ದುನಿಯಾ ವಿಜಯ್ ಮತ್ತು ಪ್ರಣೀತಾ ಅಭಿನಯದ 'ಜರಾಸಂಧ' ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಗಂಗಾಧರ್ ಮತ್ತು ಬಸವರಾಜ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಶಶಾಂಕ್ ನಿರ್ದೇಶಿಸುತ್ತಿದ್ದಾರೆ. ಕಥೆ ಮತ್ತು ಚಿತ್ರಕಥೆಯೂ ನಿರ್ದೇಶಕರದ್ದೇ.
ಚಿತ್ರದ ಚಿತ್ರೀಕರಣವು ಸಂಪೂರ್ಣಗೊಳ್ಳುವ ಹಂತವನ್ನು ಮುಟ್ಟಿದ್ದರೂ ಸಹ ಚಿತ್ರವನ್ನು ಮತ್ತಷ್ಟು ಆಕರ್ಷಕವಾಗಿಸುವ ದೃಷ್ಟಿಯಿಂದ ವಿಶೇಷ ಪರಿಣಾಮದ ಸ್ಟಂಟ್ ದೃಶ್ಯಗಳನ್ನು ಸೇರಿಸಲು ಹಾಗೂ ಹಾಡುಗಳನ್ನು ಅದ್ದೂರಿಯಿಂದ ಚಿತ್ರಿಸಲು ಬಯಸಿರುವ ನಿರ್ಮಾಪಕರು ಅದಕ್ಕಾಗಿ ಹಣವನ್ನು ಖರ್ಚುಮಾಡಲು ಹಿಂದೆ-ಮುಂದೆ ನೋಡುತ್ತಿಲ್ಲ ಎಂದು ತಿಳಿದುಬಂದಿದೆ. ಇದರ ಅಂಗವಾಗಿ ವಿಜಯ್ ಮತ್ತು ಪ್ರಣೀತಾ ಅಭಿನಯದ ಗೀತೆಯೊಂದನ್ನು ಹೆಸರಘಟ್ಟದ ಬಳಿ ವಿಭಿನ್ನವಾಗಿ ಚಿತ್ರೀಕರಿಸಲಾಯಿತು.
ಇಷ್ಟೇ ಅಲ್ಲ, ನಾಯಕ ವಿಜಿ ಮತ್ತು ಒಂದಷ್ಟು ಥಾಯ್ ಫೈಟರ್‌ಗಳನ್ನು ಒಳಗೊಂಡಿದ್ದ ಹೊಡೆದಾಟದ ದೃಶ್ಯಗಳನ್ನು ಮೈಸೂರು ಲ್ಯಾಂಪ್ಸ್ ಕಾರ್ಖಾನೆಯಲ್ಲಿ ಇತ್ತೀಚೆಗಷ್ಟೇ ಚಿತ್ರೀಕರಿಸಲಾಯಿತು. ಸಾಹಸ ನಿರ್ದೇಶಕ ರವಿವರ್ಮ ಇದನ್ನು ನಿರ್ದೇಶಿಸಿದರು. ಇದು ಚಿತ್ರದ ಹೈಲೈಟ್ ಆಗುವುದರ ಜೊತೆಜೊತೆಗೆ, ಚಿತ್ರದ ಕಥೆಯು ಮುಂದುವರಿಯುವಲ್ಲಿನ ಒಂದು ಪ್ರಮುಖ ಅಂಶವಾಗಿಯೂ ಹೊರಹೊಮ್ಮುತ್ತದೆ ಎಂದು ಚಿತ್ರತಂಡ ತಿಳಿಸಿದೆ.
ನಿರ್ದೇಶಕ ಶಶಾಂಕ್‌ರವರು ಇದುವರೆಗೂ 'ಸಿಕ್ಸರ್', 'ಮೊಗ್ಗಿನ ಮನಸು' ಮತ್ತು 'ಕೃಷ್ಣನ್ ಲವ್ ಸ್ಟೋರಿ' ಚಿತ್ರಗಳನ್ನು ನಿರ್ದೇಶಿಸಿದ್ದು ಅವೆಲ್ಲವೂ ಸೂಪರ್‌ಹಿಟ್ ಎನಿಸಿಕೊಂಡಿವೆ. ಹೊಡೆದಾಟದ ಸನ್ನಿವೇಶಗಳನ್ನೊಳಗೊಂಡಿರುವ ಚಿತ್ರವನ್ನು ಇದೇ ಮೊದಲ ಬಾರಿಗೆ ನಿರ್ದೇಶಿಸುತ್ತಿರುವುದರಿಂದ ಹೆಚ್ಚಿನ ಆಸ್ಥೆಯನ್ನು ಅವರು ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. 'ಜರಾಸಂಧ'ನಿಗೆ ಜಯವಾಗಲಿ.