ಕಳೆದ ವಾರವಷ್ಟೇ ಬಿಡುಗಡೆಯಾದ 'ಬಣ್ಣ ಬಣ್ಣದ ಲೋಕ' ಚಿತ್ರದಲ್ಲಿ ಕಾಣಿಸಿಕೊಂಡಿರುವ ಹಲವು ಹೊಸ ಪ್ರತಿಭೆಗಳಲ್ಲಿ ಮೇಘನಾ ಗೌಡ ಎಂಬಾಕೆಯೂ ಸೇರಿದ್ದಾರೆ. ಈಕೆ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವುದು ಮಾತ್ರವೇ ಅಲ್ಲ, ಚಿತ್ರದ ಸಹ-ನಿರ್ಮಾಪಕಿ ಕೂಡಾ.
ಐ.ಎ.ಎಸ್. ಅಧಿಕಾರಿಯಾಗಬೇಕೆಂಬ ಹಂಬಲವಿದ್ದ ಮೇಘನಾಗೆ ಚಿತ್ರರಂಗಕ್ಕೆ ಸೇರುವ ಒಲವೇನೂ ಇರಲಿಲ್ಲವಂತೆ. ಆದರೆ ಬೆಂಗಳೂರಿನ ಬಡಾವಣೆಯೊಂದರಲ್ಲಿ ನಡೆಯುತ್ತಿದ್ದ ಚಿತ್ರವೊಂದರ ಚಿತ್ರೀಕರಣವನ್ನು ಸುಮ್ಮನೇ ಕುತೂಹಲಕ್ಕೆಂದು ನೋಡುತ್ತಾ ನಿಂತವರಿಗೆ 'ಫಿಲಂನಲ್ಲಿ ಆಕ್ಟ್ ಮಾಡ್ತೀರಾ?' ಎಂದು ಚಿತ್ರ ನಿರ್ದೇಶಕರೊಬ್ಬರು ಕೇಳಿದರೆ ಹೇಗಾಗಬೇಡ?
ತಮಗೆ ನಟನೆಯಲ್ಲಿ ಆಸಕ್ತಿಯಿಲ್ಲ ಎಂದು ಹೇಳಿದ ನಂತರವೂ ಮತ್ತೆ ಮತ್ತೆ ಕರೆ ಬರಲು ಶುರುವಾಗಿದ್ದಕ್ಕೆ 'ಯಾಕೆ ಒಮ್ಮೆ ಪ್ರಯತ್ನಿಸಬಾರದು?' ಎಂಬ ಅಭಿಪ್ರಾಯ ಅವರಲ್ಲಿ ಮೂಡಿತಂತೆ. ಆಗ ನಡೆಯಿತು ಚಿತ್ರರಂಗ ಪ್ರವೇಶ. ತಮಾಷೆಯೆಂದರೆ ಅವರ ಅಭಿನಯದ ಮೊದಲ ಚಿತ್ರವಿನ್ನೂ ಬಿಡುಗಡೆಯಾಗಿಲ್ಲ. 'ಬಣ್ಣ ಬಣ್ಣದ ಲೋಕ' ಮೇಘನಾ ಗೌಡರವರ ಎರಡನೇ ಚಿತ್ರ. ಈ ಚಿತ್ರದ ಪಾತ್ರನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಚಿತ್ರರಂಗದಿಂದ ಆಫರ್‌ಗಳ ಸುರಿಮಳೆಯಾದರೆ ಅವರು ಐ.ಎ.ಎಸ್. ಬಯಕೆಯನ್ನು ಪಕ್ಕಕ್ಕಿಟ್ಟು ಈ 'ಬಣ್ಣ ಬಣ್ಣದ ಲೋಕ'ದಲ್ಲೇ ಮುಂದುವರಿಯಬಹುದೇನೋ?
ಕನ್ನಡದಲ್ಲಿ ನಾಯಕಿಯರ ಕೊರತೆಯಿದೆ ಎಂದು ಹೇಳಿಕೊಳ್ಳುವ ಪರಿಸ್ಥಿತಿ ಈಗಿಲ್ಲ. ಸೌಂದರ್ಯ ಮತ್ತು ಪ್ರತಿಭೆ ಮೇಳೈಸಿರುವ ನಟೀಮಣಿಯರಿಗೆ ಇಲ್ಲಿ ಪ್ರಾಶಸ್ತ್ಯ ಇದ್ದೇ ಇದೆ. ಅದನ್ನು ಸಮರ್ಥವಾಗಿ ಬಳಸಿಕೊಂಡು ಜನಮೆಚ್ಚುವ ಪಾತ್ರಗಳಲ್ಲಿ ಅಭಿನಯಿಸಿದರೆ ಸುದೀರ್ಘ ಅವಧಿಯವರೆಗೆ ಈ ರಂಗದಲ್ಲಿ ಮುಂದುವರಿಯಲು ಸಾಧ್ಯವಿದೆ. ಮೇಘನಾ ಗೌಡ ಈ ನಿಟ್ಟಿನಲ್ಲಿ ಸರಿಯಾದ ನಿರ್ಧಾರವನ್ನು ಕೈಗೊಳ್ಳಲಿ ಎಂಬುದೇ ನಮ್ಮ ಹಿತೋಕ್ತಿ.