ಬಹುತಾರಾಗಣದ ಮತ್ತು ಬಹುನಿರೀಕ್ಷಿತ ಚಿತ್ರವೆನಿಸಿರುವ 'ಪಂಚಾಮೃತ' ಅತಿಶೀಘ್ರದಲ್ಲಿಯೇ ತೆರೆಕಾಣಲಿದೆ ಎಂದು ಚಿತ್ರತಂಡವು ತಿಳಿಸಿದೆ. ಪುಟ್ಟಣ್ಣ ಕಣಗಾಲರು ಈ ಹಿಂದೆ ಮೂರು ಕಥೆಗಳನ್ನು ಒಳಗೊಂಡಿದ್ದ 'ಕಥಾಸಂಗಮ' ಎಂಬ ಚಿತ್ರವನ್ನು ನಿರ್ದೇಶಿಸಿದ್ದರು.
ಅವರ ಹಾದಿಯಲ್ಲೇ ಸಾಗಿದ 'ಪಂಚಾಮೃತ' ಚಿತ್ರದ ನಿರ್ದೇಶಕ ನಾಗೇಶ್ ಈ ಚಿತ್ರಕ್ಕೆಂದು ಆರಂಭದಲ್ಲಿ ಐದು ಕಥೆಗಳನ್ನು ಆರಿಸಿಕೊಂಡಿದ್ದರು, ನಂತರ ಮತ್ತೊಂದು ರೋಚಕ ಕಥೆಯ ಸೇರ್ಪಡೆಯಾಗಿದ್ದು ವಿಶೇಷ. ಹೀಗೆ ಆರು ವಿಭಿನ್ನ ಕತೆಗಳನ್ನು ಬೆಳ್ಳಿತೆರೆಯಲ್ಲಿ ನೋಡುವುದು ಒಂದು ಹೊಸತಾದ ಅನುಭವವನ್ನು ಕಟ್ಟಿಕೊಡಲಿದ್ದು ಈ ಚಿತ್ರಗುಚ್ಛದಲ್ಲಿ ಅಭಿನಯಿಸಿರುವ ಕಲಾವಿದರೆಲ್ಲರೂ ಅದ್ಭುತ ಅಭಿನಯವನ್ನು ನೀಡಿದ್ದಾರೆ ಎಂದು ಚಿತ್ರತಂಡವು ತಿಳಿಸಿದೆ.
ಸದ್ಯದ ಸೆನ್ಸೇಷನ್ ಎನಿಸಿರುವ ಶ್ರೀನಗರ ಕಿಟ್ಟಿ, 'ಸವಾರಿ', 'ಪ್ಯಾರಿಸ್ ಪ್ರಣಯ' ಚಿತ್ರಗಳ ಖ್ಯಾತಿಯ ರಘು ಮುಖರ್ಜಿ, ರಮ್ಯಾ ಬಾರ್ನಾ, ದಿಲೀಪ್ ರಾಜ್, ಡೈನಮಿಕ್ ಸ್ಟಾರ್ ದೇವರಾಜ್, ಪೂಜಾ ಗಾಂಧಿ, ನೀತೂ, ರವಿಶಂಕರ್, ನೀನಾಸಂ ಅಚ್ಯುತಕುಮಾರ್ ಹೀಗೆ ಪ್ರತಿಭಾವಂತರ ದಂಡೇ ಈ ಚಿತ್ರದಲ್ಲಿದೆ.
ಗವಿಪುರ ಮರಿಸ್ವಾಮಿ ಮತ್ತು ಕೋಕಿಲಾರವರು ನಿರ್ಮಿಸಿರುವ ಈ ಚಿತ್ರಕ್ಕೆ ಆಶ್ಲೆ-ಅಭಿಲಾಷ್ ಸಂಗೀತ ನೀಡಿದ್ದಾರೆ. ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಮತ್ತು ಇಸ್ಮಾಯಿಲ್‌ರವರ ಕಲಾ ನಿರ್ದೇಶನ ಚಿತ್ರಕ್ಕಿದೆ. ಈಗಾಗಲೇ ಚಿತ್ರದ ಹಾಡುಗಳು ಚಿತ್ರರಸಿಕರಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟಿಸಿವೆ. ಈ ನಿರೀಕ್ಷೆಯು ಎಷ್ಟರಮಟ್ಟಿಗೆ ಚಿತ್ರದ ಯಶಸ್ಸಿಗೆ ಕಾರಣವಾಗುತ್ತದೆ ಎಂಬುದನ್ನು ಕಾದುನೋಡಬೇಕು.
ವಿಭಿನ್ನ ಪ್ರಯತ್ನವನ್ನು ಮಾಡಿರುವ ನಿರ್ದೇಶಕ ನಾಗೇಶ್‌ರವರ ಪ್ರಯತ್ನಕ್ಕೆ ಜಯ ಸಿಗಲಿ.