ಸುಮಾರು ಹದಿನೈದು ವರ್ಷಗಳ ಹಿಂದೆ ರೆಬೆಲ್‌ಸ್ಟಾರ್ ಅಂಬರೀಷ್ ಅಭಿನಯದಲ್ಲಿ 'ಬೇಟೆ' ಎಂಬ ಚಿತ್ರವೊಂದು ಬಂದಿತ್ತು. ಆಕ್ಷನ್ ಚಿತ್ರಗಳಿಗೆ ಎತ್ತಿದ ಕೈ ಎನಿಸಿದ್ದ ವಿ.ಸೋಮಶೇಖರ್ ಈ ಚಿತ್ರವನ್ನು ನಿರ್ದೇಶಿಸಿದ್ದರು. ಈಗ ಅದೇ ಹೆಸರಿನ ಮತ್ತೊಂದು ಚಿತ್ರವು ಚಿತ್ರೀಕರಣವನ್ನು ಮುಗಿಸಿರುವುದು ವಿಶೇಷ.
'ಬೇಟೆ' ಚಿತ್ರದಲ್ಲಿ ಅಕ್ಷಯ್ ನಾಯಕನಾಗಿ ನಟಿಸಿದ್ದರೆ, ನಾಯಕಿ ಪಾತ್ರದಲ್ಲಿ ಮುಂಬೈ ಬೆಡಗಿ ಇಷಿತಾ ವ್ಯಾಸ್ ನಟಿಸಿದ್ದಾರೆ. ಗಮನಾರ್ಹವಾದ ಪಾತ್ರದಲ್ಲಿ ಆಯೇಷಾ ನಟಿಸಿದ್ದಾರೆ. ಥ್ರಿಲ್ಲರ್ ಮಂಜು ನಿರ್ದೇಶನದ 'ಜಯಹೇ' ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ಆಯೇಷಾರನ್ನು ಲೇಡಿ ಬ್ರೂಸ್ಲಿ ಎಂದೇ ಬಿಂಬಿಸಲಾಗಿತ್ತು ಮತ್ತು ಸ್ಟಂಟ್ ದೃಶ್ಯಗಳಲ್ಲಿನ ಅವರ ಪರಿಣತಿಯೇ ಇದಕ್ಕೆ ಕಾರಣವಾಗಿತ್ತು.
ತೀರಾ ಇತ್ತೀಚೆಗೆ ಬಿಡುಗಡೆಯಾದ 'ಚೆನ್ನಮ್ಮ ಐ.ಪಿ.ಎಸ್' ಮತ್ತು ಬಿಡುಗಡೆಯಾಗಬೇಕಿರುವ 'ಒನಕೆ ಓಬವ್ವ' ಚಿತ್ರದಲ್ಲಿ ಕಾಣಿಸಿಕೊಂಡಿರುವ ಆಯೇಷಾ ಸದರಿ ಬೇಟೆ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿನ ತಮ್ಮ ಪಯಣವನ್ನು ಮುಂದುವರಿಸಿದ್ದಾರೆ. ಈ ಚಿತ್ರದಲ್ಲೂ ಅವರಿಗೆ ಫೈಟಿಂಗ್ ದೃಶ್ಯಗಳಿವೆಯಂತೆ ಮತ್ತು ಅವರದು ಪತ್ರಕರ್ತೆಯ ಪಾತ್ರವಂತೆ.
ಚಿತ್ರದಲ್ಲಿ ಒಂದು ಐಟಂ ಸಾಂಗ್‌ನ್ನು ವಿಶೇಷವಾಗಿ ಚಿತ್ರೀಕರಿಸಲಾಗಿದೆಯಂತೆ. ಈ ಹಾಡಿಗೆ ನರ್ತಿಸಿರುವವರು ಆಲಿಷಾ ಎಂಬಾಕೆ. ಈ ಚಿತ್ರದ ನಿರ್ಮಾಪಕರಾದ ಶ್ರೀನಿವಾಸ್ ಈ ಚಿತ್ರದಲ್ಲೊಂದು ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಮತ್ತೊಂದು ವಿಶೇಷ. ಶ್ರೀನಿವಾಸ್ ಕೌಶಿಕ್ ಈ ಚಿತ್ರದ ನಿರ್ದೇಶಕರು. 'ಬೇಟೆ' ಚಿತ್ರವು ಆದಷ್ಟು ಬೇಗ ಬಿಡುಗಡೆಯಾಗಿ ಯಶಸ್ಸನ್ನು ದಾಖಲಿಸಲಿ ಎಂದು ಹಾರೈಸೋಣವೇ?