'ಹರೇ ರಾಮ ಹರೇ ಕೃಷ್ಣ' ಎಂಬ ಹಿಂದಿ ಚಿತ್ರ ಎಪ್ಪತ್ತರ ದಶಕದ ಸುಮಾರಿಗೆ ದೇಶಾದ್ಯಂತ ಒಂದು ಸಂಚಲನೆಯನ್ನೇ ಸೃಷ್ಟಿಸಿತ್ತು. ಆ ಚಿತ್ರದಲ್ಲಿ ನಟಿಸಿದ್ದ ಜೀನತ್ ಅಮಾನ್ ಪಡ್ಡೆ ಹುಡುಗರ ಕಣ್ಮಣಿಯಾಗಿದ್ದರೆ, 'ದಂ ಮಾರೋ ದಂ' ಎಂಬ ಹಾಡು ಎಲ್ಲರ ತುಟಿಯಂಚಿನಲ್ಲಿ ನಲಿಯುತ್ತಿದ್ದ ಹಾಡಾಗಿತ್ತು.
ಈಗ ಅದೇ ಹೆಸರಿನ ಕನ್ನಡ ಚಿತ್ರವೊಂದು ಸಂಪೂರ್ಣಗೊಂಡು ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ. 'ಶಂಭು', 'ಮಿಂಚಿನ ಓಟ', 'ಪ್ರೀತಿಗಾಗಿ' ಇವೇ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದ ಮುರಳಿ ಈ ಚಿತ್ರದ ನಾಯಕ ನಟ. ಹಲವು ವೈಫಲ್ಯಗಳ ನಂತರ ಮತ್ತೊಮ್ಮೆ ಅಖಾಡಕ್ಕೆ ಇಳಿದಿರುವ ಮುರಳಿಗೆ ಈ ಚಿತ್ರ ಯಶಸ್ಸನ್ನು ತಂದುಕೊಡುವುದೇ ಎಂಬುದನ್ನು ಕಾದುನೋಡಬೇಕಿದೆ.
ಈ ಚಿತ್ರದ ನಾಯಕಿ ಪೂಜಾಗಾಂಧಿ. ಇವರ ಕೆರಿಯರ್ ಗ್ರಾಫ್ ಕೂಡಾ ಮೊದಲಿನಂತಿಲ್ಲ. ಹೀಗಾಗಿ ಈ ಚಿತ್ರದ ಯಶಸ್ಸು ಈಕೆಗೂ ಅನಿವಾರ್ಯ ಎನ್ನಬಹುದು. ಚಿತ್ರದ ಉಳಿದ ತಾರಾಗಣದಲ್ಲಿ ಮೈಕೋ ನಾಗರಾಜ್, ರೂಪಶ್ರೀ, ರಮೇಶ್ ಭಟ್, ಪದ್ಮಾವಾಸಂತಿ, ಅಚ್ಯುತ್ ಕುಮಾರ್ ಮೊದಲಾದವರಿದ್ದಾರೆ.
ಅಶೋಕ್ ಈ ಚಿತ್ರದ ನಿರ್ದೇಶಕರು. ಕಥೆ-ಚಿತ್ರಕಥೆ-ಸಂಭಾಷಣೆಯೂ ಇವರದ್ದೇ ಅಂತೆ. ಹಂಸಲೇಖಾ ಬರೆದಿರುವ ಹಾಡುಗಳಿಗೆ ಇಳಯರಾಜಾರವರು ಸಂಗೀತ ನೀಡಿರುವುದು ಮತ್ತೊಂದು ವಿಶೇಷ. ಪಿ.ಕೆ.ಎಚ್.ದಾಸ್ ಛಾಯಾಗ್ರಹಣ ಮತ್ತು ಶಶಿಕುಮಾರ್ ಸಂಕಲನವಿರುವ ಈ ಚಿತ್ರ ಮಾಸಾಂತ್ಯದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.