ಸಿನಿಮಾರಂಗವೆಂದರೆ ಉಪೇಕ್ಷೆಯಿರುವವರನ್ನು ಒಮ್ಮೆ ಭೇಟಿಯಾಗಿ, 'ನಿಮ್ಮ ಅಭಿಪ್ರಾಯದಲ್ಲಿ ಸಿನಿಮಾ ಅಂದ್ರೇ.....' ಅಂತ ಮಾತನ್ನು ಪ್ರಾರಂಭಿಸಿ ನೋಡಿ; ನಿಮ್ಮ ಮಾತು ಮುಗಿಯುವುದಕ್ಕೆ ಮುಂಚೆಯೇ ಅವರು 'ಏ ಬಿಡಯ್ಯಾ, ಅದು ಶೋಕಿಲಾಲರ ಪ್ರಪಂಚ....' ಎಂಬ ವರಸೆಯ ಮಾತುಗಳನ್ನು ಶುರುವಿಟ್ಟುಕೊಳ್ಳುತ್ತಾರೆ. ಇದಕ್ಕಿರುವ ಹಲವು ಕಾರಣಗಳ ಪೈಕಿ ಈ ರಂಗದ ಕುರಿತು ಕೆಲವರಿಗಿರುವ ತಪ್ಪು ಕಲ್ಪನೆಯೂ ಸೇರಿಕೊಂಡಿದೆ ಎಂದು ಹೇಳಬಹುದು, ಇರಲಿ.
ಶೋಕಿಯ ಅಥವಾ ಶೋಕಿಲಾಲರ ವಿಚಾರ ಇಲ್ಲೇಕೆ ಬಂತೆಂದರೆ, 'ಶೋಕಿ' ಎಂಬ ಹೆಸರಿನ ಚಿತ್ರವೊಂದು ಸೆಟ್ಟೇರಿದ್ದು ಅದರ ಚಿತ್ರೀಕರಣವು ನಗರದ ಸುತ್ತಮುತ್ತ ಬಿರುಸಿನಿಂದ ಸಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಬಸವನಗುಡಿಯ ಕೆ.ಆರ್.ರಸ್ತೆಯ ಮಗ್ಗುಲಲ್ಲಿರುವ ಸಿನಿಮಾ/ಕಿರುತೆರೆಯ 'ಷೂಟಿಂಗ್-ಮನೆ' ಎಂದೇ ಹೆಸರಾದ ಮನೆಯಲ್ಲಿ ಚಿತ್ರದ ಚಿತ್ರೀಕರಣ ಸಾಗುತ್ತಿದ್ದಾಗ ಅದರ ಮುಂಭಾಗದಲ್ಲಿ ಜನಜಂಗುಳಿಯೇ ತುಂಬಿಹೋಗಿತ್ತು. ಅಂದು ಅನೀಶ್, ಶಂಕರ್ ಅಶ್ವಥ್ ಹಾಗೂ ಅಂಬುಜಾರವರು ಚಿತ್ರೀಕರಣದಲ್ಲಿದ್ದುದರಿಂದ ಅವರನ್ನು ನೋಡಲು ಅಭಿಮಾನಿಗಳು ಸೇರಿದ್ದು ಈ ದಟ್ಟಣೆಗೆ ಕಾರಣವಾಗಿತ್ತು.
ಅಶೋಕ್ ರಾಜ್ ಮತ್ತು ಭರತ್ ಪಾಲೂರು ಎಂಬಿಬ್ಬರು ಏಸ್ ವಿಷನ್ ಮೂವೀಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಶಂಕರ್ ನಿರ್ದೇಶಿಸುತ್ತಿದ್ದಾರೆ. ಕಾರ್ತಿಕ್-ಮಂಜು ಜೋಡಿಯು ಈ ಚಿತ್ರದ ಸಹ-ನಿರ್ದೇಶನದ ಹೊಣೆಹೊತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ 'ಕೃಷ್ಣನ್ ಮ್ಯಾರೇಜ್ ಸ್ಟೋರಿ' ಚಿತ್ರದ 'ಸಾಂಗೀತಕ ಯಶಸ್ಸಿನ' ಸಂಭ್ರಮದಲ್ಲಿರುವ ವಿ.ಶ್ರೀಧರ್ ಈ ಚಿತ್ರದ ಸಂಗೀತ ನಿರ್ದೇಶಕರು.
ಚಿತ್ರದ ಉಳಿದ ತಾರಾಗಣದಲ್ಲಿ ನಿಧಿ ಸುಬ್ಬಯ್ಯ, ರಂಗಾಯಣ ರಘು, ಮಾಳವಿಕ, ಎಂ.ಎನ್.ವೆಂಕಟೇಶ್, ಚಿರಂತ್, ದಿಲೀಪ್ ರಾಜ್, ರಂಗಾಯಣ ರಘು, ನೀನಾಸಂ ಅಶ್ವಥ್, ಅರುಣ್ ಸಾಗರ್ ಸೇರಿದ್ದಾರೆ. 'ಶೋಕಿ' ಚಿತ್ರವು ಚಿತ್ರರಂಗದ ಕುರಿತಾಗಿ ಜನರಲ್ಲಿ ಮನೆಮಾಡಿರುವ ಅಭಿಪ್ರಾಯವನ್ನು ದೂರಮಾಡುವುದೇ ಇಲ್ಲವೇ ಎಂಬುದನ್ನು ಕಾದುನೋಡಬೇಕು. ಚಿತ್ರಕ್ಕೆ ಶುಭ ಹಾರೈಸೋಣ.