'ಎ.ಕೆ.47' ಚಿತ್ರದ ಯಶಸ್ಸನ್ನು 'ಎ.ಕೆ. 56' ಮೀರಿಸುತ್ತದೆಯೇ?
Event
EVENT
ಈ ಪ್ರಶ್ನೆಗೆ 'ಹೌದು' ಎಂಬ ಉತ್ತರವನ್ನು ನೀಡುತ್ತಾರೆ ಈ ಚಿತ್ರದ ನಿರ್ದೇಶಕ ಓಂ ಪ್ರಕಾಶ್. ಶಿವರಾಜ್‌ಕುಮಾರ್, ಚಾಂದಿನಿ ಅಭಿನಯದ 'ಎ.ಕೆ.47' ಚಿತ್ರವು ಆ ಕಾಲಕ್ಕೆ ದುಬಾರಿ ಎನಿಸಿಕೊಂಡಿತ್ತು ಮತ್ತು ಅಪೂರ್ವ ಯಶಸ್ಸನ್ನು ದಾಖಲಿಸಿತ್ತು. ಹಿಂದಿ ಚಿತ್ರರಂಗದ ಆಶಿಷ್ ವಿದ್ಯಾರ್ಥಿ, ಓಂಪುರಿ ಮೊದಲಾದ ಮಹಾರಥಿಗಳು ನಟಿಸಿದ್ದ ಚಿತ್ರವೂ ಅದಾಗಿತ್ತು. ಇದನ್ನು ಓಂ ಪ್ರಕಾಶ್ ನಿರ್ದೇಶಿಸಿದ್ದರು.
ಈಗ 'ಎ.ಕೆ.56' ಚಿತ್ರದ ಕುರಿತೂ ಅದೇ ನಿರೀಕ್ಷೆಗಳು ಹುಟ್ಟುವುದಕ್ಕೆ ಕಾರಣ ಇದು ಅತಿ ಹೆಚ್ಚು ಬಜೆಟ್‌ನ ಚಿತ್ರವೆನಿಸಿಕೊಂಡಿರುವುದು. ಓಂ ಪ್ರಕಾಶ್‌ರವರೇ ಹೇಳುವ ಪ್ರಕಾರ ಈ ಚಿತ್ರಕ್ಕೆ ಹನ್ನೆರಡರಿಂದ ಹದಿಮೂರು ಕೋಟಿ ರೂಪಾಯಿಗಳು ಖರ್ಚಾಗಿವೆಯಂತೆ.
ತಾರಾಗಣದಲ್ಲಿ ಹೊಸಬರೇ ಇರುವ ಚಿತ್ರವೊಂದಕ್ಕೆ ನಿಜಕ್ಕೂ ಇಷ್ಟೊಂದು ಹಣವನ್ನು ಖರ್ಚುಮಾಡುತ್ತಾರಾ? ಎಂಬ ಪ್ರಶ್ನೆ ಈಗಾಗಲೇ ನಿಮ್ಮಲ್ಲಿ ಸುಳಿದಾಡಿರಬಹುದು. ಆದರೆ ಓಂ ಪ್ರಕಾಶ್ ಇದಕ್ಕೆ ತಮ್ಮದೇ ಆದ ರೀತಿಯಲ್ಲಿ ಸಮರ್ಥನೆಯನ್ನು ನೀಡುತ್ತಾರೆ. ಚಿತ್ರದ ಒಂದು ಚೇಸಿಂಗ್ ದೃಶ್ಯಕ್ಕೇ ಒಂದು ಕೋಟಿ ರೂ. ಖರ್ಚಾಗಿದೆಯಂತೆ, ಮತ್ತೊಂದು ಹೊಡೆದಾಟದ ದೃಶ್ಯಕ್ಕೆ ಸುಮಾರು ಒಂದೂವರೆ ಕೋಟಿ ರೂ. ಖರ್ಚಾಗಿದೆಯಂತೆ. ಹೀಗಿರುವಾಗ ಚಿತ್ರದ ಒಟ್ಟಾರೆ ಬಜೆಟ್‌ನಲ್ಲಿ ಹೆಚ್ಚಳವಾಗಲು ಸಾಧ್ಯವಿದೆ ಎಂಬುದು ಅವರ ವಿವರಣೆ.
ಕೆಲ ವರ್ಷಗಳ ಹಿಂದೆ ಉಗ್ರಗಾಮಿಗಳು ಪುರುಲಿಯಾ ಎಂಬಲ್ಲಿ ಶಸ್ತ್ರಾಸ್ತ್ರಗಳನ್ನು ಇಳಿಸಿದ್ದ ಸುದ್ದಿ ನಿಮಗೆ ನೆನಪಿರಬಹುದು. ಈ ಘಟನೆಯನ್ನು ಆಧಾರವಾಗಿಟ್ಟುಕೊಂಡು 'ಎ.ಕೆ. 56' ಚಿತ್ರದ ಕಥೆಯನ್ನು ಹೆಣೆಯಲಾಗಿದೆಯಂತೆ. ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಇತ್ತೀಚೆಗಷ್ಟೇ ನಡೆಯಿತು.
ಸಂಗೀತ ನಿದೇರ್ಶಕ ಅಭಿಮನ್, ಸಾ.ರಾ.ಗೋವಿಂದು, ಕೆ.ಸಿ.ಎನ್.ಚಂದ್ರು, ನಿರ್ಮಾಪಕ ವೆಂಕಟೇಶ್ ಬಾಬು, ನಾಯಕಿಯರಾದ ಶಿರೀನ್ ಮತ್ತು ಸಂಜನಾ, ನಾಯಕ ಸಿದ್ಧಾಂತ್ ಮೊದಲಾದವರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಆದಿತ್ಯ, ದುನಿಯಾ ವಿಜಿ ಮತ್ತು ಪ್ರಣೀತಾ ಅಲ್ಲಿ ಹಾಜರಿದ್ದುದು ಸಮಾರಂಭದ ಕಳೆಯನ್ನು ಹೆಚ್ಚಿಸಿತ್ತು.