ಜಗ್ಗೇಶ್ ನಾಯಕತ್ವದಲ್ಲಿ 'ಬಾಡಿಗಾರ್ಡ್' ಎಂಬ ಚಿತ್ರವೇನೋ ಸೆಟ್ಟೇರಿದೆ. ಡೈಸಿ ಷಾ ಮತ್ತು ಸ್ಫೂರ್ತಿ ಎಂಬ ನಾಯಕಿಯರೂ ಜಗ್ಗೇಶ್‌ಗೆ ನಾಯಕಿಯರಾಗಿ ನಟಿಸುತ್ತಿದ್ದಾರೆ. ಆದರೆ ಈ ಚಿತ್ರ ಎಷ್ಟು ಕಡೆಯಲ್ಲಿ ಸುತ್ತಿಕೊಂಡು ಬಂದಿದೆಯೆಂಬುದು ನಿಮಗೆ ಗೊತ್ತೇ? ಅಥವಾ ಸರಳವಾಗಿ ಹೇಳಬೇಕೆಂದರೆ ಇದು ಎಷ್ಟು ಭಾಷೆಯಲ್ಲಿ ಈಗಾಗಲೇ ರಿಮೇಕ್ ಆಗಿದೆಯೆಂಬುದು ನಿಮಗೆ ಗೊತ್ತೇ?
'ಬಾಡಿಗಾರ್ಡ್' ಚಿತ್ರ ಮೊದಲಿಗೆ ಕಾಣಿಸಿಕೊಂಡಿದ್ದು ಮಲಯಾಳಂನಲ್ಲಿ. ನಯನತಾರಾ ಮತ್ತು ದಿಲೀಪ್ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಈ ಚಿತ್ರವನ್ನು ಸಿದ್ದೀಕ್ ಎಂಬಾತ ನಿರ್ದೇಶಿಸಿದ್ದರು. ಇದು ಅಲ್ಲಿ ಸೂಪರ್‌ಹಿಟ್ ಆಗಿತ್ತಂತೆ. ಇದರ ಮೇಲೆ ತಮಿಳಿಗರ ಕಣ್ಣು ಬಿದ್ದು ಅವರು 'ಕಾವಲನ್' ಎಂಬ ಹೆಸರಿನಲ್ಲಿ ಇದನ್ನು ರಿಮೇಕಿಸಿಬಿಡುವುದೇ?!! ವಿಜಯ್ ಮತ್ತು ಆಸಿನ್ ಅಭಿನಯದ ಈ ಚಿತ್ರ ಅಲ್ಲೂ ಸೂಪರ್‌ಹಿಟ್!!
ನಂತರ ವಾಡಿಕೆಯಂತೆ ಇದು ಹಿಂದಿ ಮತ್ತು ತೆಲುಗಿನಲ್ಲೂ ಮರು ನಿರ್ಮಾಣಗೊಂಡಿತು. ಹಿಂದಿಯಲ್ಲಿ ಸಲ್ಮಾನ್‌ಖಾನ್ ಮತ್ತು ಕರೀನಾಕಪೂರ್ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡರೆ, ತೆಲುಗಿನಲ್ಲಿ ವೆಂಕಟೇಶ್ ಮತ್ತು ತ್ರಿಶಾ ಅಭಿನಯಿಸಿದರು. ಈಗ ಕನ್ನಡದ ಸರದಿ. ಪ್ರಭಾವೀ ವ್ಯಕ್ತಿಯ ಮಗಳ ಅಂಗರಕ್ಷಕನಾಗಿ ಬರುವಾತ ಅವಳನ್ನೇ ಬುಟ್ಟಿಗೆ ಹಾಕಿಕೊಳ್ಳುವ ಕಥೆಯನ್ನು ಹೊಂದಿರುವ ಈ ಚಿತ್ರ ಜಗ್ಗೇಶ್‌ಗೆ ಹೇಳಿಮಾಡಿಸಿದಂತಿದೆಯಂತೆ.
ಮೂರು ತಿಂಗಳ ಒಳಗಾಗಿ ಚಿತ್ರವನ್ನು ತೆರೆಗೆ ತರುವ ಇರಾದೆ ಜಗ್ಗೇಶ್‌ರವರದ್ದು. ಇದು ಅವರ ಹೋಂ ಪ್ರೊಡಕ್ಷನ್ ಚಿತ್ರ ಎಂಬುದಿಲ್ಲಿ ಗಮನಾರ್ಹ. ರಾಮ್ ನಾರಾಯಣ್, ಕವಿರಾಜ್ ಹಾಡುಗಳನ್ನು ಬರೆದಿದ್ದಾರೆ ಮತ್ತು ರಾಜೇಂದ್ರ ಕಾರಂತರು ಸಂಭಾಷಣೆಯನ್ನು ಬರೆದಿದ್ದಾರೆ. ಜಗ್ಗೇಶರ ಹಲವು ವರ್ಷಗಳ ಸ್ನೇಹಿತ ಟಿ.ಎ.ಆನಂದ್ ಈ ಚಿತ್ರದ ನಿರ್ದೇಶಕರು. ಎಲ್ಲಾ ಭಾಷೆಗಳಲ್ಲೂ ಸೂಪರ್‌ಹಿಟ್ ಆಗಿರುವ ಈ ಚಿತ್ರ ಕನ್ನಡದಲ್ಲಿ ಹೇಗೆ ರಾರಾಜಿಸಲಿದೆ ಎಂಬುದನ್ನು ನೋಡಲು ನೀವು ಹೆಚ್ಚೂಕಮ್ಮಿ ನವೆಂಬರ್‌ವರೆಗೂ ಕಾಯಬೇಕು.