋಗಾಯೋಗಗಳ ಪ್ರಶ್ನೆಗಳ ನಡುವೆಯೇ ತನ್ನ ಹಾದಿಯನ್ನು ಕಂಡುಕೊಳ್ಳುತ್ತದೆ ಎಂಬ ತಿರುಳನ್ನು ಒಳಗೊಂಡಿರುವ ಈ ಚಿತ್ರದ ಕಥೆಯ ಪ್ರತಿಯೊಂದು ದೃಶ್ಯದಲ್ಲೂ ಬಹಳಷ್ಟು ತಿರುವುಗಳಿವೆಯಂತೆ. ಸುಬ್ಬಯ್ಯನಾಯ್ಡುರವರಿಂದ ಮೊದಲ್ಗೊಂಡು ಇಂದಿನ ಯಶ್-ಯೋಗಿಯಂಥ ನಟರವರೆಗಿನ 78 ಮಂದಿ ಕನ್ನಡ ನಟರ ಹೆಸರುಗಳನ್ನು ನಾಯಕ ನವೀನ್ ಕೃಷ್ಣ ತಮ್ಮ ಸಂಭಾಷಣೆಯಲ್ಲಿ ಒಂದೇ ಉಸಿರಿನಲ್ಲಿ ಹೇಳಿರುವುದು ಈ ಚಿತ್ರದಲ್ಲಿನ ವಿಶೇಷತೆಯಂತೆ.
'ಸರ್ಕಸ್', 'ಶ್ರೀಹರಿಕಥೆ' ಚಿತ್ರಗಳ ವೈಫಲ್ಯವನ್ನು ಕಂಡಿರುವ ದಯಾಳ್‌ಗೆ ಈ ಚಿತ್ರವು ಯಶಸ್ಸು ಕಾಣಲೇಬೇಕಾದ ಜರೂರತ್ತಿದೆ. ಹೀಗಾಗಿ ಸದರಿ 'ಯೋಗರಾಜ' ಚಿತ್ರವನ್ನು ಅತ್ಯಂತ ಸಂವೇದನಾತ್ಮಕವಾಗಿ ಅವರು ಚಿತ್ರಿಸಿದ್ದಾರಂತೆ. ಇದರ ದ್ಯೋತಕವೋ ಎಂಬಂತೆ ಸೆನ್ಸಾರ್ ಮಂಡಳಿಯು ಒಂದು ಕಡೆಯೂ ಕತ್ತರಿಯಾಡಿಸದೆ ಚಿತ್ರಕ್ಕೆ 'ಯು' ಪ್ರಮಾಣಪತ್ರವನ್ನೇನೋ ನೀಡಿದೆ. ಇನ್ನು ಚಿತ್ರರಸಿಕರ ಪ್ರಮಾಣಪತ್ರ ಮತ್ತು ಬೆನ್ನು ತಟ್ಟುವಿಕೆ ಬಾಕಿಯಿದೆ. ಅದಕ್ಕೆ ಇನ್ನೂ 3 ದಿನ ಕಾಯಬೇಕು.