ಆಟೋ ಚಾಲಕರ ಕಥೆಯನ್ನು ಒಳಗೊಂಡಿದ್ದ 'ಆಟೋರಾಜ', 'ಆಟೋ ಶಂಕರ್' ಇವೇ ಮೊದಲಾದ ಚಿತ್ರಗಳು ಬೆಳ್ಳಿತೆರೆಯಲ್ಲಿ ಮಿಂಚಿದ್ದು ನಿಮಗೆ ಗೊತ್ತಿರಬಹುದು. ಇವುಗಳ ಪಟ್ಟಿಗೆ ಸೇರಲಿರುವ 'ಸಾರಥಿ' ಚಿತ್ರದ ಧ್ವನಿಸುರಳಿಯನ್ನು ನಾಯಕ ದರ್ಶನ್ ಸ್ವತಃ ಚಾಲಕನ ಸಮವಸ್ತ್ರವನ್ನು ತೊಟ್ಟು, ಆಟೋರಿಕ್ಷಾಗಳ ಹಿಂಡಿನ ಸಮ್ಮುಖದಲ್ಲಿ ಬಿಡುಗಡೆ ಮಾಡಿದ ಸುದ್ದಿಯನ್ನು ಈ ಅಂಕಣದಲ್ಲಿ ನೀವು ಓದಿರುವಿರಿ.
ಸಮಾಜಸೇವೆಯನ್ನು ಬದುಕಾಗಿಸಿಕೊಂಡಿರುವ ಆಟೋ ಚಾಲಕರು ತಮ್ಮ ಮೇಲಿಟ್ಟಿರುವ ಅಭಿಮಾನಕ್ಕೆ ವಂದಿಸುವ ಸಲುವಾಗಿ ಸದರಿ 'ಸಾರಥಿ' ಚಿತ್ರದಲ್ಲಿ ತಾವು ನಟಿಸುತ್ತಿರುವುದಾಗಿ ದರ್ಶನ್ ಹೇಳಿಕೊಂಡಿದ್ದು ಮೊನ್ನೆಮೊನ್ನೆಯಷ್ಟೇ ಎಂದುಕೊಳ್ಳುತ್ತಿರುವಾಗಲೇ ಈ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿರುವುದು ಸೋಜಿಗದ ಸಂಗತಿ. ಅಷ್ಟೇ ಅಲ್ಲ, ಚಿತ್ರ ನಿರ್ಮಾಣಕ್ಕೆ ಬೇಕಿರುವ ಮೂಲ ಸೌಕರ್ಯಗಳು ಎಷ್ಟು ಸುಲಭವಾಗಿ ಲಭ್ಯವಿವೆಯಲ್ಲವೇ ಎಂಬುದು ಇದರಿಂದ ಗೊತ್ತಾಗುತ್ತದೆ.
ಕೆ.ವಿ.ಸತ್ಯಪ್ರಕಾಶ್ ನಿರ್ಮಿಸಿರುವ ಈ ಚಿತ್ರದ ನಿರ್ದೇಶಕರು ದಿನಕರ ತೂಗುದೀಪ. ಇವರು ದರ್ಶನ್‌ರವರ ಸೋದರ ಮತ್ತು 'ಜೊತೆ ಜೊತೆಯಲಿ', 'ನವಗ್ರಹ' ಚಿತ್ರಗಳ ನಿರ್ದೇಶಕ ಎಂಬುದು ನಿಮಗೆ ಗೊತ್ತಿರುವ ವಿಷಯವೇ. ವಿ.ಹರಿಕೃಷ್ಣ ಸಂಗೀತ, ರವಿವರ್ಮ ಮತ್ತು ಪಳನಿರಾಜ್ ಸಾಹಸ, ಕೆ.ಕೃಷ್ಣಕುಮಾರ್ ಛಾಯಾಗ್ರಹಣ, ಮದನ್ -ಹರಿಣಿ, ಹರ್ಷ ಮತ್ತು ರಾಮು ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಕಥೆಯನ್ನು ದಿನಕರ್ ತೂಗುದೀಪ ಮತ್ತು ಚಿಂತನ್ ರಚಿಸಿದ್ದಾರಂತೆ.
ಚಿತ್ರದ ಉಳಿದ ತಾರಾಬಳಗದಲ್ಲಿ ದೀಪಾ ಸನ್ನಿಧಿ, ಶರತ್ ಲೋಹಿತಾಶ್ವ, ರಂಗಾಯಣ ರಘು, ಕೋಟೆ ಪ್ರಭಾಕರ್, ಅಜಯ್, ಸಿತಾರ, ಬುಲೆಟ್ ಪ್ರಕಾಶ್, ಶರತ್ ಕುಮಾರ್, ಲೋಹಿತಾಶ್ವ ಮೊದಲಾದವರಿದ್ದಾರೆ. 'ಸಾರಥಿ' ಆದಷ್ಟು ಬೇಗ ಬಿಡುಗಡೆಯಾಗಿ ದರ್ಶನ್ ಅಭಿಮಾನಿಗಳನ್ನು ರಂಜಿಸುವಂತಾಗಲಿ.