ಹಂಸಲೇಖರಿಂದ 'ಚಂದನವನ' ಎಂದು ಕರೆಸಿಕೊಂಡಿರುವ ಕನ್ನಡ ಚಿತ್ರರಂಗಕ್ಕೆ ಅಡಿಯಿಡುತ್ತಿರುವ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಒಂದು ರೀತಿಯಲ್ಲಿ ಇದು ಸ್ವಾಗತಾರ್ಹವೇ. ಇಂಥ ಹೊಸಬರೇ ತುಂಬಿಕೊಂಡಿರುವ 'ಬಣ್ಣ ಬಣ್ಣದ ಲೋಕ' ಎಂಬ ಚಿತ್ರವು ಈ ತಿಂಗಳ 22ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ತಿಳಿದುಬಂದಿದೆ.
ಸಿ.ಕೆ.ಎಂಟರ್‌ಟೈನರ್ಸ್ ಲಾಂಛನದ ಅಡಿಯಲ್ಲಿ ಡಿ.ಸುರೇಶ್ ಗೌಡ ಅರ್ಪಿಸುತ್ತಿರುವ ಈ ಚಿತ್ರವನ್ನು ಸಿ.ಕೃಷ್ಣಪ್ಪ ನಿರ್ಮಿಸಿದ್ದಾರೆ. ಈ ಚಿತ್ರದ ಪ್ರಚಾರ ಸಾಮಗ್ರಿಗಳನ್ನು ನೋಡುತ್ತಿದ್ದರೆ, ಹೊರಗೆ ರಂಗುರಂಗಾಗಿ ಕಾಣಿಸುವ ಚಿತ್ರರಂಗವು ವಾಸ್ತವದಲ್ಲಿ ಹೇಗಿರುತ್ತದೆ ಎಂಬುದನ್ನು ಬಿಂಬಿಸಲು ಹೊರಟಂತೆ ತೋರುತ್ತದೆ.
ಈ ಚಿತ್ರದ ಸಹ-ನಿರ್ಮಾಣದ ಹೊಣೆಗಾರಿಕೆಯನ್ನು ಮೇಘನಾ ಗೌಡ ಹೊತ್ತುಕೊಂಡಿದ್ದಾರೆ. ಎಂ.ಡಿ.ರಾಮ್‌ಪ್ರಸಾದ್ ಈ ಚಿತ್ರದ ನಿರ್ದೇಶಕರು. ಕಥೆ-ಚಿತ್ರಕಥೆ-ಸಂಭಾಷಣೆಯೂ ಇವರದ್ದೇ. ಬಸವರಾಜ ಅರಸ್ ಸಂಕಲನ, ವಿ.ಚಂದ್ರಶೇಖರ್ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಹರ್ಷ ಎಂಬಾತ ನಾಯಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಚಿತ್ರತಂಡ ನೀಡಿರುವ ಮಾಹಿತಿ.
ಹೊಸಬರೇ ತುಂಬಿಕೊಂಡಿರುವ ಚಿತ್ರ ಅಥವಾ ಪ್ರಚಾರವೇ ಇಲ್ಲದ ಚಿತ್ರ ಎಂಬ ಹಣೆಪಟ್ಟಿಯನ್ನು ನೀಡಿ ಯಾವ ಚಿತ್ರವನ್ನೂ ಉಪೇಕ್ಷಿಸಲಾಗುವುದಿಲ್ಲ ಎಂಬುದು ನಿಮಗೆ ಗೊತ್ತಿದೆ. ಪ್ರೇಕ್ಷಕ ಪ್ರಭುವಿಗೆ ಒಂದು ವೇಳೆ ಚಿತ್ರ ಇಷ್ಟವಾಯಿತೆಂದರೆ ಅವನು ಬೇರಾವ ಅಂಶಗಳ ಕಡೆಗೂ ಗಮನ ಹರಿಸುವುದಿಲ್ಲ. ಅವನಿಗೆ ಬೇಕಿರುವುದು ಮನರಂಜನೆ; ಅದನ್ನು ನೀಡಿದವರು ಚಿತ್ರರಂಗಕ್ಕೆ ಅಪರಿಚಿತರೇ ಆಗಿದ್ದರೂ ಪ್ರೇಕ್ಷಕ ಅವರನ್ನು ಸ್ವೀಕರಿಸುತ್ತಾನೆ.
ಈ ನಿರೀಕ್ಷೆಯನ್ನು 'ಬಣ್ಣ ಬಣ್ಣದ ಲೋಕ' ಚಿತ್ರವು ಈಡೇರಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.