ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಮೌನಸಾಧಕ' ಬಿ.ಎ.ಮಧು ಚಿತ್ರಕಥೆ ಬರೆದಾಗ... (B.A.Madhu | Anna Thangi | Thavarige Ba Thangi | Karpoorada Gombe)
EVENT
ಚಿತ್ರಸಾಹಿತಿ ಬಿ.ಎ. ಮಧು ಎಂದರೆ ನಿಮಗೆ ಥಟ್ಟನೇ ಹೊಳೆಯದಿರಬಹುದು. ಆದರೆ 'ಬಾ ನನ್ನ ಪ್ರೀತಿಸು' ಚಿತ್ರದ ಕಥೆಗಾರ ಮಧು ಎಂದರೆ ತಕ್ಷಣ ಗೊತ್ತಾಗುತ್ತದೆ. ಕಾರಣ ಸುಮಾರು ಒಂದೂವರೆ ದಶಕಗಳ ಹಿಂದೆ ಅವರು ಚಿತ್ರರಂಗವನ್ನು ಪ್ರವೇಶಿಸಿದ್ದು ಈ ಚಿತ್ರದ ಮ‌ೂಲಕವೇ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮ‌ೂಲತಃ ಕಥೆಗಾರರಾದ ಬಿ.ಎ.ಮಧುರವರ ಕಥೆಯೊಂದನ್ನು ನಿರ್ದೇಶಕ ಸಿದ್ದಲಿಂಗಯ್ಯನವರು ಮೆಚ್ಚಿಕೊಂಡು ತಮ್ಮ ಚಿತ್ರಕ್ಕಾಗಿ ಅದನ್ನು ಆರಿಸಿಕೊಂಡರು. ಆದರೆ ಚಿತ್ರದ ಸಂಭಾಷಣೆ ಬರೆಯುವ ಹೊಣೆಗಾರಿಕೆಯನ್ನೂ ಮಧುವಿಗೆ ಹೊರಿಸಿದಾಗ ಅಚ್ಚರಿಯಾಗುವ ಸರದಿ ಅವರದಾಗಿತ್ತು. ಈ ಚಿತ್ರವು ಯಶಸ್ಸು ಕಾಣುವುದರೊಂದಿಗೆ ಮಧುರವರ ಮೇಲೆ ಗಾಂಧಿನಗರದ ಗಮನ ಹರಿಯುವಂತಾಯಿತು.

ಹಾಗಂತ ಮಧು ಗಾಂಧಿನಗರದಲ್ಲೇ ಓಡಾಡಿಕೊಂಡಿರುವುದಿಲ್ಲ ಅಥವಾ ಚಿತ್ರಕಥೆ-ಸಂಭಾಷಣೆಯ ರಚನೆಗೆಂದು ಗಾಂಧಿನಗರದ ಹೊಟೇಲಿನಲ್ಲಿ ರೂಮು ಹಾಕಿಸಿಕೊಡಿ ಎಂದು ಕೇಳುವುದಿಲ್ಲ. ಚಿತ್ರಕ್ಕೆ ಸಂಬಂಧಿಸಿದಂತೆ ನಿರ್ದೇಶಕರೊಂದಿಗೆ ನಡೆಯುವ ಆರಂಭಿಕ ಚರ್ಚೆಯ ಅವಧಿಯಲ್ಲಿ ಮಾತ್ರವೇ ಅವರು ಬೆಂಗಳೂರಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಉಳಿದಂತೆ ಅವರ ಸಂಭಾಷಣೆಯ ಸೃಷ್ಟಿಕಾರ್ಯ ನಡೆಯುವುದು ಮೈಸೂರಿನಲ್ಲೇ. ಇದು ಅವರ ವಿಶೇಷತೆ.

'ಅಣ್ಣ ತಂಗಿ', 'ತವರಿಗೆ ಬಾ ತಂಗಿ', 'ಕರ್ಪೂರದ ಗೊಂಬೆ', 'ಕೋಟಿಗೊಬ್ಬ', 'ಕೌರವ' ಹೀಗೆ ಮಧುರವರ ಸಂಭಾಷಣೆಯನ್ನು ಒಳಗೊಂಡಿರುವ ಚಿತ್ರಗಳ ಸಂಖ್ಯೆ 125ನ್ನೂ ಮೀರಿದೆ ಎಂದರೆ 'ಅಬ್ಬಾ! ಇವರೆಂಥಾ 'ಮೌನಸಾಧಕ' ಎಂದು ಹೆಮ್ಮೆಯಾಗುತ್ತದೆ. ಪ್ರಸ್ತುತ ಇವರು 'ಅವತಾರ' ಚಿತ್ರಕ್ಕೆಂದು ತಮ್ಮ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ.

ಸರಿಸುಮಾರು 30 ಕಾದಂಬರಿಗಳನ್ನು ಬರೆದಿರುವ ಮಧು, ಚಿ.ಉದಯಶಂಕರ್‌, ಆರ್‌.ಎನ್‌.ಜಯಗೋಪಾಲ್‌, ಕುಣಿಗಲ್‌ ನಾಗಭೂಷಣ, ವಿಜಯನಾರಸಿಂಹ ಮೊದಲಾದವರು ಅಲಂಕರಿಸಿದ್ದ ಸಂಭಾಷಣಾ-ಕರ್ತೃವಿನ ಜಾಗದಲ್ಲಿ ಮುಂದುವರಿಯುತ್ತಿರುವುದನ್ನು ನೋಡಿದಾಗ ಖುಷಿಯಾಗುತ್ತದೆ. ಮಾತೆತ್ತಿದರೆ ಪ್ರಚಾರದ ಮೊರೆಹೋಗುವ ಚಿತ್ರರಂಗದ ಪ್ರಭೃತಿಗಳ ನಡುವೆ ಇವರೊಬ್ಬ ಅಪರೂಪದ ವ್ಯಕ್ತಿ ಎನ್ನಬಹುದು.

ಮಧುರವರಿಗೆ ಶುಭ ಹಾರೈಸೋಣ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ